ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳ ವಿವಾದ: ಶಿವರಾಜ್‌ಕುಮಾರ್‌ ಸಮರ್ಥನೆ

Last Updated 9 ಜೂನ್ 2017, 20:34 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾರ್ವತಮ್ಮ ರಾಜ್‌ಕುಮಾರ್‌ ಅವರು ಕನ್ನಡ ಚಿತ್ರರಂಗಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಇದನ್ನು ಪರಿಗಣಿಸಿಯೇ ರಾಜ್ಯ ಸರ್ಕಾರ ಕಂಠೀರವ ಸ್ಟುಡಿಯೊದಲ್ಲಿ ರಾಜ್‌ ಕುಮಾರ್‌ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆಗೆ ಸ್ಥಳ ನೀಡಿದೆ’ ಎಂದು ನಟ ಶಿವರಾಜ್‌ಕುಮಾರ್‌ ಹೇಳಿದರು.

ಇಲ್ಲಿನ ಗ್ರೀನ್‌ ಹೌಸ್‌ನಲ್ಲಿ ಶುಕ್ರವಾರ ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ಥಳ ವಿವಾದದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ವ್ಯಕ್ತಿ ಜೀವಿಸಿದ್ದ ವೇಳೆ ಟೀಕೆ, ಚರ್ಚೆ ನಡೆಸಬೇಕು. ಅವರು ನಮ್ಮಿಂದ ದೂರವಾದ ಬಳಿಕ ಚರ್ಚಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು. 

‘ಅಪ್ಪಾಜಿಗೆ ಅಮ್ಮ ಬೆನ್ನೆಲುಬಾಗಿ ನಿಂತಿದ್ದರು. ಅವರ ಬದುಕು ಎಲ್ಲರಿಗೂ ಮಾದರಿ. ಅವರ ಸೇವೆ ಪರಿಗಣಿಸಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಸರ್ಕಾರದ ನಿರ್ಧಾರವನ್ನು ನಾವು ಗೌರವಿಸುತ್ತೇವೆ’ ಎಂದರು.

‘ಸದಾಶಿವನಗರದಲ್ಲಿರುವ ಮನೆಯನ್ನು ಅವರ ನೆನಪಿನಾರ್ಥ ಮ್ಯೂಸಿಯಂ ಮಾಡುವ ಬಗ್ಗೆ ಇನ್ನೂ ಚಿಂತಿಸಿಲ್ಲ’ ಎಂದು ಹೇಳಿದರು.

ಭಾವಪೂರ್ಣ ಶ್ರದ್ಧಾಂಜಲಿ: ಗ್ರೀನ್‌ ಹೌಸ್‌ ಮತ್ತು ಶ್ರೀಗೌರಿಶಂಕರ ಮಹಲ್‌ ಬಳಗದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಟ ಶಿವರಾಜ್‌ಕುಮಾರ್‌ ಮಾತನಾಡಿ, ‘ನಾನು ಅಮ್ಮನಂತೆಯೇ ಕಪ್ಪಗಿದ್ದೇನೆ. ಇದರಿಂದ ಅಮ್ಮನಿಗೂ ನನ್ನ ಮೇಲೆ ಪ್ರೀತಿ ಹೆಚ್ಚಿತ್ತು’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

‘ಅಪ್ಪಾಜಿಗೆ ನನ್ನನ್ನು ಹೋಲಿಸಬೇಡಿ. ಅವರು ಎಲ್ಲರಿಗೂ ಆದರ್ಶ. ಚಿತ್ರರಂಗ ಬೆಳೆಯಲು ಎಲ್ಲರ ಬೆಂಬಲ ಬೇಕು’ ಎಂದು ಹೇಳಿದರು.

ಗ್ರೀನ್‌ ಹೌಸ್‌ ಮಾಲೀಕ ವಾಸು ಮಾತನಾಡಿ, ‘ಡಾ. ರಾಜ್‌ಕುಮಾರ್‌ ಟ್ರಸ್ಟ್‌ ಮತ್ತು ಬಿಡದಿಯ  ಡಾ. ರಾಜ್‌ಕುಮಾರ್‌ ನೇತ್ರ ಸಂಗ್ರಹಣಾ ಕೇಂದ್ರದ ಮೂಲಕ 763 ಮಂದಿ ದೃಷ್ಟಿದೋಷ ಹೊಂದಿದವರ ಬಾಳಿಗೆ ಬೆಳಕು ನೀಡಲಾಗಿದೆ’ ಎಂದು ಹೇಳಿದರು.

ಅಸೋಚಂನ ರಾಜ್ಯ ಘಟಕದ ಅಧ್ಯಕ್ಷ ಆರ್. ಶಿವಕುಮಾರ್‌, ಎಫ್‌.ಕೆ.ಸಿ.ಸಿ.ಐನ ನಿಯೋಜಿತ ಅಧ್ಯಕ್ಷ ರವಿ, ಕೆ.ಎಂ.ಎಫ್‌ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಎಸ್‌. ಪ್ರೇಮನಾಥ್‌, ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಕುಮಾರ್, ಗೋವಿಂದರಾಜು, ಚಿನ್ನೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT