ಪೊರ್ಕಿ–ಪೊಲೀಸರ ಗುದ್ದಾಟ; ಪ್ರೇಕ್ಷಕರ ಕಿವಿ ಮೇಲೆ ಹೂತೋಟ

7

ಪೊರ್ಕಿ–ಪೊಲೀಸರ ಗುದ್ದಾಟ; ಪ್ರೇಕ್ಷಕರ ಕಿವಿ ಮೇಲೆ ಹೂತೋಟ

Published:
Updated:
ಪೊರ್ಕಿ–ಪೊಲೀಸರ ಗುದ್ದಾಟ; ಪ್ರೇಕ್ಷಕರ ಕಿವಿ ಮೇಲೆ ಹೂತೋಟ

ಜಿಂದಾ

ನಿರ್ಮಾಪಕರು: ದತ್ತಾತ್ರೇಯ ಬಚ್ಚೇಗೌಡ

ನಿರ್ದೇಶಕ: ಮುಸ್ಸಂಜೆ ಮಹೇಶ್‌

ತಾರಾಗಣ: ಮೇಘನಾ ರಾಜ್‌, ದೇವರಾಜ್‌, ರಾಜು ತಾಳಿಕೋಟೆ, ಅನಿರುದ್ಧ್‌ , ಅರುಣ್‌, ಯುವರಾಜ್‌

‘ಜಿಂದಾ’ ಸಿನಿಮಾದಲ್ಲಿ ಛಾಯಾಗ್ರಾಹಕ ನಾಗೇಶ್‌ ವಿ. ಆಚಾರ್ಯ ಮತ್ತೆ ಮತ್ತೆ ಏರಿಯಲ್‌ ವ್ಯೂನಲ್ಲಿ ಶಾಟ್‌ಗಳನ್ನು ತೆಗೆದಿದ್ದಾರೆ. ಆ ದೃಶ್ಯಗಳಲ್ಲಿ ಕೆಳಗಿನ ಜಗ ಬೇರೆಯದೇ ಆಗಿ ಕಾಣಿಸುತ್ತದೆ. ಮನುಷ್ಯರು ಚಿಕ್ಕದಾಗಿ ಮೊಟ್ಟೆಯಂತೆ, ಮರಗಳು– ಮನೆಗಳು ಸಪಾಟಾಗಿ ನೆಲಕ್ಕೆ ಚೆಲ್ಲಿದಂತೆ ಹೀಗೆ ಎಲ್ಲವೂ ವಾಸ್ತವ ಸತ್ಯಕ್ಕಿಂತ ಬೇರೆಯದೇ ಆಗಿ ಕಾಣುತ್ತಿರುತ್ತದೆ. ಅವರ ಛಾಯಾಗ್ರಹಣದ ಈ ತಂತ್ರ ಒಟ್ಟಾರೆ ಸಿನಿಮಾ ನೀಡುವ ಅನುಭವಕ್ಕೆ ಹೆಚ್ಚಿನದನ್ನು ಸೇರಿಸಲು ವಿಫಲವಾಗಿದೆ. ಆದರೆ ಇದು ಪರೋಕ್ಷವಾಗಿ (ಬಹುಶಃ ಅವರಿಗೂ ಗೊತ್ತಿಲ್ಲದೇ) ನಿರ್ದೇಶಕರ ದೃಷ್ಟಿಕೋನವನ್ನು ಬಿಂಬಿಸುವುದರಲ್ಲಿಯಂತೂ ಯಶಸ್ವಿಯಾಗಿದೆ.

ಅದನ್ನು ಹೀಗೆ ವಿವರಿಸಬಹುದು...ಮೇಲಿನಿಂದ ಕಾಣುವ ನೆಲದ ನೋಟ ಭಿನ್ನ. ಅದನ್ನು ನೋಡಿ ಆಸ್ವಾದಿಸಬೇಕಷ್ಟೆ. ಬದಲಿಗೆ ಆಕಾಶದಿಂದ ನೋಡಿದ ಹಾಗೆ ನಿಜವಾಗಿಯೂ ಇಡೀ ಜಗತ್ತು ಇದೆ ಎಂದು ಹೇಳಲು ಹೊರಟರೆ ಎಡಬಿಡಂಗಿತನವಾಗುತ್ತದೆ. ‘ಜಿಂದಾ’ ಸಿನಿಮಾದಲ್ಲಿ ಮುಸ್ಸಂಜೆ ಮಹೇಶ್‌ ಮಾಡಹೊರಟಿರುವುದೂ ಇದನ್ನೇ.

ನಾಲ್ಕು ಹಾಡುಗಳು, ಒಂದು ಪ್ರೇಮಕಥೆ, ಮುದ್ದು ಮುಖದ ನಟಿ, ಫೈಟ್‌, ರೌಡಿಸಮ್‌... ಒಂದು ಯಶಸ್ವಿ ಸಿನಿಮಾ ಆಗಬೇಕು ಎಂದರೆ ಇವೆಲ್ಲವೂ ಇರಬೇಕು ಎಂಬುದು ಚಿತ್ರಜಗತ್ತಿನ ಜನಪ್ರಿಯ ನಂಬಿಕೆ. ಆದರೆ ಗೆಲ್ಲಲು ಬೇಕಾಗಿರುವ ಈ ಎಲ್ಲ ಅಂಶಗಳನ್ನು ಎಷ್ಟು ಮತ್ತು ಯಾವ ರೂಪದಲ್ಲಿ ಅಳವಡಿಸಬೇಕು ಎಂಬುದೂ ಅಷ್ಟೇ ಮುಖ್ಯ. ‘ಜಿಂದಾ’ ಸಿನಿಮಾದ ಆರಂಭದಲ್ಲಿಯೇ ಈ ಸೂತ್ರ ಹರಿದುಹೋಗಿ ಕಥೆಯ ಗಾಳಿಪಟ ಯರ್ರಾಬಿರ್ರಿ ಹಾರಾಡಿ ದಾರುಣವಾಗಿ ಪತನವಾಗುತ್ತದೆ.

ದುರ್ಬಲ ಚಿತ್ರಕಥೆ, ಪಾತ್ರಪೋಷಣೆಯಲ್ಲಿನ ಪೊಳ್ಳುತನ, ಸಜ್ಜನಿಕೆಯ ಗಡಿ ದಾಟಿ ಕೆಸರೆಬ್ಬಿಸುವ ಸಂಭಾಷಣೆಗಳು, ಸಾತತ್ಯವಿಲ್ಲದ ದೃಶ್ಯಗಳು, ನೀರಸ ನಿರೂಪಣೆ, ಅನುಕೂಲಸಿಂಧು ತಿರುವುಗಳು, ತಾಂತ್ರಿಕ  ದೌರ್ಬಲ್ಯಗಳು ಹೀಗೆ ಈ ಚಿತ್ರದಲ್ಲಿನ ಲೋಪಗಳ ಪಟ್ಟಿ ಬೆಳೆಸುತ್ತಲೇ ಹೋಗಬಹುದು.

1979–80 ಕೊಳ್ಳೇಗಾಲದಲ್ಲಿ ಇದ್ದ  ಆರು ಜನ ಹುಡುಗರ ಗ್ಯಾಂಗ್‌ ಒಂದರ ಕಥೆಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕರದ್ದು.  ಆ ಊರಿಗೆ ಬರುವ ದಕ್ಷ ಪೊಲೀಸ್‌ ಅಧಿಕಾರಿ ಆನಂದ್‌ ಕುಮಾರ್‌ (ದೇವರಾಜ್‌) ಮತ್ತು ಪೊರ್ಕಿ ಹುಡುಗರ ‘ಜಿಂದಾ’ ಗ್ಯಾಂಗ್‌ ನಡುವೆ ನಡೆಯುವ ಹಣಾಹಣಿಯೇ ಈ ಚಿತ್ರದ ಕಥೆ.

ಕಾನೂನಿನ ದಾರಿಯಲ್ಲಿ ಇವರನ್ನು ಹಣಿಯಲು ಸಾಧ್ಯವಿಲ್ಲ ಎಂದು ಅರಿತ ಪೊಲೀಸ್‌ ಅಧಿಕಾರಿ ಕುತಂತ್ರದ ಮಾರ್ಗ ಅನುಸರಿಸಿ ಅವರವರೇ ಕೊಂದುಕೊಳ್ಳುವಂತೆ ಮಾಡಿ ಹೇಗೆ ಇಡೀ ಗ್ಯಾಂಗ್‌ ನಾಶವಾಗುವಂತೆ ಮಾಡುತ್ತಾನೆ ಎಂಬುದನ್ನು ಎರಡು ಗಂಟೆಗಳಲ್ಲಿ ಹೇಳಲಾಗಿದೆ. ಈ ನಡುವೆ ಒಂದು ಪ್ರೇಮಕಥೆಯೂ  ಇದೆ. ಅದು ಜಿಂದಾ ಗ್ಯಾಂಗ್‌ನ ಸದಸ್ಯ ಅಶೋಕ್‌ ಮತ್ತು ಊರಿನ ಶ್ರೀಮಂತ ಸೇಠುವಿನ ಮಗಳು ಶೀತಲ್‌ ನಡುವೆ ನಡೆಯುವಂಥದ್ದು.

ದ್ವಿತೀಯಾರ್ಧದಲ್ಲಿ ಖಳನಾಗಿ ಬದಲಾಗುವ ಪೊಲೀಸ್‌ ಅಧಿಕಾರಿ ಎದುರು ರೌಡಿಗಳೇ ಎಷ್ಟೋ ವಾಸಿ ಎನಿಸುತ್ತಾರೆ. ಸಾಲು ಸಾಲು ಕೊಲೆಗಳನ್ನು ವೈಭವೀಕರಿಸುವುದರಲ್ಲಿಯೇ ಕಥೆ ಕಳೆದುಹೋಗುತ್ತದೆ. ನಾಯಕಿ ಮೇಘನಾ ರಾಜ್ ಅವರಿಗೆ ಅಭಿನಯಕ್ಕೆ ಅವಕಾಶ ಸಿಕ್ಕಿರುವುದು ಚಿತ್ರದ ಕೊನೆಯ ದೃಶ್ಯದಲ್ಲಿ. ಅಲ್ಲಿ ಅವರು ತಾವು ಒಳ್ಳೆಯ ನಟಿ ಎಂಬುದನ್ನೇನೋ ಸಾಬೀತು ಮಾಡಿದ್ದಾರೆ. ಆದರೆ ಆ ಸನ್ನಿವೇಶವೇ ನಿರ್ದೇಶಕರ ಬಾಲಿಶತವನ್ನೂ ಸಾಬೀತುಗೊಳಿಸುವುದು ವಿಪರ್ಯಾಸ.

ಅದುವರೆಗೆ ತಾನು ಪ್ರೀತಿಸುತ್ತಿದ್ದ, ಅವನ ಎಲ್ಲ ಹಿನ್ನೆಲೆಗಳು ತಿಳಿದಿದ್ದೂ ಅವನ ಜತೆಗೆ ಮನೆ ಬಿಟ್ಟು ಓಡಿಹೋಗಿ ಮದುವೆಯಾಗಲು ಬಯಸುತ್ತಿದ್ದ ನಾಯಕಿಗೆ ಒಮ್ಮಿಂದೊಮ್ಮೆಲೇ ಜ್ಞಾನೋದಯವಾಗಿ ಗಂಡುಕುಲವನ್ನೆಲ್ಲ ಹಿಗ್ಗಾ ಮುಗ್ಗಾ ಜಾಲಾಡಿಬಿಡುತ್ತಾಳೆ. ಅಷ್ಟೇ ಸಾಲದು ಎಂಬಂತೆ ಪೊಲೀಸ್‌ ಅಧಿಕಾರಿಗೆ ‘ಇವನನ್ನು ಕೊಂದು ಬಿಡಿ’ ಎಂದು ವಿನಂತಿಸಿಕೊಂಡು ಮರಳಿ ಮನೆಗೆ ಓಡುತ್ತಾಳೆ.

ಅವಳ ಈ ವರ್ತನೆಗೆ ಇಡೀ ಚಿತ್ರದಲ್ಲಿ ಯಾವ ಬಲವಾದ ಸಮರ್ಥನೆಯೂ ಸಿಗುವುದಿಲ್ಲ. ಪೊಲೀಸ್‌ ಅಧಿಕಾರಿ ಕಟ್ಟಿ ಹೇಳುವ ಗಿಳಿಪಾಠವನ್ನು ಎಲ್ಲರೂ ಕಣ್ಮುಚ್ಚಿ ನಂಬಿ, ಇಸ್ಪೀಟ್‌ ಎಲೆಗಳಂತೆ ಒಬ್ಬರ ನಂತರ ಒಬ್ಬರ ಹೆಣ ಬೀಳುತ್ತ ಹೋಗುತ್ತದೆ. ಹೀಗೆ ನಿರ್ದೇಶಕರು ತಮ್ಮ ಮೂಗಿನ ನೇರಕ್ಕೆ ದೃಶ್ಯಗಳನ್ನು ಹೆಣೆಯುತ್ತ ಪ್ರೇಕ್ಷಕನ ಕಿವಿ ಮೇಲೆ ಹೂವಲ್ಲ, ಹೂತೋಟವನ್ನೇ ಇಡಹೊರಟಿದ್ದಾರೆ.

ಒಟ್ಟಾರೆ ‘ಜಿಂದಾ’, ಸಿನಿಮಾ ಮಾಧ್ಯಮದ ಬಳಕೆಯಲ್ಲಿನ ಸೋಲನ್ನಷ್ಟೇ ಅಲ್ಲ, ನಿರ್ದೇಶಕರ ಜೀವನದೃಷ್ಟಿಯಲ್ಲಿನ ಬಾಲಿಶತನವನ್ನೂ ತೋರುವ ಕೈಗನ್ನಡಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry