ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದಲ್ಲೂ ಕಾರ ಹುಣ್ಣಿಮೆ ಸಂಭ್ರಮ!

Last Updated 9 ಜೂನ್ 2017, 8:43 IST
ಅಕ್ಷರ ಗಾತ್ರ

ಬಳ್ಳಾರಿ: ಸತತ ಮೂರು ವರ್ಷದಿಂದ ಬರಗಾಲವನ್ನು ಎದುರಿಸುತ್ತಿರುವ ಜಿಲ್ಲೆಯ ರೈತರು ಬಿರುಬೇಸಿಗೆ ಬಳಿಕ ಬಂದ ಮುಂಗಾರು ಆರಂಭ ಕಾಲದ ವಿಶಿಷ್ಟ ‘ಕಾರ ಹುಣ್ಣಿಮೆ’ಯನ್ನು ಸಂಭ್ರಮ ದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ.

ಬಿತ್ತನೆಯ ಮೊದಲ ದಿನವಾಗಿ ಈ ಹುಣ್ಣಿಮೆಯನ್ನು ಆಚರಿಸುವ ಪದ್ಧತಿ ಹೈದರಾಬಾದ್‌ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಮೊದಲಿನಿಂದ ಇದೆ. ನೆಲವನ್ನು ಉತ್ತು ಹದ ಮಾಡಿದ ಎತ್ತುಗಳಿಗೆ ವಿಶ್ರಾಂತಿ ನೀಡಿ, ವಿಶೇಷವಾಗಿ ಮೈತೊಳೆದು ಅಲಂಕರಿಸಿ, ಓಟದ ಸ್ಪರ್ಧೆ ಏರ್ಪಡಿಸಿ, ರಾತ್ರಿಯಿಡೀ ಮೆರವಣಿಗೆ ನಡೆಸಿ ರೈತರು ಖುಷಿಪಡುವ ಹಬ್ಬವಿದು.

ಆದರೆ ಸಕಾಲಕ್ಕೆ ಮಳೆ ಇಲ್ಲದೆ ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಉಳುಮೆ ಕಾರ್ಯವೇ ಸಮರ್ಪಕವಾಗಿ ಆರಂಭವಾಗಿಲ್ಲ. ಆದರೂ ವಾಡಿಕೆಯಂತೆ ಹುಣ್ಣಮೆ ಹಬ್ಬದ ಆಚರಣೆ ಶುಕ್ರವಾರ ಕಳೆಗಟ್ಟಲಿದೆ.

ಟ್ರ್ಯಾಕ್ಟರ್‌ ಬಂತು, ಎತ್ತು ಹೋಯ್ತು: ದಶಕಗಳ ಹಿಂದೆ ಗ್ರಾಮಗಳಲ್ಲಿ ಎತ್ತುಗ ಳನ್ನೇ ಕೃಷಿ ಚಟುವಟಿಕೆಗಳಿಗೆ ಪ್ರಧಾನ ವಾಗಿ ಬಳಸಲಾಗುತ್ತಿತ್ತು. ಕ್ರಮೇಣ ಕೃಷಿ ಯಾಂತ್ರೀಕರಣಗೊಂಡು ಎತ್ತುಗಳ ಜಾಗದಲ್ಲಿ ಟ್ರ್ಯಾಕ್ಟರ್‌ಗಳ ಅವಲಂಬನೆ ಯೂ ಹೆಚ್ಚಾಯಿತು.  ಹೈನುಗಾರಿಕೆಗಷ್ಟೇ ರಾಸುಗಳ ಸಾಕಣೆ ಎಂಬ ಪರಿಸ್ಥಿತಿ ನೆಲೆಯೂರಿರುವ ಸನ್ನಿವೇಶದಲ್ಲೇ, ಕಾರ ಹುಣ್ಣಿಮೆಯು ಎತ್ತುಗಳ ಮಹತ್ವವನ್ನು ಮತ್ತೆ ಮತ್ತೆ ರೈತ ಸಮುದಾಯ ನೆನಪಿಸಿಕೊಳ್ಳುವಂತೆ ಮಾಡುತ್ತದೆ.

ಅಲಂಕಾರ ಸಂಭ್ರಮ: ಎತ್ತುಗಳನ್ನು ಅಲಂಕರಿಸುವುದು ಹಬ್ಬದ ಬಹುಮುಖ್ಯ ಭಾಗ. ಹೀಗಾಗಿ ಗಾಜುಮಣಿ, ಕೊಣಸು, ಬಾಸಿಂಗ, ಹಣೆಕಟ್ಟು, ಜತ್ತಿಗೆ, ಹಗ್ಗ, ಬಾರುಕೋಲು, ಕೊಬ್ಬರಿ, ಗೊಂಡೆ, ಮಿಂಚು, ಬಣ್ಣಗಳಲ್ಲಿ ರೈತರ ಮಕ್ಕಳೂ ಆಟವಾಡುತ್ತಾರೆ. ಅವರನ್ನು ನೋಡುತ್ತಾ ನಿಲ್ಲುವ ಎತ್ತುಗಳು ಅಲಂಕಾರಕ್ಕೆ ತಮ್ಮ ಮೈ ಒಡ್ಡುತ್ತವೆ.

ಬೆಳಿಗ್ಗೆಯಿಂದ ಆರಂಭವಾಗುವ ಅಲಂಕಾರ ಸಂಭ್ರಮವು ಸಂಜೆ ವೇಳೆಗೆ, ಗ್ರಾಮದ ಪ್ರಮುಖ ರಸ್ತೆಯಲ್ಲಿ ಎತ್ತುಗಳ ನಡಿಗೆ, ಓಟದಲ್ಲಿ ಹೊಸ ಆಯಾಮ ಪಡೆಯುತ್ತದೆ. ಬಹುಮಾನ ಗೆದ್ದ ಎತ್ತುಗಳ ಮಾಲೀಕರ ಖುಷಿಯೇ ಬೇರೆ!

ಸಕಾಲಕ್ಕೆ ಬಾರದ ಮಳೆ, ಬರಗಾಲ. ಬೆಲೆ ಕುಸಿತ, ಸಾಲದ ಭಾರದ ನಡುವೆಯೂ ಕಾರಹುಣ್ಣಿಮೆ ಜಿಲ್ಲೆಯ ರೈತರನ್ನು ಮತ್ತೊಂದು ಮುಂಗಾರಿನಲ್ಲಿ ಕೃಷಿ ಚಟುವಟಿಕೆ ಆರಂಭಿಸಲು ಉತ್ತೇಜಿಸುತ್ತಿದೆ ಎಂಬುದೇ ವಿಶೇಷ.

ಈ ಗ್ರಾಮಗಳಲ್ಲಿ ವಿಜೃಂಭಣೆ
ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು, ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ,  ಸಿರುಗುಪ್ಪ ತಾಲ್ಲೂಕಿನ ಹಳೇಕೋಟೆ, ಕೆಂಪನಗುಡ್ಡ, ಎರಕಲ್ಲು ಗ್ರಾಮಗಳಲ್ಲಿ ಕಾರಹುಣ್ಣಿಮೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಆಸಕ್ತರು ಈ ಗ್ರಾಮಗಳಿಗೆ ಭೇಟಿ ನೀಡಬಹುದು.

‘ಇಡೀ ಜಿಲ್ಲೆಯಲ್ಲಿ ಕೊಳ್ಳಗಲ್ಲಿನ ಕಾರಹುಣ್ಣಿಮೆಗೆ ವಿಶೇಷ ಸ್ಥಾನವಿದೆ. ಪ್ರತಿ ವರ್ಷ ಇಲ್ಲಿ ತಪ್ಪದೆ ರಾಸುಗಳ ಮೆರವಣಿಗೆ, ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಬಹುಮಾನವನ್ನೂ ಕೊಡಲಾಗುತ್ತದೆ’ ಎಂಬುದು ಯುವಕ ಬಸವರಾಜ ಅವರ ಮಾತು.

ಹುಣ್ಣಿಮೆಯ ಹಿಂದಿನ ದಿನವಾದ ಗುರುವಾರ ಸಂಜೆ ಅವರ ಗ್ರಾಮಕ್ಕೆ ‘ಪ್ರಜಾವಾಣಿ’ ಭೇಟಿ ನೀಡಿದ ವೇಳೆ ಬಹಳಷ್ಟು ರೈತರು ತಮ್ಮ ಎತ್ತುಗಳ ಕೊಂಬು ಎರೆಸುವಲ್ಲಿ, ಅಲಂಕಾರ ಸಾಮಗ್ರಿಗಳ ಖರೀದಿಯಲ್ಲಿ ನಿರತರಾಗಿದ್ದರು.

‘ಸಂಜೆ 4 ಗಂಟೆಗೆ ಕರಿ ಹಾರಿಸುವ (ಎತ್ತುಗಳ ಓಟ) ಕಾರ್ಯಕ್ರಮ ಆರಂಭವಾಗುತ್ತದೆ. ಮಧ್ಯರಾತ್ರಿ ವೇಳೆಗೆ ಎತ್ತುಗಳ ಮೆರವಣಿಗೆ ಆರಂಭವಾಗಿ ಶನಿವಾರ ಬೆಳಿಗ್ಗೆ 11 ಗಂಟೆಯವರೆಗೂ ನಡೆಯುತ್ತದೆ. ಐದು ಕುಲದವರು ತಲಾ ಒಂದು ಜೊತೆ ಎತ್ತನ್ನು ಮೆರವಣಿಗೆಗೆ ತರುತ್ತಾರೆ. ಹತ್ತು ಎತ್ತುಗಳು, ಮುಂದೆ ಒಂದು ಎತ್ತು ಸೇರಿ ಹನ್ನೊಂದು ಎತ್ತುಗಳ ಮೆರವಣಿಗೆ ನೋಡಲು ಕಣ್ಣುಗಳಿಗೆ ಹಬ್ಬ’ ಎಂದು ಗ್ರಾಮದ ದೊಡ್ಡಸಣ್ಣಪ್ಪ ಹೇಳಿದರು.

ಹನ್ನೆರಡು ಹುಣ್ಣಿಮೆಗಳು
ಜನವರಿಯಿಂದ ಡಿಸೆಂಬರ್‌ವರೆಗೆ ಕ್ರಮವಾಗಿ ಹನ್ನೆರಡು ಹುಣ್ಣಿಮೆಗಳು ಇವು. -ಬನದ ಹುಣ್ಣಿಮೆ, -ಭಾರತ ಹುಣ್ಣಿಮೆ, -ಹೋಳಿ ಹುಣ್ಣಿಮೆ, -ದವನದ ಹುಣ್ಣಿಮೆ, ಆಗಿ ಹುಣ್ಣಿಮೆ, ಕಾರ ಹುಣ್ಣಿಮೆ, -ಕಡ್ಲಿ ಕಡುಬು ಹುಣ್ಣಿಮೆ, -ನೂಲ ಹುಣ್ಣಿಮೆ, -ಅನಂತ ಹುಣ್ಣಿಮೆ, -ಸೀಗೆ ಹುಣ್ಣಿಮೆ, -ಗೌರಿ ಹುಣ್ಣಿಮೆ, -ಹೊಸ್ತಿಲ ಹುಣ್ಣಿಮೆ. ಈ ಹುಣ್ಣಿಮೆಗಳ ಪಟ್ಟಿಯನ್ನು ಕೆಲವು ಗ್ರಾಮಸ್ಥರು ಸರಾಗವಾಗಿ ಹೇಳುತ್ತಾರೆ. ಆದರೆ ಅವೆಲ್ಲವುಗಳ ಹಿನ್ನೆಲೆ ಖಚಿತವಾಗಿ ಹೇಳುವವರು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT