ಮೀನುಗಾರರಿಗೆ ‘ಆದಾಯ ಶೂನ್ಯ ನವೀಕರಣ’

7

ಮೀನುಗಾರರಿಗೆ ‘ಆದಾಯ ಶೂನ್ಯ ನವೀಕರಣ’

Published:
Updated:
ಮೀನುಗಾರರಿಗೆ ‘ಆದಾಯ ಶೂನ್ಯ ನವೀಕರಣ’

ದಾವಣಗೆರೆ: ಈ ಬಾರಿಯ ಬರಗಾಲ ಸಕಲ ಜೀವಿಗಳನ್ನೂ ಸಂಕಷ್ಟಕ್ಕೆ ದೂಡಿದೆ. ಕೆರೆಗಳೆಲ್ಲ ಬತ್ತಿ ಹೋಗಿ ಸಕಲ ಜೀವಚರಗಳು ನಾಶವಾಗಿವೆ. ಕೆರೆಗಳಲ್ಲಿ ಮೀನು ಸಾಕಾಣಿಕೆ

ಗುತ್ತಿಗೆ ಹಿಡಿದವರೂ ಕಂಗಾಲಾಗಿ ಹೋಗಿದ್ದಾರೆ. ಬರಗಾಲದ ಸಂಕಷ್ಟ ಅರಿತ ಸರ್ಕಾರ ಮೀನು ಕೃಷಿಕರ ನೆರವಿಗೆ ಬಂದಿದೆ. 2017–18ನೇ ಸಾಲಿನಲ್ಲಿ ಕೆರೆ ಗುತ್ತಿಗೆದಾರರಿಗೆ ಆದಾಯ ಶೂನ್ಯ ನವೀಕರಣ ಯೋಜನೆ ಪ್ರಕಟಿಸಿದೆ.

ಇದೇ ಏಪ್ರಿಲ್‌ನಿಂದ ಜಾರಿಗೊಳಿಸಿದ್ದು, ಗುತ್ತಿಗೆದಾರರೂ ಆದ ಮೀನುಗಾರರು ಈ ವರ್ಷ ಯಾವುದೇ ನವೀಕರಣ ಶುಲ್ಕ ಕಟ್ಟಬೇಕಿಲ್ಲ. ಮೀನು ಸಾಕಾಣಿಕೆ ಗುತ್ತಿಗೆ ಈ ವರ್ಷ ಉಚಿತವಾಗಿ ಸಿಗಲಿದೆ. ಜಿಲ್ಲೆಯಲ್ಲಿ ಶುಲ್ಕ ವಿನಾಯ್ತಿಯ ಮೊತ್ತ ₹42 ಲಕ್ಷ.

ಮೀನುಗಾರರು ಈಗ ಕೂಲಿಕಾರರು!: ಕುಂದವಾಡ ಮೀನುಗಾರರ ಸಹಕಾರ ಸಂಘದ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಮೀನುಗಾರರಿದ್ದಾರೆ. ಇವರೆಲ್ಲರೂ ಕೂಲಿ ಹುಡುಕಿಕೊಂಡು ಈಗ ಊರೂರು ಸುತ್ತುತ್ತಿದ್ದಾರೆ. ಸಂಘ ಮೂರು ಕೆರೆಗಳನ್ನು ಗುತ್ತಿಗೆ ಪಡೆದುಕೊಂಡಿತ್ತು. ನಾಗನೂರು, ಕುಂದವಾಡ ಹಾಗೂ ದೊಡ್ಡಬಾತಿ ಕೆರೆ. ನಾಗನೂರು ಕೆರೆಯಲ್ಲಿ 1.75 ಲಕ್ಷ, ಕುಂದವಾಡದಲ್ಲಿ 3 ಲಕ್ಷ ಹಾಗೂ ದೊಡ್ಡಬಾತಿ ಕೆರೆಯಲ್ಲಿ 1.25 ಲಕ್ಷ ಮೀನು ಮರಿ ಬಿಡಲಾಗಿತ್ತು.

‘ಈ ಮೂರೂ ಕೆರೆಗಳಲ್ಲಿ ಮೀನು ಮರಿ ಬಿಟ್ಟು 9 ತಿಂಗಳು ಕಳೆದಿದೆ. ಈಗಾಗಲೇ ಒಮ್ಮೆ ಶಿಕಾರಿ ಮಾಡಬೇಕಿತ್ತು. ಆದರೆ, ನಾಗನೂರು, ದೊಡ್ಡಬಾತಿ ಕೆರೆಗಳಲ್ಲಿ ಒಂದು ತಿಂಗಳ ಹಿಂದೆಯೇ ನೀರು ಖಾಲಿಯಾಗಿದ್ದರಿಂದ ಮೀನುಗಳೆಲ್ಲ ಸತ್ತು ಹೋಗಿದ್ದವು. ಕುಂದವಾಡ ಕೆರೆ ಶೇ 70ರಷ್ಟು ಖಾಲಿಯಾಗಿದ್ದು, ಇಲ್ಲಿದ್ದ ಮೀನುಗಳೂ ಪಕ್ಷಿಗಳ ಪಾಲಾಗಿವೆ’ ಎಂಬ ನೋವು ಕುಂದವಾಡ ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ಸುರೇಶ್ ಅವರದ್ದು.

‘ಈ ಮೂರೂ ಕೆರೆಗಳ ನಿರ್ವಹಣೆ ವೆಚ್ಚ ₹5 ಲಕ್ಷ ಆಗಿದೆ. ಇದರಲ್ಲಿ ಶೇ 10ರಷ್ಟು ವೆಚ್ಚವೂ ಹಿಂತಿರುಗಿ ಬರುವುದಿಲ್ಲ. ಸರ್ಕಾರ ನವೀಕರಣ ಶುಲ್ಕವನ್ನು ಸಂಪೂರ್ಣ ಉಚಿತ ಮಾಡಿದೆ. ಇದು ಸ್ವಾಗತಾರ್ಹ. ಆದರೆ, ಈ ವರ್ಷ ಆದ ನಷ್ಟವನ್ನೂ ಸರ್ಕಾರ ಭರಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಹಿಂದೆಂದೂ ಇಂತಹ ಸ್ಥಿತಿ ಬಂದಿರಲಿಲ್ಲ. ಕೆರೆಗಳು ಬತ್ತಿ ಹೋಗಿದ್ದರಿಂದ ಮೀನು ಶಿಕಾರಿ ಈ ವರ್ಷ ಮಾಡಿಲ್ಲ. ಹಾಗಾಗಿ, ದಿನಕ್ಕೊಂದು ಕಡೆ ಕೂಲಿ ಕೆಲಸ ಹುಡುಕಿಕೊಂಡು ಹೋಗಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹಳೆ ಕುಂದವಾಡದ ಮೀನುಗಾರ ಹನುಮಂತಪ್ಪ, ಬೊಮ್ಮಲಿಂಗಪ್ಪ.

ಕೆರೆ ವಿಸ್ತೀರ್ಣ

49.40 ದೊಡ್ಡಬಾತಿ

29.60 ನಾಗನೂರು

101.60 ಕುಂದವಾಡ

* * 

ಮೀನು ಕೃಷಿಯೇ ಜೀವನಕ್ಕೆ ಆಧಾರವಾಗಿತ್ತು. ಬೇಸಿಗೆಯಿಂದಾಗಿ ಕೆರೆಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿ ಮೀನುಗಳೆಲ್ಲ ಸಾವು ಕಂಡಿವೆ. ಸರ್ಕಾರ ಪರಿಹಾರ ನೀಡಬೇಕು.

ಸುರೇಶ್, ಕಾರ್ಯದರ್ಶಿ, ಕುಂದವಾಡ ಮೀನುಗಾರರ ಸಹಕಾರ ಸಂಘ

* * 

ಆದಾಯ ಶೂನ್ಯ ನವೀಕರಣ ಯೋಜನೆ ಜಾರಿಗೆ ತಂದಿದೆ. ಮೀನುಗಾರರು ದಾಖಲೆ ಸಲ್ಲಿಸಿ ಉಚಿತವಾಗಿ ನವೀಕರಣ ಮಾಡಿಕೊಳ್ಳಬಹುದು.

ಡಾ.ಡಿ.ಉಮೇಶ್, ಹಿರಿಯ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry