ಬಸುರಿಗೂ ಫೋಟೊ ಬಯಕೆ

7

ಬಸುರಿಗೂ ಫೋಟೊ ಬಯಕೆ

Published:
Updated:
ಬಸುರಿಗೂ ಫೋಟೊ ಬಯಕೆ

ಎಲ್ಲರಿಗೂ ಹಾಯ್‌. ಮೊದಲನೆಯದಾಗಿ ನಾನು ಮೆಟರ್ನಿಟಿ ಫೋಟೊಶೂಟ್ ಮಾಡಿಸಿದ್ದು ಒಂದು ನೆನಪಿಗೋಸ್ಕರ. ಮೊದಲ ತಾಯ್ತನದ ಪುಳಕವನ್ನು ಕೊನೆಯವರೆಗೂ ಜೀವಂತವಾಗಿರಿಸಿಕೊಳ್ಳಬೇಕು, ಸಾಧ್ಯವಾದಾಗಲೆಲ್ಲ ಅದನ್ನು ನೋಡುತ್ತಾ ಕಣ್ಮುಚ್ಚಿಕೊಂಡು ಜೀಕಬೇಕು ಎಂಬ ಕಾರಣಕ್ಕಾಗಿ.

‘ಮನೆಕೆಲಸ ಮಾಡುವ ಹೆಣ್ಣುಮಕ್ಕಳಿಂದ ಹಿಡಿದು ಕಾರ್ಪೊರೇಟ್ ಜಗತ್ತಿನಲ್ಲಿ ದುಡಿಯುವ ಪ್ರತಿಯೊಂದು ಹೆಣ್ಣು ಕೂಡ ತಾಯಿಯಾಗುವ ಹಂತದಲ್ಲಿ ದೀರ್ಘ ವಿಶ್ರಾಂತಿ ತೆಗೆದುಕೊಳ್ಳುತ್ತಾಳೆ. ಮಗು ಆಗಿ ಆರು ತಿಂಗಳ ನಂತರವಷ್ಟೇ ಆಕೆ ಮತ್ತೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಳೆ.

ಕಲಾವಿದೆಯರೂ, ಅದರಲ್ಲೂ ನಾಯಕನಟಿಯರು ತಾಯಿಯಾದರೆ ಅವರ ಕರಿಯರ್ ಅಲ್ಲಿಗೆ ಮುಗಿದು ಹೋಯ್ತು ಎಂದು ಭಾವಿಸುವವರೇ ಹೆಚ್ಚು. ಆದರೆ, ಅದು ಸುಳ್ಳು ಎಂಬುದನ್ನು ಆ ಕಾಲದಿಂದಲೂ ಅನೇಕ ನಾಯಕಿಯರು ನಿರೂಪಿಸುತ್ತಾ ಬಂದಿದ್ದಾರೆ.

ಗರ್ಭಿಣಿ ಆದ ನಂತರ ಯಾರೂ ಫೋಟೊಶೂಟ್‌ ಮಾಡಿಸುವುದಿಲ್ಲ. ಒಂದು ವೇಳೆ ಮಾಡಿಸಿದರೂ ಅದನ್ನು ಯಾರೊಟ್ಟಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಏಕೆಂದರೆ, ನಮ್ಮ ದೇಹದ ಆಕಾರ ಹೇಗೆ ಕಾಣಿಸುತ್ತದೆಯೋ ಎನ್ನುವ ಮುಜುಗರ, ಭಯ ಇದ್ದೇ  ಇರುತ್ತದೆ. ಇನ್ನು ಕೆಲವು ಗರ್ಭಿಣಿಯರು ಹತ್ತು ಜನರ ಮುಂದೆ ಬಂದು ನಿಂತುಕೊಳ್ಳುವುದಕ್ಕೂ ಹಿಂಜರಿಯುತ್ತಾರೆ.

ಇದರ ಹಿಂದೆ ‘ದೃಷ್ಟಿ ಬೀಳುತ್ತದೆ’ ಎಂಬ ಮೂಢನಂಬಿಕೆಯೂ ಇರುತ್ತದೆ. ಕಲಾವಿದೆಯಾದ ನಾನು ಇದನ್ನೆಲ್ಲ ಮೀರಿ ನಿಲ್ಲಬೇಕು ಅಂತ ಅನಿಸಿತು. ಏಕೆಂದರೆ, ಪ್ರೆಗ್ನನ್ಸಿ ಎಂಬುದು ಒಂದು ನೈಸರ್ಗಿಕ ಪ್ರಕ್ರಿಯೆ. ಅದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಒಂದು ಉದ್ದೇಶದಿಂದ ನಾನು ಫೋಟೊಶೂಟ್ ಮಾಡಿಸಿದೆ. ನನ್ನ ಈ ಪ್ರಯತ್ನ ‘ಜಸ್ಟ್ ಬಿ ಯುವರ್ ಸೆಲ್ಫ್’ ಎನ್ನುವುದನ್ನು ಹೇಳಬೇಕು ಎಂಬುವುದೇ ಆಗಿತ್ತು.

ನಾವು ಏನೇ ಮಾಡಿದರೂ ಜನ ಮಾತನಾಡಿಕೊಳ್ಳುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಮಾತನಾಡುವವರು ಮಾತನಾಡಿಕೊಳ್ಳುತ್ತಲೇ ಇರಲಿ. ನಮ್ಮ ಹಿತವನ್ನು ಬಯಸುವ ಜನರಂತೂ ನಮ್ಮ ಜತೆಗೆ ಇದ್ದೇ ಇರುತ್ತಾರೆ.

ನಮ್ಮ ಪಾಡಿಗೆ ನಾವು ಶ್ರದ್ಧೆ, ಭಕ್ತಿ, ಪ್ರೀತಿಯಿಂದ ಕೆಲಸದ ಬಗ್ಗೆ ಗಮನ ಕೊಟ್ಟು ಅದನ್ನು ಮಾಡುತ್ತಾ ಹೋದರೆ ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಈ ಕಾರಣದಿಂದಲೂ ನಾನು ಸೋಷಿಯಲ್‌ ಮೀಡಿಯಾಗಳಲ್ಲಿ ನನ್ನ ಮೆಟರ್ನಿಟಿ ಚಿತ್ರಗಳನ್ನು ಖುಷಿಯಿಂದಲೇ ಹಂಚಿಕೊಳ್ಳುತ್ತಿದ್ದೇನೆ.

ಒಂದು ಮಗುವನ್ನು ಹೆತ್ತ ತಕ್ಷಣ ತಾಯಿ ಆಗುತ್ತೇವೆ ಎಂದು ಹೇಳುವುದು ಎಲ್ಲೋ ಒಂದು ಕಡೆ ತುಂಬ ನ್ಯಾರೋ ಮೈಂಡೆಡ್ ಅಂತ ಅನ್ನಿಸಿಬಿಡುತ್ತದೆ. ಏಕೆಂದರೆ ಪ್ರತಿಯೊಂದು ಹೆಣ್ಣಿನಲ್ಲೂ ತಾಯ್ತನದ ಮನಸ್ಸು ಇರುತ್ತದೆ. ಕೆಲವು ಹೆಣ್ಣುಮಕ್ಕಳಿಗೆ ತಾಯಿಯಾಗುವುದಕ್ಕೆ ಅವರ ದೇಹ ಅವಕಾಶ ನೀಡುವುದಿಲ್ಲ. ಆ ರೀತಿ ಆದ ತಕ್ಷಣ ಅವರಿಗೆ ತಾಯಿ ಮನಸ್ಸು ಇಲ್ಲವೆಂದಲ್ಲ. ಇನ್ನು ಕೆಲವರಿಗೆ ಮಗುವನ್ನು ಹೆರುವುದು ಇಷ್ಟವಿರುವುದಿಲ್ಲ. ಅವರು ಮಕ್ಕಳನ್ನು ದತ್ತು ತೆಗೆದುಕೊಂಡು ಹೆತ್ತ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿಯನ್ನು ತೋರುತ್ತಾರೆ.

ಹಾಗಾಗಿ, ಪ್ರತಿಯೊಂದು ಹೆಣ್ಣಿಗೂ ಈ ವಿಚಾರದಲ್ಲಿ ಶುಭಾಶಯ ಹೇಳಲೇಬೇಕಾಗುತ್ತದೆ. ಈ ಒಂದು ವಿಚಾರದಲ್ಲಿ ನಮ್ಮ ಸಮಾಜದ ಮನಸ್ಥಿತಿ ಬದಲಾಬೇಕು ಎಂಬುದು ನನ್ನ ಅಭಿಪ್ರಾಯ. ಈ ಕಾರಣದಿಂದಲೂ ಒಬ್ಬ ಕಲಾವಿದೆಯಾಗಿ, ಪಬ್ಲಿಕ್ ಫಿಗರ್ ಆಗಿ ನಾನು ನನ್ನ ಪ್ರಯತ್ನವನ್ನು ಮಾಡುತ್ತಿದ್ದೇನೆ.  

ಇನ್ನು ಬಸುರಿ ಬಯಕೆಗಳು ಸಾವಿರ ಇರುತ್ತವೆ. ಅದ್ಯಾವುದನ್ನೂ ನಾನು ಹತ್ತಿಕ್ಕಿಕೊಂಡಿಲ್ಲ. ಊಟದ ವಿಚಾರದಲ್ಲಿ ಯಾವುದೇ ಕಟ್ಟುನಿಟ್ಟು ಮಾಡುತ್ತಿಲ್ಲ. ಈಗಂತೂ ತಿನ್ನುವುದು ತುಂಬ ಜಾಸ್ತಿಯಾಗಿದೆ. ಮುಂಚೆ ಸಿಹಿತಿನಿಸುಗಳನ್ನು ಕಡಿಮೆ ತಿನ್ನುತ್ತಿದ್ದೆ. ಪ್ರೆಗ್ನಂಟ್ ಆದ ನಂತರ ಸಿಹಿತಿನಿಸುಗಳ ಮೇಲಿನ ಮೋಹ ತುಂಬ ಹೆಚ್ಚಾಗಿದೆ. ಸ್ವೀಟ್ಸ್ ಅಂದ್ರೆ ಪ್ರಾಣ ಎನ್ನುವಂತಾಗಿದೆ.

ಯಾವ ಟೈಮಿನಲ್ಲಿ ಯಾವ ಸ್ವೀಟ್ ಕೊಟ್ಟರೂ ತಿನ್ನುತ್ತೇನೆ. ಅಷ್ಟರ ಮಟ್ಟಿಗೆ ಸ್ವೀಟ್ಸ್ ಹುಚ್ಚು ಅಂಟಿದೆ. ಗರ್ಭಿಣಿ ಆದನಂತರ ಇಂತಹದ್ದೊಂದು ಬದಲಾವಣೆಯನ್ನು ನನ್ನಲ್ಲಿ ಕಂಡಿದ್ದೇನೆ. ‘ಸೆಲೆಬ್ರೇಟಿಂಗ್ ಪ್ರೆಗ್ನನ್ಸಿ’ ಅಂತಾರಲ್ಲಾ ಹಾಗೆ ಪ್ರತಿಯೊಂದನ್ನೂ ಎಂಜಾಯ್ ಮಾಡುತ್ತಿದ್ದೇನೆ. ನನ್ನೆಲ್ಲಾ ಆಸೆಗಳಿಗೆ ಒತ್ತಾಸೆಯಾಗಿ ಪತಿ ಅಮಿತ್‌ ಶ್ರೀವಾತ್ಸವ್‌ ಇದ್ದಾರೆ.

ಇದರ ಜತೆಗೆ ತಾಯಿ ಆಗುತ್ತಿರುವ ಬೆರಗಂತೂ ನಿತ್ಯವೂ ಇದ್ದದ್ದೇ. ಏಕೆಂದರೆ ತಾಯ್ತನ ಎಂಬುದು ನಮ್ಮ ಈವರೆಗಿನ ಪ್ರಪಂಚವನ್ನೇ ಬದಲಾಯಿಸುತ್ತದೆ. ನಾನು ನೋಡಿದ ಹಾಗೆ ತಾಯಿಯಾದ ನಂತರ ಅನೇಕ ಅಮ್ಮಂದಿರ ಲೈಫ್‌ಸ್ಟೈಲ್ ಬದಲಾಗಿದೆ.

ಅವರ ಜೀವನದ ಸೆಂಟರ್‌ ಚೇಂಜ್ ಆಗಿದೆ. ಹಾಗಾಗಿ, ಅಂತಹದ್ದೊಂದು ಬದಲಾವಣೆಗಾಗಿ ನಾನು, ಅಮಿತ್‌, ನನ್ನ ಅಪ್ಪ ಅಮ್ಮ ಎಲ್ಲರೂ ಕಾಯುತ್ತಿದ್ದೇವೆ. ಆ ಕೌತುಕ ಎಂತಹವರಿಗಾದರೂ ಖುಷಿ ಕೊಟ್ಟೇ ಕೊಡುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry