ಜೂನ್‌ 12ರ ಕರ್ನಾಟಕ ಬಂದ್‌ಗೆ ಸಿಗದ ಬೆಂಬಲ

7
ಬೆಂಬಲ ನೀಡದಿರಲು ಹಲವು ಸಂಘಟನೆಗಳ ನಿರ್ಧಾರ

ಜೂನ್‌ 12ರ ಕರ್ನಾಟಕ ಬಂದ್‌ಗೆ ಸಿಗದ ಬೆಂಬಲ

Published:
Updated:
ಜೂನ್‌ 12ರ ಕರ್ನಾಟಕ ಬಂದ್‌ಗೆ ಸಿಗದ ಬೆಂಬಲ

ಬೆಂಗಳೂರು: ಸೋಮವಾರ (ಇದೇ 12) ಕರ್ನಾಟಕ ಬಂದ್‌ ನಡೆಸಲು ಕನ್ನಡ ಒಕ್ಕೂಟ ನೀಡಿರುವ ಕರೆಗೆ ಬೆಂಬಲ ನೀಡದಿರಲು ಬಹುತೇಕ ಸಂಘಟನೆಗಳು ನಿರ್ಧರಿಸಿದ್ದು, ಬಂದ್ ವಿಫಲವಾಗುವ ಸಾಧ್ಯತೆ ಇದೆ.

ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸಲು ಮತ್ತು ಕಳಸಾ– ಬಂಡೂರಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ವಾಟಾಳ್‌ ನಾಗರಾಜ್ ಮತ್ತು ಸಾ.ರಾ. ಗೋವಿಂದು ನೇತೃತ್ವದ ಕನ್ನಡ ಒಕ್ಕೂಟ ಬಂದ್‌ಗೆ ಕರೆ ನೀಡಿದೆ. ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಸೇರಿ ಇನ್ನೂ ಹಲವು ಕನ್ನಡ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡದಿರಲು ನಿರ್ಧರಿಸಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಆದರೆ, ಚಾಲಕರು ಮತ್ತು ನಿರ್ವಾಹಕರು  ಎಂದಿನಂತೆ ಕರ್ತವ್ಯ ನಿರ್ವಹಿಸಲಿದ್ದು, ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗುವುದಿಲ್ಲ ಎಂದೂ ಸಂಘ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ಖಾಸಗಿ ಶಾಲಾ–ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ, ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರ ಸಂಘ, ಬೆಂಗಳೂರು ನಗರ ಹೋಟೆಲ್‌ ಮಾಲೀಕರ ಸಂಘ, ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ವರ್ತಕರ ಸಂಘ, ರಾಜ್ಯ ತೈಲ ವರ್ತಕರ ಸಂಘಗಳು ತಮ್ಮ ಬೆಂಬಲ ಇಲ್ಲ ಎಂದು ತಿಳಿಸಿವೆ.  ಬಸ್‌ಗಳು ಮತ್ತು ಆಟೋರಿಕ್ಷಾಗಳ ಎಂದಿನಂತೆ ಸಂಚರಿಸುತ್ತವೆ. ಪೆಟ್ರೋಲ್ ಬಂಕ್‌ಗಳು, ಶಾಲಾ–ಕಾಲೇಜುಗಳು, ಹೋಟೆಲ್‌ಗಳು, ಅಂಗಡಿಗಳು ಸಹ ಕಾರ್ಯನಿರ್ವಹಿಸುತ್ತವೆ.

ಪುರಭವನದಿಂದ ಮೆರವಣಿಗೆ

‘ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌ ಇರಲಿದೆ. ಅಂದು ಬೆಳಿಗ್ಗೆ ಪುರಭವನದಿಂದ ವಿಧಾನಸೌಧವರೆಗೆ ಮೆರವಣಿಗೆ ನಡೆಸುತ್ತೇವೆ’ ಎಂದು ವಾಟಾಳ್‌ ನಾಗರಾಜ್‌ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಕೋಡಿಹಳ್ಳಿ ಚಂದ್ರಶೇಖರ್‌, ‘ರೈತರ ಸಾಲ ಮನ್ನಾ ಮಾಡಬೇಕು. ರೈತರ ಮೇಲೆ ದಾಖಲಿಸಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು     ಆಗ್ರಹಿಸಿ ಬಂದ್‌ ಮಾಡುತ್ತಿದ್ದೇವೆ’ ಎಂದರು. 

ಮುಖ್ಯಾಂಶಗಳು

* ಕನ್ನಡ ಒಕ್ಕೂಟದಿಂದ ಸೋಮವಾರ ಬಂದ್‌ಗೆ ಕರೆ

* ಶಾಲಾ- ಕಾಲೇಜು, ಹೋಟೆಲ್‌ ಎಂದಿನಂತೆ ಕಾರ್ಯನಿರ್ವಹಣೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry