ಸಾಲಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಹೋರಾಟ

7
ವಿಜಯಪುರಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ

ಸಾಲಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಹೋರಾಟ

Published:
Updated:
ಸಾಲಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಹೋರಾಟ

ವಿಜಯಪುರ: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡದಿದ್ದರೆ, ಜುಲೈ 10 ರಂದು 5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸೇರಿಸಿ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಇಲ್ಲಿಗೆ ಶುಕ್ರವಾರ ಭೇಟಿ ನೀಡಿದ್ದ ಅವರು, ನಗರೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.

ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಮೂರು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಕೆರೆ ಕುಂಟೆಗಳಲ್ಲಿ ನೀರಿಲ್ಲದೆ ಜನರು ಕಂಗಾಲಾಗಿದ್ದಾರೆ.  ಸಹಕಾರಿ ಸಂಘದ ಸಾಲ ಮನ್ನಾ ಮಾಡುವಂತೆ ರಾಜ್ಯಾದ್ಯಂತ ಎಲ್ಲಾ ಭಾಗಗಳಲ್ಲಿನ ರೈತರ ಒಕ್ಕೊರಲ ಧ್ವನಿಯಾಗಿದೆ. ಈಗಾಗಲೇ ಮಹಾರಾಷ್ಟ್ರ, ಉತ್ತರ ಪ್ರದೇಶಗಳಲ್ಲಿ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿವೆ. ಆದರೆ ಮುಖ್ಯಮಂತ್ರಿ, ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದರು.

ಮಾರ್ಗಮಧ್ಯೆ ಯಲಿಯೂರು ಗೇಟ್ ನಲ್ಲಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕಾರ ಮಾಡಿದ ಅವರು, ಎರಡು ಗಂಟೆಗೆ ವಿಜಯಪುರಕ್ಕೆ ಬಂದರು.  

ಗರೇಶ್ವರಸ್ವಾಮಿ ದೇವಾಲಯ, ಗಂಗಾತಾಯಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದುರ್ಗಾತಾಯಿ ಕಾಲೊನಿಯ ರಸ್ತೆಯಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ನಿರ್ಮಾಣ ಮಾಡಲಾಗಿರುವ ಕಸದ ತೊಟ್ಟಿಗೆ ಚಾಲನೆ ನೀಡಿದರು. 

ರೇಣುಕಾ ಎಲ್ಲಮ್ಮ ದೇವಿ ದೇವಾಲಯದ ಮುಂಭಾಗದಲ್ಲಿ ಸಸಿ ನೆಟ್ಟರು. ಬಲಿಜಿಗರ ಬೀದಿಯಲ್ಲಿರುವ ಟಿ.ವೆಂಕಟಪ್ಪ ಎಂಬುವವರ ಮನೆಯಲ್ಲಿ ಊಟ ಮಾಡಿ, ವೆಂಕಟರವಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತೆರಳಿದರು.

ರದ್ದಾದ ಸಂವಾದ–ಬೇಸರ: ಯಡಿಯೂರಪ್ಪನವರು ಹಿಂದುಳಿದ ವರ್ಗದವರ ಮನೆಯಲ್ಲಿ ಊಟ ಮಾಡಿದ ನಂತರ ಬಲಿಜಭವನದಲ್ಲಿ ಸಂವಾದ ಕಾರ್ಯಕ್ರಮ ನಡೆಸುವುದಾಗಿ ಪ್ರಕಟಿಸಲಾಗಿತ್ತು. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಬಿಜೆಪಿ ಮುಖಂಡರು ಮಾಡಿಕೊಂಡಿದ್ದರು. ಆದರೆ, ಊಟದ ಮೇಲೆ  ಸಂವಾದ ಕಾರ್ಯಕ್ರಮ ರದ್ದುಗೊಳಿಸಲಾಯಿತು. ಇದರಿಂದ ಹಲವಾರು ಕಾರ್ಯಕರ್ತರು ಬೇಸರಗೊಂಡರು. ಸ್ಥಳೀಯ ನಾಯಕರಲ್ಲಿರುವ ಗೊಂದಲಗಳು ಬಹಿರಂಗಗೊಳ್ಳುವ ಆತಂಕದಿಂದ ಸಂವಾದ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ ಎಂದು ಮುಖಂಡರಾದ ವೆಂಕಟೇಶ್, ವಿಜಯಕುಮಾರ್, ಅಶೋಕ್ ಕುಮಾರ್, ಮೂರ್ತಿ ಮುಂತಾದವರು ಬೇಸರ ವ್ಯಕ್ತಪಡಿಸಿದರು.

ಬಿರಿಯಾನಿ ಊಟ: ಕಾರ್ಯಕರ್ತರಿಗೆ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಆಟದ ಮೈದಾನದಲ್ಲಿ ಬಿರಿಯಾನಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಹಿತರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಂಸದರಾದ ಪಿ.ಸಿ.ಮೋಹನ್, ಶ್ರೀರಾಮುಲು, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಹನುಮಂತರಾಯಪ್ಪ, ಜೊ.ನಾ.ಮಲ್ಲಿಕಾರ್ಜುನ, ಬಿಜೆಪಿ ಮುಖಂಡರಾದ ಕೆ.ನಾಗೇಶ್, ಜಿ.ಚಂದ್ರಣ್ಣ, ಪಾಪನಹಳ್ಳಿ, ನಾರಾಯಣಗೌಡ, ಬಿ.ರಾಜಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗರಾಜಗೌಡ, ಬೊಮ್ಮವಾರ ಸುನೀಲ್, ಪುರಸಭಾ ಸದಸ್ಯ ಬಲಮುರಿ ಶ್ರೀನಿವಾಸ್, ವಿಜಯಪುರ ಅಧ್ಯಕ್ಷ ವಿಜಯಬಾಬು, ಕನಕರಾಜು, ರವಿಕುಮಾರ್, ರಾಮಕೃಷ್ಣಹೆಗಡೆ, ಭಗವಾನ್, ಡಿ.ಎಂ.ಮುನೀಂದ್ರ, ವೆಂಕಟೇಶ್ ಪ್ರಭು, ರಾಘವ ಮುಂತಾದವರು ಹಾಜರಿದ್ದರು.

**

ಎತ್ತಿನಹೊಳೆ ಯೋಜನೆ ವೇಗ ಹೆಚ್ಚಿಸಿ

ಎತ್ತಿನಹೊಳೆ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣವನ್ನು ಬಿಡುಗಡೆ ಮಾಡಿದ್ದೆ, ಕೇವಲ ಪೈಪ್ ಗಳನ್ನು ಖರೀದಿ ಮಾಡಿದ್ದಾರಷ್ಟೇ ಎಂದು ಯಡಿಯೂರಪ್ಪ ಆಕ್ಷೇಪಿಸಿದರು.

ಕಾಮಗಾರಿಗಳು ನಿರೀಕ್ಷೆ ಮಟ್ಟದಲ್ಲಿ ಆಗಿಲ್ಲ. ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕು. ಪೈಪುಗಳ ಖರೀದಿಯಿಂದ ಜನರಿಗೆ ಉಪಯೋಗವಿಲ್ಲ ಎಂದರು.

**

ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ.  ಇದರ ವಿರುದ್ಧ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ

-ಬಿ.ಎಸ್.ಯಡಿಯೂರಪ್ಪ , ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry