ಗೌಣವಾದ ಸಮಸ್ಯೆ

7

ಗೌಣವಾದ ಸಮಸ್ಯೆ

Published:
Updated:
ಗೌಣವಾದ ಸಮಸ್ಯೆ

ಇಪ್ಪತ್ತು ವರುಷಗಳ ಹಿಂದೆ ನಾನು ಮೈಸೂರಿನಲ್ಲಿದ್ದಾಗ ನಡೆದ ಘಟನೆಯಿದು. ಮಗಳು ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ಒಂದು ದಿನ ಶಾಲೆಯಿಂದ ಬಂದವಳು, ‘ಡ್ಯಾಡಿ, ನಾಳೆಯಿಂದ ನಾನು ಆಟೊದಲ್ಲಿ ಹೋಗುವುದಿಲ್ಲ.

ನನ್ನನ್ನು ನಿನ್ನ ಸ್ಕೂಟರ್‌ನಲ್ಲೇ ಬಿಡು’ ಎಂದು ಅಳುತ್ತಾ ಕುಳಿತಳು. ಕಾರಣ ತಿಳಿಯದ ನಾನು ಅವಳನ್ನು ಸಮಾಧಾನಪಡಿಸಿ ಕಾರಣ ಕೇಳಿದೆ. ಅದಕ್ಕವಳು ‘ಆಟೊದಲ್ಲಿ ಕೂರಲು ಜಾಗ ಇರುವುದಿಲ್ಲ’ ಎಂಬ ಕಾರಣ ಮುಂದಿಟ್ಟಳು. ‘ಅಷ್ಟೇ ತಾನೆ, ನೋಡೋಣ’ ಎಂದು ಹೇಳಿ ಸಮಾಧಾನಪಡಿಸಿದೆ.

ಆಟೊ ಡ್ರೈವರ್‌ ಕೆಂಪಣ್ಣನನ್ನು ಕರೆಸಿ, ‘ಎಷ್ಟು ಮಕ್ಕಳಿದ್ದಾರೆ, ಜಾಗದ ಕೊರತೆ ಇದೆಯೇ’ ಎಂದೆಲ್ಲ ಕೇಳಿದೆ. ಅದಕ್ಕವರು, ‘ಬಿಡಿ ಸಾರ್‌, ಇರೋದೆ ನಾಲ್ಕು ಮಕ್ಕಳು. ನಾನು ಹೇಳಿ ಸರಿ ಮಾಡ್ತೀನಿ’ ಎನ್ನುವ ಭರವಸೆ ಕೊಟ್ಟ ಮೇಲೆ, ನಾನು ನನ್ನ ಮಗಳನ್ನು ಒಪ್ಪಿಸಿ ಕಳುಹಿಸಲಾರಂಭಿಸಿದೆ.

ಆದಾದ ಮೂರನೇ ದಿನಕ್ಕೆ ಮಗಳು ಅದೇ ರಾಗ ತೆಗೆದಳು. ಮತ್ತೆ ಕೆಂಪಣ್ಣನನ್ನು ಮನೆಗೆ ಕರೆಯಿಸಿದೆ. ಹೀಗೆ ಮುಂದುವರಿದರೆ ನನ್ನ ಮಗಳನ್ನು ಆಟೊ ಬಿಡಿಸಬೇಕಾಗುತ್ತದೆ ಎಂದೆ. ‘ಇದೆಲ್ಲಾ ಆ ರೂಪಳಿಂದಲೇ ಸಾರ್‌’ ಎಂದ ಕೆಂಪಣ್ಣ. 

‘ನೀನೇ ಹೇಳಿ ಸರಿಮಾಡ್ತಿಯೋ, ಇಲ್ಲ ನಾನೇ ಅವರಪ್ಪ ಅಮ್ಮರಿಗೆ ಹೇಳಬೇಕೋ’ ಎಂದೆ. ಆ ಮಾತನ್ನು ಕೇಳಿದ ಕೆಂಪಣ್ಣ ಗಾಬರಿ ಗೊಂಡವನಂತೆ – ‘ಬೇಡ ಸಾರ್‌. ಆ ಮಗುವಿಗೆ ತಾಯಿ ಇಲ್ಲ. ಮಲತಾಯಿ ಇರೋದು. ಅದಕ್ಕೆ ಈ ಮೊಂಡಾಟ. 

ನೀವೇನಾದರೂ ಅವರಿಗೆ ಈ ಸುದ್ದಿ ಮುಟ್ಟಿಸಿದರೆ, ಆಕೆ ಮಗುವನ್ನು ಶಾಲೆಯಿಂದಲೇ ಬಿಡಿಸಿಬಿಡುತ್ತಾಳೆ’ ಎಂದ. ಆತನ ಮಾತನ್ನು ಕೇಳಿದ ಮೇಲೆ ಸಮಸ್ಯೆಯೇ ಗೌಣವಾಯ್ತು. ಮುಂದೆಂದೂ ನನ್ನ ಮಗಳು ಸಹ ಈ ತೊಂದರೆ ಬಗ್ಗೆ ನನ್ನ ಬಳಿ ದೂರಿಲ್ಲ.                  

ಎ.ಜೆ. ಲಾರೆನ್ಸ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry