‘ಸನ್ನಿ ಲಿಯೋನ್ ಆಗುತ್ತೇನೆ’

7

‘ಸನ್ನಿ ಲಿಯೋನ್ ಆಗುತ್ತೇನೆ’

Published:
Updated:
‘ಸನ್ನಿ ಲಿಯೋನ್ ಆಗುತ್ತೇನೆ’

ಒಂದು ಕೋಣೆ. ಅಪ್ಪ, ಅಮ್ಮ ಮತ್ತು ಮಗಳು. ‘ನಾನು ಸನ್ನಿ ಲಿಯೋನ್ ಆಗುತ್ತೇನೆ’ ಎಂದು ಮಗಳು ಹೇಳುತ್ತಾಳೆ. ಮಗಳ ಈ ನಿರ್ಧಾರದಿಂದ ಅಪ್ಪ ಅಮ್ಮ ಒಂದು ಕ್ಷಣ ಸ್ತಬ್ಧರಾಗುತ್ತಾರೆ. ಮಗಳು ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಾಗಿನ ಸಂಭಾಷಣೆಗಳು ಮಹಿಳೆಯ ಮೇಲೆ ಸಮಾಜ ಹೇರಿರುವ ‘ಮೌಲ್ಯ’ಗಳನ್ನು   ಸೈದ್ಧಾಂತಿಕವಾಗಿ ತರಾಟೆಗೆ ತೆಗೆದುಕೊಂಡಂತಿದೆ. ಇದು ರಾಮ್ ಗೋಪಾಲ್ ವರ್ಮ ಅವರ ಕಿರು ಚಿತ್ರ ‘ಮೇರಿ ಬೇಟಿ ಸನ್ನಿ ಲಿಯೋನ್ ಬನಾ ಚಾತೀ ಹೈ’ ದ ಕಥಾ ವಸ್ತು.

ರಾಮ್ ಗೋಪಾಲ್ ವರ್ಮ ತಮ್ಮ ಹೇಳಿಕೆ ಮತ್ತು ವಿಭಿನ್ನ ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ನಿರ್ದೇಶಕ. ಈ ಚಿತ್ರವೂ ಅವರ ವಿಭಿನ್ನತೆಗೆ ಹಿಡಿದ ಕನ್ನಡಿಯಾಗಿದೆ. ಈ ಹಿಂದೆಯೂ ‘ಮೈ ಮಾಧುರಿ ದೀಕ್ಷಿತ್ ಬನ್‌ನಾ ಚಾಹತಿ ಹೂಂ’ ಎನ್ನುವ ಚಿತ್ರವನ್ನು 2003ರಲ್ಲಿ ನಿರ್ಮಿಸಿದ್ದರು. ಇದರ ಮುಂದಿನ ಸರಣಿಯಾಗಿ ಮತ್ತು ಮತ್ತಷ್ಟು ಗಟ್ಟಿತನದಿಂದ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಿನಿಮಾದುದ್ದಕ್ಕೂ ಹೇಗೆ ಪುರುಷ ಕೇಂದ್ರಿತ ಸಮಾಜ ಮಹಿಳೆಯರ ಆಯ್ಕೆಗಳ ಮೇಲೆ ಹಿಡಿತ ಸಾಧಿಸುತ್ತಾ ಬಂದಿದೆ ಮತ್ತು ಅವುಗಳನ್ನು ವ್ಯವಸ್ಥಿತವಾಗಿ ರೂಪಿಸುತ್ತಾ ಬಂದಿದೆ ಎನ್ನುವುದನ್ನು ಚರ್ಚಿಸಲಾಗಿದೆ. ಈ ಚಿತ್ರದ ಶಕ್ತಿ ಇದರ ಸಂಭಾಷಣೆ. ಇದು ಕೇವಲ ಅಪ್ಪ, ಅಮ್ಮ ಮತ್ತು ಮಗಳ ಸಂಭಾಷಣೆಯಾಗಿ ಸೀಮಿತವಾಗದೆ, ಸಮಾಜ ಮತ್ತು ಮಹಿಳೆಯ ಸಂಭಾಷಣೆಯಾಗಿ ಬಹಳ ಅರ್ಥಪೂರ್ಣವಾಗಿ ಮತ್ತು ತಾತ್ವಿಕವಾಗಿ ವಿಸ್ತಾರವನ್ನು ಪಡೆದುಕೊಳ್ಳುತ್ತದೆ.

ಕೇವಲ 11ನಿಮಿಷ ಇರುವ ಈ ಚಿತ್ರ ಉಪನಿಷತ್ ಕಾಲದಿಂದ ಹಿಡಿದು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣಿನ ಮೇಲಿನ ನಿರ್ಬಂಧದ ಕುರಿತು ಉದಾಹರಣೆಗಳೊಂದಿಗೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಕೊನೆಯಲ್ಲಿ ಅಪ್ಪ ಅಮ್ಮ ಎದಿರುಬದಿರು ಕೂತು ತಮ್ಮ ತಮ್ಮ ಮುಖ ನೋಡಿಕೊಳ್ಳುವಲ್ಲಿಗೆ  ಚಿತ್ರ ಕೊನೆಗೊಳ್ಳುತ್ತದೆ.

ಮಗಳ ಪಾತ್ರವನ್ನು ನೈನಾ ಗಂಗೂಲಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ತಂದೆ ಪಾತ್ರದಲ್ಲಿ ಮಕರಂದ ದೇಶಪಾಂಡೆ ಹಾಗೂ ತಾಯಿಯ ಪಾತ್ರದಲ್ಲಿ ದಿವ್ಯ ಜಗ್ಡೇಲ್ ಅವರು ಉತ್ತಮವಾಗಿ ನಟಿಸಿದ್ದಾರೆ. 

*

–ಸುಕೃತ ಎಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry