ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕುಗೊಂಡ ಶೇಂಗಾ ಬಿತ್ತನೆ ಕಾರ್ಯ

Last Updated 9 ಜೂನ್ 2017, 5:12 IST
ಅಕ್ಷರ ಗಾತ್ರ

ಚಳ್ಳಕೆರೆ: ನಗರ ಮತ್ತು ತಾಲ್ಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದೆ. ಎರಡು ದಿನಗಳಿಂದ ತುಂತುರು ಮಳೆಯಾಗುತ್ತಿದೆ. ಹೀಗಾಗಿ ತಾಲ್ಲೂಕಿನಲ್ಲಿ ಶೇಂಗಾ ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ಬಿತ್ತನೆಗೆ ತಯಾರಿ: ತಾಲ್ಲೂಕಿನಾದ್ಯಂತ ಹದ ಮಳೆ ಆಗಿರುವುದರಿಂದ ಶೇಂಗಾ ಬಿತ್ತನೆಗೆ ರೈತರು ತಯಾರಿ ನಡೆಸಿದ್ದಾರೆ. ವಿವಿಧ ಗ್ರಾಮಗಳ ಜಮೀನುಗಳಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಆರಂಭವಾಗಿದೆ. ತಾಲ್ಲೂಕಿನಾದ್ಯಂತ 85 ಸಾವಿರ ಹೆಕ್ಟೇರ್‌ ಶೇಂಗಾ ಬಿತ್ತನೆ ಪ್ರದೇಶವಿದೆ. ಇದರಲ್ಲಿ ಈಗಾಗಲೇ ಶೇ 20ಕ್ಕೂ ಹೆಚ್ಚಿನ ಪ್ರದೇಶದಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಈಗ ಬಿದ್ದಿರುವ ಮಳೆ ಅತ್ಯಂತ ಕಡಿಮೆ ಪ್ರಮಾಣದ್ದಾಗಿದ್ದು, ಬೀಜಗಳು ಚೆನ್ನಾಗಿ ಮೊಳಕೆಯೊಡೆದು ಉತ್ತಮ ಫಸಲು ಪಡೆಯಬೇಕಾದರೆ ಇನ್ನೂ ಹೆಚ್ಚಿನ ಮಳೆಯ ಅಗತ್ಯವಿದೆ ಎನ್ನುತ್ತಾರೆ ರೈತ ನಿಜಲಿಂಗಪ್ಪ.

ಶೇಂಗಾ ಬಿತ್ತನೆ ಬೀಜ ವಿತರಣೆಗೆ ಕ್ರಮ: ತಾಲ್ಲೂಕಿನಾದ್ಯಂತ 600 ಎಕರೆ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಕೃಷಿ ಇಲಾಖೆಯಲ್ಲಿ 13 ಸಾವಿರ ಕ್ವಿಂಟಲ್‌ ಶೇಂಗಾ ಬಿತ್ತನೆ ಬೀಜ ದಾಸ್ತಾನು ಇದೆ.

ಕೃಷಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಒಂದು ಕ್ವಿಂಟಲ್‌ಗೆ ₹ 4,200, ಸಾಮಾನ್ಯ ವರ್ಗಗಳ ರೈತರಿಗೆ ₹ 5,900ರ ದರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸುತ್ತಾರೆ ಕೃಷಿ ಇಲಾಖೆ ಅಧಿಕಾರಿ ಗಿರೀಶ್‌.

ಜೋರು ಮಳೆಯ ಅಗತ್ಯ: ‘ತಾಲ್ಲೂಕಿನಾದ್ಯಂತ ಇತ್ತೀಚೆಗೆ ಒಂದೆರಡು ಬಾರಿ ಮಳೆಯಾಗಿದ್ದರೂ, ಇನ್ನೂ ಹೆಚ್ಚಿನ ಮಳೆಯ ಅಗತ್ಯವಿದೆ. ಈಗ ಆಗಿರುವ ಮಳೆ ನಿರೀಕ್ಷಿತ ಮಟ್ಟ ತಲುಪಿಲ್ಲ. ಮುಂಬರುವ ಪುನರ್ವಸು, ಪುಷ್ಯ ನಕ್ಷತ್ರದ ಮಳೆಗಳು ಸಕಾಲಕ್ಕೆ ಬಂದರೆ ಶೇಂಗಾ ಬಿತ್ತನೆಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ’ ಎನ್ನುತ್ತಾರೆ ರೈತ ಮಂಜುನಾಥ.

ತಾಲ್ಲೂಕಿನಲ್ಲಿ ನೀರಾವರಿ ಪದ್ಧತಿಯಲ್ಲಿ ಬೆಳೆಯಲಾಗುವ ಈರುಳ್ಳಿ, ಮೆಕ್ಕೆಜೋಳ, ಟೊಮೆಟೊ, ಮೆಣಸಿನಕಾಯಿ ಮತ್ತು ಬೆಂಡೆಕಾಯಿಗೆ  ಇನ್ನಷ್ಟು ಉತ್ತಮ ಮಳೆಯ ಅವಶ್ಯವಿದೆ.ತಾಲ್ಲೂಕಿನಲ್ಲಿ ಕಳೆದ ಬೇಸಿಗೆಯಲ್ಲಿ ಅಂತರ್ಜಲ ಕಡಿಮೆಯಾಗಿ ಬಹುತೇಕ ತೋಟಗಾರಿಕೆ ಬೆಳೆಗಾರರು ನೀರಿನ ಅಭಾವ ಎದುರಿಸಿದ್ದರು. ಅಪಾರ ಬೆಳೆನಷ್ಟವಾಗಿತ್ತು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ತೋಟಗಾರಿಕೆ ಬೆಳೆಗಳಿಗೂ ಅನುಕೂಲವಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ ಅಶೋಕ್‌.

ಶೇಂಗಾ ಬಿತ್ತನೆ ವಿವರ
85,000 ಹೆಕ್ಟೇರ್ ತಾಲ್ಲೂಕಿನಲ್ಲಿ ಶೇಂಗಾ ಬೆಳೆಯುವ ಪ್ರದೇಶ

600ಎಕರೆ ತಾಲ್ಲೂಕಿನಲ್ಲಿ ಬಿತ್ತನೆ ಪೂರ್ಣಗೊಂಡ ಕೃಷಿ ಭೂಮಿ

13,000ಕ್ವಿಂಟಲ್ ತಾಲ್ಲೂಕಿನಲ್ಲಿ ದಾಸ್ತಾನು ಮಾಡಿರುವ ಶೇಂಗಾ ಬಿತ್ತನೆ ಬೀಜ

* *

ತಾಲ್ಲೂಕಿನಲ್ಲಿ ಆಗಿರುವ ಅಲ್ಪ ಮಳೆ ಅವಲಂಬಿಸಿ ಹಲವು ರೈತರು ಶೇಂಗಾ ಬಿತ್ತನೆ ಮಾಡುತ್ತಿದ್ದಾರೆ. ಗುಣಮಟ್ಟದ ಬಿತ್ತನೆ ಬೀಜ ವಿತರಿಸಲು ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು.
ಸೋಮಗುದ್ದು ರಂಗಸ್ವಾಮಿ, ಅಖಂಡ ಕರ್ನಾಟಕ  ರೈತ  ಸಂಘ  ರಾಜ್ಯ  ಕಾರ್ಯಾಧ್ಯಕ್ಷ

* *

ಈಗ ಆಗಿರುವ ಹದ ಮಳೆಯಲ್ಲಿ ಬಿತ್ತನೆ ಮಾಡುವ ರೈತರು ಉತ್ತಮ ಇಳುವರಿ ಪಡೆಯಲು ಅವಕಾಶವಿದೆ. ಕೃಷಿ ಇಲಾಖೆ ರೈತರಿಗೆ ಅಗತ್ಯ ಅನುಕೂಲ ಕಲ್ಪಿಸುತ್ತದೆ.
ಡಾ.ಮಾರುತಿ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT