ಹಿಂದುಳಿದವರಿಗೆ ಸವಲತ್ತು: ₹ 1 ಕೋಟಿ ಮೀಸಲು

7

ಹಿಂದುಳಿದವರಿಗೆ ಸವಲತ್ತು: ₹ 1 ಕೋಟಿ ಮೀಸಲು

Published:
Updated:
ಹಿಂದುಳಿದವರಿಗೆ ಸವಲತ್ತು: ₹ 1 ಕೋಟಿ ಮೀಸಲು

ಹಾಸನ: ಅಂಗವಿಕಲರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗಾಗಿ ಇರುವ ವಿಶೇಷ ಸವಲತ್ತುಗಳನ್ನು ಕಲ್ಪಿಸಲು  ₹ 1.3 ಕೋಟಿ ಮೀಸಲಿಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಅನಿಲ್‌ಕುಮಾರ್ ತಿಳಿಸಿದರು.

ಅಂಗವಿಕಲರಿಗೆ ಸೌಲಭ್ಯ ಕಲ್ಪಿಸಲು ಎಸ್‌ಎಫ್‌ಸಿ ಮುಕ್ತ ನಿಧಿ ಹಾಗೂ ನಗರಸಭಾ ನಿಧಿಯಡಿ ₹ 60.56  ಲಕ್ಷ , ಶೇ 24.10 ರ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ₹ 20 ಲಕ್ಷ  ಮತ್ತು ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ₹ 23.65 ಲಕ್ಷ ಮೀಸಲಿಡಲಾಗಿದೆ.

ಜೂನ್‌ 17 ರಂದು ನಗರಸಭೆ ಕುವೆಂಪು ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅಂಗವಿಕಲರ ಕುಂದು ಕೊರತೆ ಸಭೆ ಏರ್ಪಡಿಸಲಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಣ್ಣ ಉದ್ದಿಮೆ ನಡೆಸುವ ಅಂಗವಿಕಲರಿಗೆ ₹ 6 ಲಕ್ಷ, ಚಿಲ್ಲರೆ ಅಂಗಡಿ, ಫೋನ್ ಬೂತ್, ಸಂಗೀತ ಸಾಧನ, ತಳ್ಳುವ ಗಾಡಿ ಹಾಗೂ ಹೊಲಿಗೆ ಯಂತ್ರ ಪಡೆಯಲು ಇಚ್ಛಿಸುವವರಿಗೆ ₹ 2 ಲಕ್ಷ, ಯಂತ್ರಚಾಲಿತ ದ್ವಿಚಕ್ರ ವಾಹನಕ್ಕೆ ₹ 30 ಲಕ್ಷ, ವ್ಹೀಲ್‌ಚೇರ್‌, ಕಣ್ಣು, ಕಿವಿ, ಕೈ ಇತ್ಯಾದಿ ಅಂಗಗಳಿಗೆ ಪೂರಕ ಸಾಧನಗಳಾದ ಕೃತಕ ಕಾಲು, ಕನ್ನಡಕ ಹಾಗೂ ಇತರೆ ಸಾಮಗ್ರಿ ಕೊಳ್ಳುವವರಿಗೆ ₹ 18.59 ಲಕ್ಷ, ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ₹ 94 ಸಾವಿರ, ಕಿವುಡ ಹಾಗೂ ಅಂಧ ಮಕ್ಕಳಿಗಾಗಿ ₹ 3 ಲಕ್ಷ ಅನುದಾನ ಮೀಸಲಿಟ್ಟಿದೆ.

ಸೌಲಭ್ಯಗಳ ಸದುಪಯೋಗಕ್ಕೆ ಸಲ್ಲಿಕೆಯಾಗುವ ಅರ್ಜಿ ಆಧರಿಸಿ ಅನುದಾನ ಹಂಚಿಕೆ ಮಾಡಲಾಗುವುದು ಎಂದರು. ನಗರ ಹೊರ ವಲಯದ ಕೈಗಾರಿಕಾ ಪ್ರದೇಶದಲ್ಲಿ ಕಸಾಯಿಖಾನೆ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, 5 ಎಕರೆ ಜಾಗ ಖರೀದಿಗೆ ₹ 25 ಲಕ್ಷ  ಅನುದಾನವನ್ನು ಕೆಐಎಡಿಬಿಗೆ ನೀಡಲಾಗಿದೆ.

ನಗರ ಮಧ್ಯೆದಲ್ಲಿಯೇ ಪ್ರಾಣಿಗಳ ವಧೆ ಕಾರ್ಯ ನಡೆಯುತ್ತಿರುವುದರಿಂದ ಶುಚಿತ್ವ ಹದಗೆಟ್ಟಿದೆ. ಇದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಗರ ಕೇಂದ್ರದಿಂದ ದೂರದಲ್ಲಿ ಕಸಾಯಿ ಖಾನೆ ತೆರೆದರೆ ಸ್ವಚ್ಛತೆ ಕಾಪಾಡಬಹುದು. ಇದಕ್ಕೆ ಸಾರ್ವಜನಿಕರ ಬೆಂಬಲವು ದೊರೆತಿದೆ ಎಂದರು.

ಎನ್.ಆರ್. ವೃತ್ತದಲ್ಲಿರುವ ನಗರಸಭೆ ಜಾಗ ಅಭಿವೃದ್ಧಿಗೆ ನಗರಸಭೆಯಲ್ಲಿ ಅನುದಾನ ಇಲ್ಲ. ಆದ್ದರಿಂದ ಯಾವುದೇ ಕಾಮಗಾರಿ ರೂಪಿಸಿಲ್ಲ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ನಗರಸಭೆ ಕಚೇರಿಯನ್ನು ₹ 5 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಿಸಲಾಗುವುದು ಎಂದು ತಿಳಿಸಿದರು. ನಗರಸಭೆ ಉಪಾಧ್ಯಕ್ಷೆ ಲೀಲಾವತಿ ವಾಸು, ಆಯುಕ್ತ ನಾಗಭೂಷಣ್ ಇದ್ದರು.

ಕಟ್ಟಿನಕೆರೆ ಮಾರುಕಟ್ಟೆ ನವೀಕರಣ

ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆ ನವೀಕರಣಕ್ಕೆ  ₹ 1 ಕೋಟಿ  ವೆಚ್ಚದ ಕ್ರಿಯಾ ಯೋಜನೆ ರೂಪಿಸಿದ್ದು, ಮನೋಹರ್ ಎಂಬುವವರಿಗೆ ಕಾಮಗಾರಿ ಟೆಂಡರ್ ಕೊಡಲಾಗಿದೆ. ಮಾರುಕಟ್ಟೆಗೆ ಚಾವಣಿ, ಮಾರಾಟದ ಸರಕುಗಳನ್ನು ಇಡಲು ವ್ಯವಸ್ಥೆ ಮಾಡಲಾಗುವುದು. 300 ವ್ಯಾಪಾರಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅನಿಲ್‌ ಕುಮಾರ್‌ ನುಡಿದರು.

* *

ಅಂಗವಿಕಲರ ಕಲ್ಯಾಣ ನಿಧಿಗಾಗಿ ಪ್ರತಿವರ್ಷ ನಗರಸಭೆಗೆ ₹ 23 ಲಕ್ಷ  ಅನುದಾನ ದೊರೆಯುತ್ತದೆ

ಎಚ್‌.ಎಸ್‌.ಅನಿಲ್‌ ಕುಮಾರ್‌

ನಗರಸಭೆ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry