‘ಹಾವೇರಿ ಗೋಲಿಬಾರ್’ಗೆ ಹತ್ತನೆಯ ವರ್ಷ

7

‘ಹಾವೇರಿ ಗೋಲಿಬಾರ್’ಗೆ ಹತ್ತನೆಯ ವರ್ಷ

Published:
Updated:
‘ಹಾವೇರಿ ಗೋಲಿಬಾರ್’ಗೆ ಹತ್ತನೆಯ ವರ್ಷ

ಹಾವೇರಿ: ‘ಪ್ರತಿ ಬಾರಿ ಮುಂಗಾರು (ಜೂನ್) ಬರುತ್ತಿದಂತೆಯೇ ಎಲ್ಲೆಡೆ ಮೋಡ ಕವಿದರೆ, ನಮ್ಮ ಮನೆಯಲ್ಲಿ ಎಲ್ಲರೂ ಮಂಕಾಗುತ್ತಾರೆ. 8 ಜೂನ್ 2008ರ ನೋವು ಮರುಕಳಿಸುತ್ತದೆ’ ಎಂದು ಕುಸುಮಾ ಸಿದ್ದಲಿಂಗಪ್ಪ ಚೂರಿ ಅವರು ‘ಪ್ರಜಾವಾಣಿ’ ಜೊತೆ ಮಾತನಾಡುವಾಗ ಕಣ್ಣು ತೇವಗೊಂಡು ತುಂಬಿ ಬಂದಿತ್ತು.

ಅವರು, ಬಿೀಜ ಮತ್ತು ರಸಗೊಬ್ಬರ ನೀಡುವಂತೆ ಆಗ್ರಹಿಸಿ 8 ಜೂನ್‌ 2008ರಲ್ಲಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ನಡೆದ ‘ಗೋಲಿಬಾರ್’ ಘಟನೆಯಲ್ಲಿ ಹುತಾತ್ಮರಾದ ಸಿದ್ದಲಿಂಗಪ್ಪ ಚನ್ನಬಸಪ್ಪ ಚೂರಿ ಅವರ ಪತ್ನಿ. ಘಟನೆ ನಡೆದು ದಶಕ ಸಮೀಪಿಸುತ್ತಿದೆ. 

ನೋವು: ‘ಅಂದು, ರಾಜಕೀಯ ಮುಖಂಡರು ನೀಡಿದ ತಲಾ ₹2 ಲಕ್ಷವನ್ನು ಇಬ್ಬರು ಮಕ್ಕಳ ಹೆಸರಿನಲ್ಲಿ ಎಫ್‌ಡಿ ಮಾಡಿದ್ದೇನೆ. ನನಗೆ ‘ಅನುಕಂಪ’ದ ಆಧಾರದಲ್ಲಿ ಉದ್ಯೋಗ ನೀಡಿದ್ದಾರೆ. ಅಲ್ಲದೇ, ಪತಿಯ ಹೆಸರಿನಲ್ಲಿ  ಸ್ವಲ್ಪ ಹೊಲವಿದೆ. ಇದರಿಂದ ನಮ್ಮ ಜೀವನ ಸಾಗುತ್ತಿದೆ’ ಎಂದು ಕುಸುಮಾ ಹೇಳಿದರು.

‘ಆದರೆ, ಪತಿಯನ್ನು ಕಳೆದುಕೊಂಡ ಪತ್ನಿ ಎದುರಿಸುವ ನೋವುಗಳನ್ನು ಹೇಳುವುದೇ ಅಸಾಧ್ಯ. ‘ಕೋಟಿಗಟ್ಟಲೆ ಹಣ ಬಂತು’ ಎಂಬಂತೆ ಮಾತನಾಡುತ್ತಾರೆ. ಸೋರುತ್ತಿದ್ದ ಹಳೇ ಮನೆ ದುರಸ್ತಿ ಮಾಡಲು, ಹೊಲದ ಮೇಲೆ ಸಾಲ ಮಾಡಬೇಕಾಯಿತು. ‘ಅನುಕಂಪ’ದ ಕೆಲಸ ಪಡೆಯಲು ಬೆಂಗಳೂರಿಗೆ ಅಲೆದಾಡಬೇಕಾಯಿತು.

ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದ ಅನುದಾನ ಪಡೆಯಲೂ ಓಡಾಡಬೇಕಾಯಿತು. ಬದುಕಿನ ನೋವಿನ ಕಟು ಸತ್ಯಗಳು ಯಾರಿಗೂ ಬೇಡ. ನಮಗೇ ಗೊತ್ತು’ ಎಂದರು.

‘ಆದರೆ, ನೋವನ್ನು ಅರಿತುಕೊಳ್ಳುವ ಒಳ್ಳೆಯ ಜನರೂ ಇರುತ್ತಾರೆ. ಅಂತಹವರ ನೆರವು, ಕುಟುಂಬ, ಬಂಧುಗಳ ಸಹಕಾರದಿಂದ ಜೀವನ ಸಾಧ್ಯವಾಗಿದೆ’ ಎಂದರು.

‘ಜೂನ್‌ ಬಂತೆಂದರೆ, 75 ವರ್ಷದ ಅತ್ತೆ ಅನುಸೂಯಾ ಚನ್ನಬಸಪ್ಪ ಚೂರಿ (ಸಿದ್ದಲಿಂಗಪ್ಪ ಚೂರಿ ತಾಯಿ) ಕೊರಗಿನಲ್ಲೇ ಇರುತ್ತಾರೆ. ಮರುಕಳಿಸುವ ನೋವು ಕಟ್ಟಿಕೊಂಡು ಉದ್ಯೋಗ ಮಾಡುವ ಸ್ಥಿತಿ ನಮ್ಮದು. ಇಂತಹ ಸ್ಥಿತಿ ಯಾರಿಗೂ ಬರಬಾರದು’ ಎಂದರು.

ರೈತನಾದರೂ ಪರವಾಗಿಲ್ಲ: ‘ಮಕ್ಕಳಿಗೆ ಮೊದಲು ಉತ್ತಮ ವಿದ್ಯಾಭ್ಯಾಸ ಸಿಗಬೇಕು. ಬಳಿಕ ಅವರು ಯಾವುದೇ ಉದ್ಯೋಗ ಮಾಡಿದರೂ  ವಿರೋಧ ಇಲ್ಲ. ರೈತರಾದರೂ ಓಕೆ. ನಾವೇ ಕೃಷಿಯಿಂದ ಹಿಂದೆ ಸರಿದರೆ ಹೇಗೆ? ರೈತರ ನೋವಿಗೆ ಸ್ಪಂದಿಸುವವರು ಯಾರು?’ ಎಂದು ಭಾವುಕರಾದರು.

ಆಯೋಗ ವರದಿ: ಅಂದು ಪ್ರಕರಣದ ವಿಚಾರಣೆಗೆ ಸರ್ಕಾರವು ‘ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ ಆಯೋಗ’ ರಚಿಸಿತ್ತು. ‘ಮೃತಪಟ್ಟವರು ರೈತರೇ ಅಲ್ಲ’ ಎಂದು ಆಯೋಗದ ವರದಿಯಲ್ಲಿದೆ ಎಂಬ ಸುದ್ದಿ (ಸೋರಿಕೆ)ಯೂ ಹಬ್ಬಿತ್ತು.  ಅಲ್ಲದೇ, ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರವು, ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿದ್ದ ‘ಗೋಲಿಬಾರ್’ ಕುರಿತು ಆಯೋಗ ನೀಡಿದ್ದ ವರದಿಯನ್ನು ತಿರಸ್ಕರಿಸಿತು.

‘ಆಯೋಗವು ನಮ್ಮ ವಿಚಾರಣೆಯೇ ನಡೆಸಿಲ್ಲ. ಯಾವುದೇ ಮಾಹಿತಿಯೂ ಕೇಳಿಲ್ಲ. ನಮ್ಮ ವಿಚಾರಣೆಯನ್ನೇ ನಡೆಸದೇ, ನಾವು ‘ರೈತರು’ ಅಥವಾ ‘ರೈತರಲ್ಲ’ ಎಂದು ಹೇಳಲು ಸಾಧ್ಯವೇ?’ ಎಂದು ಹುತಾತ್ಮ ರೈತರ ಕುಟುಂಬದವರು ಪ್ರಶ್ನಿಸುತ್ತಾರೆ.

ಗೋಲಿಬಾರ್: ಗೋಲಿಬಾರ್ ಘಟನೆಯಲ್ಲಿ ರೈತರಾದ ಸಿದ್ದಲಿಂಗಪ್ಪ ಚನ್ನಬಸಪ್ಪ ಚೂರಿ ಮತ್ತು ಪುಟ್ಟಪ್ಪ ಹೇಮಪ್ಪ ಹೊನ್ನತ್ತಿ ಮೃತರಾದರೆ, 9 ಮಂದಿ ಗಾಯಗೊಂಡಿದ್ದು, ಅವರ ಸ್ಥಿತಿಯೂ ಕಷ್ಟಕರವಾಗಿದೆ.

ಸಿದ್ದಲಿಂಗಪ್ಪ ಮತ್ತು ಪುಟ್ಟಪ್ಪ ಅವರ ಪತ್ನಿಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಸಿಕ್ಕಿದೆ. ಉಳಿದವರಿಗೆ ಪರಿಹಾರ ಧನ ನೀಡಲಾಗಿದೆ. ಆದರೆ, ಪದೇ ಪದೇ ಸಮಸ್ಯೆಗೆ ಈಡಾಗುತ್ತಿರುವ ರೈತರ ಹೋರಾಟವು ಜಿಲ್ಲೆಯಲ್ಲಿ  ನಿರಂತರವಾಗಿದೆ. ರಾಜ್ಯದಲ್ಲೇ ಎರಡನೇ ಅತ್ಯಧಿಕ ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ನಾವೂ  ಸಾಯಬೇಕಿತ್ತು....’

‘ಗುಂಡೇಟು ತಿಂದ ನಾವೂ ಸತ್ತು ಹೋಗಬೇಕಿತ್ತು’ ಎಂದು ‘ಗೋಲಿಬಾರ್‌’ನಲ್ಲಿ ಭುಜಕ್ಕೆ ಗುಂಡೇಟು ಬಿದ್ದು ಬದುಕುಳಿದ ತಾಲ್ಲೂಕಿನ ಆಲದಕಟ್ಟಿಯ ಅಬ್ದುಲ್ ರಜಾಕ್ ಮೊಹಿಯುದ್ದೀನ್ ಕಲಕೋಟಿ ‘ಪ್ರಜಾವಾಣಿ’ ಜೊತೆ ನೋವು ತೋಡಿಕೊಂಡರು.

‘ನಾನು ಹಮಾಲಿ ಮಾಡಿ ಜೀವನ ನಡೆಸುತ್ತಿದ್ದೆನು. ಗುಂಡೇಟು ಬಿದ್ದ ಬಳಿಕ ಆಸ್ಪತ್ರೆಗೆ ಬಂದ ರಾಜಕೀಯ ಮುಖಂಡರೆಲ್ಲ ಭರವಸೆಗಳನ್ನು ನೀಡಿದರು. ಆದರೆ, ನನಗೆ ಬಂದ ಪರಿಹಾರದ ಹಣವು ಚಿಕಿತ್ಸೆಯ ವೆಚ್ಚಕ್ಕೂ ಸಾಕಾಗಲಿಲ್ಲ. ನನ್ನಲ್ಲಿದ್ದ ತಳ್ಳುಗಾಡಿಯನ್ನೂ ಮಾರ ಬೇಕಾಗಿ ಬಂತು’ ಎಂದು ಹೇಳಿದರು.

‘ಗುಂಡೇಟು ಬಿದ್ದ ಬಳಿಕ ಹಮಾಲಿ ಹಾಗೂ ಕೂಲಿಯ (ಭಾರದ) ಕೆಲಸ ಮಾಡಲೂ ಆಗುತ್ತಿಲ್ಲ. ನಾಲ್ಕು ಹೆಣ್ಣು ಮಕ್ಕಳು ಹಾಗೂ ನನ್ನನ್ನು ಸಾಕುವ ಭಾರ ಪತ್ನಿಯ ಮೇಲೆ ಬಿದ್ದಿದೆ. ಕುಟುಂಬದವರಿಗೆ ಹೊರೆಯಾಗಿದೆ. ನನಗೆ, ಯಾವುದಾದರು ಸರ್ಕಾರಿ ಕಚೇರಿ ಗುಡಿಸುವ ಕೆಲಸ ಕೊಟ್ಟರೂ ಮಾಡುತ್ತೇನೆ’ ಎಂದು ಭಾವುಕರಾಗಿ ಮನವಿ ಮಾಡಿದರು.

‘ಪುತ್ಥಳಿ ಸ್ಥಾಪಿಸಿ’

ಗೋಲಿಬಾರ್‌ನಲ್ಲಿ ಮೃತಪಟ್ಟ ಸಿದ್ದಲಿಂಗಪ್ಪ ಚನ್ನಬಸಪ್ಪ ಚೂರಿ ಮತ್ತು ಪುಟ್ಟಪ್ಪ ಹೇಮಪ್ಪ ಹೊನ್ನತ್ತಿ ಅವರ ಪುತ್ಥಳಿಯನ್ನು ನಗರದ ಸೂಕ್ತ ಸ್ಥಳದಲ್ಲಿ ಸ್ಥಾಪಿಸುವುದಾಗಿ ಸರ್ಕಾರ ಅಂದು ತಿಳಿಸಿತ್ತು. ಆದರೆ, ಘಟನೆ ನಡೆದು ದಶಕ ಸಮೀಪಿಸುತ್ತಿದ್ದರೂ, ಬೇಡಿಕೆಈಡೇರಿಲ್ಲ. ಈ ಬಗ್ಗೆ ಮೃತರ ಕುಟುಂಬಗಳು ಒತ್ತಾಯಿಸುತ್ತಲೇ ಬಂದಿವೆ.

*  * 

ಸರ್ಕಾರಗಳು ಬೀಜ, ಗೊಬ್ಬರ , ವಿಮಾ, ಯಂತ್ರೋಪಕರಣದ ವಾಹನ ಕಂಪೆನಿಗಳ ಪರವಾಗಿವೆ. ರೈತರಿಗೆ ‘ಗುಂಡೇಟು’ ಅಥವಾ ‘ಆತ್ಮಹತ್ಯೆ’ಯೇ ಗತಿಯಾಗಿದೆ

ರಾಮಣ್ಣ ಕೆಂಚಳ್ಳೇರ

ರೈತ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry