ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಹಾಸ ಮೂಡಿಸಿದ ಮೊದಲ ಮಳೆ

Last Updated 10 ಜೂನ್ 2017, 4:36 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಉತ್ತಮ ಮಳೆಯಾಗಿದೆ. ಬಹುನಿರೀಕ್ಷಿತ ಮಳೆ ಜನರಲ್ಲಿ ಸಂತಸ ತಂದಿದೆ.

ಹರಪನಹಳ್ಳಿ: ಸಂಚಾರ ಅಸ್ತವ್ಯಸ್ತ: ಪಟ್ಟಣದಿಂದ ಕಂಚಿಕೇರಿ ಮೂಲಕ ದಾವಣಗೆರೆಗೆ ಹೋಗುವ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆಯಡಿ ಶುಕ್ರವಾರ ಸುರಿದ ಮಳೆಯ ನೀರು ಸರಾಗವಾಗಿ ಹರಿಯದೇ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಪಟ್ಟಣ ಹೊರವಲಯದ ವಾಲ್ಮೀಕಿ ನಗರದ ಬಳಿ ಇರುವ ರೈಲ್ವೆ ಸೇತುವೆ ಬಳಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
‘ರೈಲ್ವೆ ಮೇಲ್ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಸೇತುವೆ ಕೆಳಗೆ ಬರುವ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಿಲ್ಲ.

ಇಲ್ಲಿ ಸಂಗ್ರಹವಾಗುವ ನೀರು ಸುತ್ತಮುತ್ತಲಿನ ಮನೆಗಳಿಗೆ ನುಗ್ಗುತ್ತದೆ. ಇದನ್ನು ಸರಿಪಡಿಸಬೇಕು’ ಎಂದು ಸ್ಥಳೀಯರಾದ ನೀಲಕಂಠ ನಾಯ್ಕ, ನಾಗರಾಜ್‌ ನಾಯ್ಕ ಆಗ್ರಹಿಸಿದರು.

ಮಲೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಗಾರು ಮಳೆ ಒಂದು ಗಂಟೆ ಕಾಲ ಸುರಿದು ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಒಂದು ವಾರದಿಂದ ಮೋಡ ಚೆಲ್ಲಾಟವಾಡುತ್ತಿತ್ತು.  ರೈತರು ಮಳೆ ನಿರೀಕ್ಷೆಯಲ್ಲಿ ಹೊಲ ಹೊಡೆದು ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ತೋಟದ ಬೆಳೆಗಾರರು ಅಡಿಕೆ ಬೆಳೆಗೆ ಒಂದು ಉತ್ತಮ ಮಳೆ ನಿರೀಕ್ಷಿಸುತ್ತಿದ್ದರು.

ಸಿಡಿಲು ಗುಡುಗಿನ ಆರ್ಭಟದೊಂದಿಗೆ ಸುರಿದ ಮೃಗಶಿರಾ ಮಳೆ ಶುಭಾರಂಭ ಮಾಡಿದೆ. ಬಿರುಮಳೆ ರಭಸಕ್ಕೆ ಮೋರಿಗಳು ಉಕ್ಕಿ ಹರಿದು ಸ್ವಚ್ಛವಾದವು. ಸೊಳ್ಳೆಕಾಟ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ ಎಂದು ಗ್ರಾಮಸ್ಥರು ನಿಟ್ಟುಸಿರುಬಿಟ್ಟರು.

ಕತ್ತೆ ಮದುವೆ: ಸಮೀಪದ ಜಿಗಳಿ ಗ್ರಾಮದಲ್ಲಿ ಮಳೆಗಾಗಿ ಶುಕ್ರವಾರ ಗ್ರಾಮಸ್ಥರು ಕತ್ತೆ ಮದುವೆ ಮಾಡಿದರು. ಮುಖ್ಯವೃತ್ತದಲ್ಲಿ ಕತ್ತೆ ಜೋಡಿಗೆ ಸಾಂಪ್ರದಾಯಿಕವಾಗಿ ವಿವಾಹದ ವಿಧಿ ನೆರವೇರಿಸಿದರು. ಬೀದಿಗಳಲ್ಲಿ ತಮಟೆ ಹಾಗೂ ನಾಸಿಕ್ ಡೋಲಿನೊಂದಿಗೆ ಮೆರವಣಿಗೆ ಮಾಡಿ, ಮಳೆ ಕರುಣಿಸುವಂತೆ ಪ್ರಾರ್ಥನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT