ಕಾಂಗ್ರೆಸ್ ತೊರೆಯುತ್ತಿದ್ದೇನೆ: ವಿಶ್ವನಾಥ್

7

ಕಾಂಗ್ರೆಸ್ ತೊರೆಯುತ್ತಿದ್ದೇನೆ: ವಿಶ್ವನಾಥ್

Published:
Updated:
ಕಾಂಗ್ರೆಸ್ ತೊರೆಯುತ್ತಿದ್ದೇನೆ: ವಿಶ್ವನಾಥ್

ಕೆ.ಆರ್.ನಗರ: ‘ತಾಯಿಯಂತಿದ್ದ ಕಾಂಗ್ರೆಸ್‌ ಪಕ್ಷವನ್ನು ತೊರೆಯುತ್ತಿದ್ದೇನೆ’ ಎಂದು ಮುಖಂಡ ಎಚ್‌ವಿಶ್ವನಾಥ್‌ ಅವರು  ಶುಕ್ರವಾರ ಘೋಷಿಸಿದರು. ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ಅಡಗೂರು ಎಚ್.ವಿಶ್ವನಾಥ್ ಅಭಿಮಾನಿ ಬಳಗ ಶುಕ್ರವಾರ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ಜೆಡಿಎಸ್‌ನಿಂದ ಹೊರ ಬಂದಾಗ ಪಕ್ಷದ ವರಿಷ್ಠರು ಹಾಗೂ ಮುಖಂಡರನ್ನು ಮನವೊಲಿಸಿ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಮಾಡಿದೆ. ಬಳ್ಳಾರಿ ಗಣಿಧಣಿಗಳ ವಿರುದ್ಧ ತೊಡೆ ತಟ್ಟಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಬೇಕು ಎಂದು ಬಹಳಷ್ಟು ಜನ ಕನಸು ಕಂಡಿದ್ದರು. ಭ್ರಷ್ಟರಿಗೆ ಬುದ್ಧಿ ಕಲಿಸುತ್ತಾರೆ, ಬಡವರನ್ನು ಮೇಲೆ ಎತ್ತುತ್ತಾರೆ ಎಂದು ಕೊಂಡು ನನ್ನ ಎಲ್ಲ ಕನಸುಗಳನ್ನು ಬದಿಗೊತ್ತಿ  ಅವರು ಮುಖ್ಯಮಂತ್ರಿಯಾಗಲು  ಕಾರಣನಾದೆ. ಆದರೆ, ಅವರೇ ನನಗೆ ಮುಳುವಾದರು ಎಂದು ಅಳಲು ತೋಡಿಕೊಂಡರು.

ರಾಜಕಾರಣ ನಿಂತ ನೀರಲ್ಲ, ಅದು ಸದಾ ಹರಿಯುತ್ತಲೇ ಇರುತ್ತದೆ. ನನಗೂ 69 ವರ್ಷ ಆಗಿದೆ. ಸಾರ್ವಜನಿಕ ಜೀವ ನದ ಕೊನೆಯ ಮೆಟ್ಟಿಲಿನಲ್ಲಿ ಇದ್ದೇನೆ. ನನ್ನ ಕೊನೆಗಾಲ ಗೌರವಯುತವಾಗಿ ಅಂತ್ಯವಾಗಬೇಕು ಎಂದು ಕೊಂಡಿದ್ದೆ. ಅದರೆ ಅದಕ್ಕೂ ಅಡ್ಡಿಯಾಗಿದ್ದಾರೆ. ಇದು ನನಗೆ ಬಹಳ ನೋವು ತಂದಿದೆ. ರಾಜಕಾರಣಿಗಳ ಬಳಿ ಕ್ಷಮಾಗುಣ, ಕೃತಜ್ಞತಾ ಮನೋಭಾವ, ಬೆಳೆಯುವ, ಬೆಳೆಸುವ ಗುಣಗಳು ಇರಬೇಕು. ಆದರೆ ಬೆಳೆದು ತುಳಿಯುವಂತಾಗಬಾರದು ಎಂದರು.

‘ಸಿದ್ದರಾಮಯ್ಯನವರಿಗಾಗಿ, ನನ್ನ ಕ್ಷೇತ್ರವನ್ನು ದೊಡ್ಡಸ್ವಾಮೇಗೌಡ ಅವರಿಗಾಗಿ ತ್ಯಾಗ ಮಾಡಿದೆ. ಅದೇ ದೊಡ್ಡಸ್ವಾಮೇಗೌಡ ಅವರು ಈ ಸಭೆಗೆ ಬರದಂತೆ ನನ್ನ ಅನೇಕ ಅಭಿಮಾನಿಗಳನ್ನು ತಡೆದಿದ್ದಾರೆ ಎಂದು ಆರೋಪಿಸಿದ ವಿಶ್ವನಾಥ್‌, ನಾನು ಮನಸ್ಸು ಮಾಡಿದ್ದರೆ ಈ ಕ್ಷೇತ್ರದಲ್ಲಿ ದೊಡ್ಡಸ್ವಾಮೇಗೌಡ ಅವರಿಗೆ ನೀಡಿದ್ದ ಟಿಕೆಟ್ ಅನ್ನು ನನ್ನ ಮಗನಿಗೆ ಕೊಡಿಸಬಹುದಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘40ವರ್ಷಗಳ ರಾಜಕೀಯ ಬದುಕಿನಲ್ಲಿ  ನಾನೆಂದೂ ಭ್ರಷ್ಟ ರಾಜಕಾರಣಿ ಎಂದು ಕರೆಸಿಕೊಳ್ಳಲಿಲ್ಲ. ನನ್ನ ಅವಧಿಯಲ್ಲಿ ಕಾಂಗ್ರೆಸ್‌ಅನ್ನು ಬೆಳೆಸಿದೆ, ಕಾಗಿನೆಲೆ ಧರ್ಮಪೀಠ ಸ್ಥಾಪಿಸಿದೆ. ಅದು  ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ಲೂಟಿ ಹೊಡೆದು ನಾನು ಹೊರ ಬರುತಿಲ್ಲ. ಜನರ ಪ್ರೀತಿ, ವಿಶ್ವಾಸ ಇಟ್ಟುಕೊಂಡು ಪಾರದರ್ಶಕ ವಾಗಿ ಜನತೆಯ ಸೇವೆ ಸಲ್ಲಿಸಿದ್ದೇನೆ. ಅದು ಕೊನೆಯವರೆಗೂ ಉಳಿಯಬೇಕು’ ಎಂದು ಆಶಿಸಿದರು.

‘ಯಾರು ಹೇಗೆ ಇರಲಿ ಈ ಕ್ಷೇತ್ರದ ಮತದಾರರು ನನ್ನನ್ನು ಕೈಹಿಡಿದು ಬೆಳೆಸಿ ದ್ದಾರೆ, ನನ್ನ ಮನಸ್ಸಿನಲ್ಲಿ ಆದ ಘಾಸಿ, ನೋವು ತೋಡಿಕೊಳ್ಳಲು ನಿಮ್ಮನ್ನು ಇಲ್ಲಿಗೆ ಕರೆದಿದ್ದೇನೆ’ ಎಂದ ಅವರು, ‘ಪಕ್ಷದ ಹೈಕಮಾಂಡ್‌ ಆಗಿರುವ ಸಿದ್ದರಾಮಯ್ಯ ಅವರಿಗೆ ಮಾತ್ರ ಎಲ್ಲ ವನ್ನೂ ಸರಿಪಡಿಸಬಹುದಾದ ಶಕ್ತಿ ಇತ್ತು. ಆದರೆ, ಅವರು ಅದನ್ನು ಮಾಡಲಿಲ್ಲ. ಹೀಗೆ ಎಷ್ಟು ದಿನ ನಡೆಯುತ್ತದೆ ಎಂಬು ದನ್ನು ಕಾದು ನೋಡುತ್ತೇನೆ’ ಎಂದರು.

‘ಯಾವ ಪಕ್ಷಕ್ಕೆ ಹೋಗಬೇಕು ಎನ್ನುವುದು ಇನ್ನೂ ನಿರ್ಧಾರ ಮಾಡಿಲ್ಲ. ಅಭಿಮಾನಿಗಳು ತೋರಿಸಿದ ಮಾರ್ಗ ದಲ್ಲಿ ನಡೆಯಲು ಬಯಸಿದ್ದೇನೆ’ ಎಂದರು. ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮೂಳೆ ತಜ್ಞ ಮೆಹಬೂಬ್ ಖಾನ್, ಜಿಲ್ಲಾ ಪಂಚಾಯಿತಿ ಸದಸ್ಯ ಅಮಿತ್ ವಿ.ದೇವರಹಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಟಿ.ಮಂಜುನಾಥ್, ಹಿರಿಯ ವಕೀಲ ಕೃಷ್ಣೇಅರಸ್  ಪುರಸಭೆ ಸದಸ್ಯರಾದ ಪ್ರಭುಶಂಕರ್, ಕೋಳಿ ಪ್ರಕಾಶ್, ಕಾಳೇನಹಳ್ಳಿ ಅಪ್ಪಾಜಿಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry