ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಿಗೆ ಸಿ.ಎಂ ವ್ಯಾಕರಣ ಪಾಠ!

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವಿಧಾನಸಭೆಯಲ್ಲಿ  ವ್ಯಾಕರಣ ಮಾಸ್ತರಾಗಿ ಶಾಸಕರಿಗೆ ಅಕ್ಷರಶಃ ಸಂಧಿ, ಸಮಾಸ ಕುರಿತು ಪಾಠ ಹೇಳಿಕೊಟ್ಟರು.

ಮೇಸ್ಟ್ರು ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಕೇಳುವಂತೆ, ‘ವ್ಯಾಕರಣ ಅಂದ್ರೆ ಗೊತ್ತೇನ್ರಿ?’  ಎಂದು ಅನೇಕರನ್ನು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಲಾಗದೆ ಶಾಸಕರು ಪೇಚಾಡಿದರು!

ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ,  ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟದ ಕುರಿತು ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಎಷ್ಟೋ ಜನಕ್ಕೆ ವ್ಯಾಕರಣ ಗೊತ್ತಿಲ್ಲ, ಸಂಧಿ ಅಂದರೇನು ಎಂದು ತಿಳಿದಿಲ್ಲ’ ಎಂದರು. ಹೀಗೆ ಆರಂಭಗೊಂಡ ಚರ್ಚೆ ನವಿರು ಹಾಸ್ಯದತ್ತ ಹೊರಳಿತು.

‘ನಾನು ಸರ್ಕಾರಿ ಶಾಲೆಯಲ್ಲೇ ಓದಿದ್ದು. 1954ನೇ ಇಸ್ವಿಯಲ್ಲಿ  ಕಲಿತ ಕನ್ನಡ ವ್ಯಾಕರಣ ಈಗಲೂ ನೆನಪಿದೆ. ನಮ್ಮ ಶಾಲೆಯಲ್ಲಿ ಮೇಸ್ಟ್ರು ಹೊಡೆದು ಕನ್ನಡ ವ್ಯಾಕರಣ ಕಲಿಸುತ್ತಿದ್ದರು’ ಎಂದು ಆರು ದಶಕಗಳ ಹಿಂದಿನ ಶಾಲಾ ದಿನಗಳನ್ನು ನೆನಪು ಮಾಡಿಕೊಂಡರು.

‘ನಿನಗೆ ಸಂಧಿ ಅಂದ್ರೇನು ಗೊತ್ತಾ?’ ಎಂದು ನಾರಾಯಣಸ್ವಾಮಿ ಅವರನ್ನು ಪ್ರಶ್ನಿಸಿದರು. ‘ಏನ್‌ ಡಾಕ್ಟ್ರೇ... ಕನ್ನಡ ಸಂಧಿ, ಸಮಾಸ ಯಾವುದು ಹೇಳಿ’ ಎಂದು ಬಿಜೆಪಿಯ ಡಾ. ಸಿ.ಎನ್‌. ಅಶ್ವಥ್‌ ನಾರಾಯಣ ಅವರನ್ನೂ ಕೇಳಿದರು.

‘ಏಯ್‌ ಪಾಟೀಲ,  ನಿನಗೆ ಗೊತ್ತೇನೋ?’ ಎಂದು ಕೆಜೆಪಿಯ ಬಿ.ಆರ್‌. ಪಾಟೀಲರನ್ನೂ ಕೆಣಕಿದರು.

‘ಸ್ಕೂಲಿನಲ್ಲಿ ನನಗೆ ಪುಟ್ಟಸ್ವಾಮಿ ಎಂಬ ಗೆಳೆಯನಿದ್ದ. ಒಮ್ಮೆ ಮೇಸ್ಟ್ರು ಓರಲ್ ಎಕ್ಸಾಂ ಮಾಡ್ತಾ ಇದ್ದರು. ಪುಟ್ಟಸ್ವಾಮಿಯನ್ನು ಕರೆದು ಸಂಧಿ ಎಂದರೇನು ಎಂದು ಪ್ರಶ್ನಿಸಿದರು. ನಮ್ಮ ಮನೆಗೂ ನಮ್ಮ ದೊಡ್ಡಪ್ಪನ ಮನೆಗೂ ಮಧ್ಯೆ ಇರುವುದೇ ಸಂದಿ ಎಂದಿದ್ದ. ಅದಕ್ಕೆ ಮೇಸ್ಟ್ರು, ನೀನು ಮುಂದಕ್ಕೆ ಹೋಗೋದು ಬೇಡ, ಈ ವರ್ಷ ಇಲ್ಲೇ ಕೂತ್ಕೊ ಅಂದರು’ ಎಂದು ಸಿದ್ದರಾಮಯ್ಯ ಹೇಳಿದಾಗ, ಸದನದಲ್ಲಿ ನಗುವಿನ ಅಲೆ ಎದ್ದಿತು.

ಮಾತು ಮುಂದುವರಿಸಿದ ಮುಖ್ಯಮಂತ್ರಿ, ‘ಮೂರು ಸಂಧಿಗಳಿವೆ. ಲೋಪ ಸಂಧಿ, ಆಗಮ ಮತ್ತು ಆದೇಶ ಸಂಧಿ. ಲೋಪ ಅಂದ್ರೆ ಏನು ಗೊತ್ತೇ’ ಎಂದು ಮರು ಪ್ರಶ್ನೆ ಎಸೆದರು.

ಆಗ ಬಿಜೆಪಿಯ ಸುರೇಶ್‌ ಕುಮಾರ್‌, ‘ಲೋಪ ಆಗಿರುವುದೇ ಎಲ್ಲದಕ್ಕೂ ಮೂಲ’ ಎಂದಾಗ ಮತ್ತೆ ನಗು...

ಮಧ್ಯಪ್ರವೇಶಿಸಿದ ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್. ಪುಟ್ಟಣ್ಣಯ್ಯ, ‘ನಿಮಗೆ ಎಲ್ಲಾ ಸಂಧಿಗಳು ಗೊತ್ತಿವೆ. ನೀವು ಎಲ್ಲ ಸಂದಿಗಳಲ್ಲೂ ನುಗ್ಗಿದ್ದರಿಂದಲೇ ಮುಖ್ಯಮಂತ್ರಿ ಆಗಿದ್ದು’ ಎಂದು ಸಿದ್ದರಾಮಯ್ಯನವರ ಕಾಲೆಳೆದರು. ಅದಕ್ಕೆ ಮುಖ್ಯಮಂತ್ರಿ, ‘ನೀನೂ ನನ್ನ ರೀತಿಯಲ್ಲೇ ಎಲ್ಲ ಸಂದೀಲೂ ನುಗ್ಗು. ಸಿ.ಎಂ ಆಗ್ತೀಯಾ’ ಎಂದು ತಮಾಷೆ ಮಾಡಿದರು. ಸುಮಾರು ಇಪ್ಪತ್ತು ನಿಮಿಷ ನಡೆದ ವ್ಯಾಕರಣ ಪಾಠ ಇಡೀ ಸದನವನ್ನು ರಂಜಿಸಿತು.

* ನೀನೂ ನನ್ನ ರೀತಿಯಲ್ಲೇ ಎಲ್ಲ ಸಂದೀಲೂ ನುಗ್ಗು. ಸಿ.ಎಂ ಆಗ್ತೀಯಾ
–ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT