ರಾಯಣ್ಣ ಬ್ರಿಗೇಡ್‌ ಮುಗಿದ ಅಧ್ಯಾಯ: ಈಶ್ವರಪ್ಪ

7

ರಾಯಣ್ಣ ಬ್ರಿಗೇಡ್‌ ಮುಗಿದ ಅಧ್ಯಾಯ: ಈಶ್ವರಪ್ಪ

Published:
Updated:
ರಾಯಣ್ಣ ಬ್ರಿಗೇಡ್‌ ಮುಗಿದ ಅಧ್ಯಾಯ: ಈಶ್ವರಪ್ಪ

ಶಿವಮೊಗ್ಗ: ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಟ್ಟುನಿಟ್ಟಿನ ಸೂಚನೆ ನೀಡಿದ ಕಾರಣ ರಾಯಣ್ಣ ಬ್ರಿಗೇಡ್‌ನಿಂದ ಹಿಂದೆ ಸರಿದಿದ್ದೇನೆ. ಬ್ರಿಗೇಡ್‌ ಪದಾಧಿಕಾರಿಗಳು ಬಿಜೆಪಿಗೆ ಸೇರಲು ಪಕ್ಷದ ವರಿಷ್ಠರು ಸಮ್ಮತಿಸಿದ್ದಾರೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಖಚಿತಪಡಿಸಿದರು.

‘ರಾಜ್ಯದ ಜನರು, ಪಕ್ಷದ ಕಾರ್ಯಕರ್ತರ ಗೊಂದಲ ನಿವಾರಣೆಗಾಗಿ ಬ್ರಿಗೇಡ್‌ ಚಟುವಟಿಕೆ ಸ್ಥಗಿತಗೊಳಿಸಲು ಒಪ್ಪಿಗೆ ನೀಡಿದ್ದೇನೆ. ಬ್ರಿಗೇಡ್‌ ಮುಖಂಡರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ನೀಡುವುದಾಗಿ ಅಮಿತ್ ಷಾ ಭರವಸೆ ನೀಡಿದ್ದಾರೆ.

ಬ್ರಿಗೇಡ್‌ ಈಗ ಮುಗಿದ ಅಧ್ಯಾಯ. ಇನ್ನು ಮುಂದೆ ಬಿಜೆಪಿ ಒಬಿಸಿ ಮೋರ್ಚಾ ಮೂಲಕವೇ ದಲಿತರು, ಹಿಂದುಳಿದ ವರ್ಗದ ಜನರನ್ನು ಸಂಘಟಿಸಲಾಗುವುದು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಚಾರವಾದಿಗಳ ತೃಪ್ತಿಪಡಿಸಲು ನಾಟಕ: ವಿಚಾರವಾದಿ ನಾಯಕರ ತೃಪ್ತಿಪಡಿಸಲು ಸರ್ಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಯ ನಾಟಕವಾಡುತ್ತಿದೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ರಚನೆಗೆ ಕಾಂಗ್ರೆಸ್ ಸಹಕಾರ ನೀಡುತ್ತಿಲ್ಲ. ಅಹಿಂದ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ನಾಯಕರನ್ನು ಒಪ್ಪಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡುವ ಬೆದರಿಕೆ ಹಾಕಬೇಕು ಎಂದು ಸಲಹೆ ನೀಡಿದರು. 

ಜಾತಿ ಜನಗಣತಿ ವರದಿ ಸಿದ್ಧವಾಗಿದ್ದರೂ, ವರದಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ತಡ ಮಾಡಿದಷ್ಟೂ ಕಾಂಗ್ರೆಸ್ ನಾಶ ಸನ್ನಿಹಿತವಾಗುತ್ತದೆ ಎಂದು ಎಚ್ಚರಿಸಿದರು.

****

ವಿನೋದ್ ವಿರುದ್ಧ ಮಾನನಷ್ಟ ಮೊಕದ್ದಮೆ

ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯಕ್ಕೆ  (ಇ.ಡಿ)ದೂರು ನೀಡಿರುವ ವಕೀಲ ವಿನೋದ್ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.

‘ಅವರ ತಂತ್ರಕ್ಕೆ ಆರಂಭದಿಂದಲೂ ಸೊಪ್ಪು ಹಾಕಲಿಲ್ಲ. ಲೋಕಾಯುಕ್ತರೇ ಕ್ಲೀನ್‌ಚಿಟ್‌ ನೀಡಿದ್ದರೂ, ಈಗ ಮತ್ತೆ ಹೊಸ ಆಟ ಶುರು ಮಾಡಿದ್ದಾರೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry