ಮಾಹಿತಿ ಫಲಕಗಳ ಮೇಲೂ ಭಿತ್ತಿಪತ್ರಗಳು

7

ಮಾಹಿತಿ ಫಲಕಗಳ ಮೇಲೂ ಭಿತ್ತಿಪತ್ರಗಳು

Published:
Updated:
ಮಾಹಿತಿ ಫಲಕಗಳ ಮೇಲೂ ಭಿತ್ತಿಪತ್ರಗಳು

ಶಿವಮೊಗ್ಗ: ನಗರದ ವಿವಿಧ ಬಡಾವಣೆ, ರಸ್ತೆಗಳ ಮಾಹಿತಿ ನೀಡುವ ಮಾರ್ಗ ಫಲಕ, ನಾಮಫಲಕಗಳ ಮೇಲೆ ಬೇಕಾಬಿಟ್ಟಿ ಭಿತ್ತಿಪತ್ರ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಗರಪಾಲಿಕೆ ನಿರಾಸಕ್ತಿ ತೋರುತ್ತಿದೆ.

ನಗರದ ಪ್ರಮುಖ ರಸ್ತೆ, ವಾಣಿಜ್ಯ ವಹಿವಾಟಿನ ಕೇಂದ್ರಗಳಲ್ಲಿ ಹೋರ್ಡಿಂಗ್‌ ತೂಗು ಹಾಕುವ ಮತ್ತು ಡಿಜಿಟಲ್‌ ಜಾಹೀರಾತು ಫಲಕ ಹಾಕುವ ಯೋಜನೆ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪ್ರತಿ ವರ್ಷ ಪಾಲಿಕೆಗೆ ಸುಮಾರು ₹ 60 ಲಕ್ಷದಷ್ಟು ನಷ್ಟವಾಗುತ್ತಿದ್ದರೂ ಖಚಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾಲಿಕೆ  ವಿಫಲವಾಗಿದೆ.

ಶಿವಮೊಗ್ಗ ನಗರ 10 ವರ್ಷಗಳಲ್ಲಿ ಸಾಕಷ್ಟು ಬೆಳವಣಿಗೆ ಹೊಂದಿದೆ.  ನಾಲ್ಕು ಹಂತಗಳಲ್ಲಿ  ವಿನೋಬನಗರ, ಗೋಪಾಳಗೌಡ ಬಡಾವಣೆ ರವೀಂದ್ರ ನಗರ, ರಾಜೇಂದ್ರನಗರ, ಗಾಂಧಿನಗರ, ವೆಂಕಟೇಶನಗರ, ತಿಲಕ್‌ನಗರ, ಚನ್ನಪ್ಪಲೇಔಟ್‌, ವಿನಾಯಕ ನಗರ, ಬಸವನಗುಡಿ, ಜಯನಗರ, ಹೊಸಮನೆ, ಶರಾವತಿ ನಗರ, ಮಿಷನ್‌ ಕಾಂಪೌಂಡ್, ಅಚ್ಯುತ್‌ರಾವ್ ಲೇಔಟ್‌ ಸೇರಿದಂತೆ ಹಲವು ಬಡಾವಣೆಗಳಲ್ಲಿ ಈಚೆಗಷ್ಟೇ ವ್ಯವಸ್ಥಿತ ಮಾರ್ಗಸೂಚನಾ ಫಲಕ ಅಳವಡಿಸಲಾಗಿದೆ.

ಮಾರ್ಗದ ತಿರುವು, ಮುಖ್ಯ ರಸ್ತೆಗಳ ಮಾಹಿತಿ ಜತೆಗೆ, ಆ ಭಾಗದ ಪಾಲಿಕೆ ಸದಸ್ಯರು. ಶಾಸಕರ ಹೆಸರನ್ನೂ ನಮೂದಿಸಲಾಗಿದೆ. ಹೊಸದಾಗಿ ಬಂದವರಿಗೆ ಫಲಕಗಳು ಸೂಕ್ತ ಮಾರ್ಗದರ್ಶನ ನೀಡುತ್ತವೆ. ಆದರೆ, ಈ ಫಲಕಗಳ ಮೇಲೆ ಜಾಹೀರಾತು ಭಿತ್ತಿಪತ್ರಗಳನ್ನು ಕೆಲವರು ಅಂಟಿಸುತ್ತಿದ್ದಾರೆ. ಇಂಥವರ ವಿರುದ್ಧ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ.

ಪೂರ್ಣಗೊಳ್ಳದ ಹೋರ್ಡಿಂಗ್ಸ್‌ ಪ್ರಕ್ರಿಯೆ: ಕೇಂದ್ರ ಸರ್ಕಾರದ  ‘ಸ್ಮಾರ್ಟ್‌ಸಿಟಿ’ ಯೋಜನೆಗೆ ಆಯ್ಕೆ ಯಾಗಿದೆ. ಆಯ್ಕೆಗೂ ಮೊದಲೇ ಅನಧಿಕೃತವಾಗಿ ಹಾಕಲಾಗಿದ್ದ ಹೋರ್ಡಿಂಗ್ಸ್‌ ತೆರವುಗೊಳಿಸಲು ಅಂದಿನ ಜಿಲ್ಲಾಧಿಕಾರಿ ವಿಫುಲ್‌ ಬನ್ಸಲ್‌ ಕ್ರಮ ಕೈಗೊಂಡಿದ್ದರು. ಅಂದಾಜಿನ ಪ್ರಕಾರ ಎರಡು ವರ್ಷಗಳ ಹಿಂದೆ ನಗರದ ವಿವಿಧೆಡೆ ಅಧಿಕೃತವಾಗಿ 100 ಹೋರ್ಡಿಂಗ್ಸ್‌ ಇದ್ದರೆ, ಅನಧಿಕೃತವಾಗಿ 500ಕ್ಕೂ ಹೆಚ್ಚು ಹೋರ್ಡಿಂಗ್ಸ್‌ ಹಾಕಲಾಗಿತ್ತು. ಖಾಸಗಿ ಏಜೆನ್ಸಿಗಳು ಒಂದು ಚದರ ಅಡಿಗೆ ಪಾಲಿಕೆಗೆ ನೀಡುತ್ತಿದ್ದ  ಶುಲ್ಕ ಕೇವಲ ₹ 10ರಿಂದ 15 ಮಾತ್ರ. ಹೀಗೆ ಖಾಸಗಿ ಏಜೆನ್ಸಿಗಳು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಿದ್ದವು.

ಅದಕ್ಕೆ ಕಡಿವಾಣ ಹಾಕುತ್ತಿದಂತೆ ಕೆಲವರು ಕೋರ್ಟ್‌ ಮೊರೆ ಹೋಗಿ ದ್ದರು. ನಂತರ ಕೋರ್ಟ್‌ ಪಾಲಿಕೆ ಪರ ಆದೇಶ ನೀಡಿದೆ. ಎರಡು ದಿನಗಳ ಹಿಂದೆ ಇಂಥ ನೂರಾರು ಅನಧಿಕೃತ ಫ್ಲೆಕ್ಸ್ ತೆರವು ಗೊಳಿಸಲಾಗಿದೆ. ಆದರೆ, ಆದಾಯ ತರುವ ಮೂಲಗಳತ್ತ ಪಾಲಿಕೆ ಆಸಕ್ತಿ ತೋರಿಲ್ಲ.

‘ನಾಮಫಲಕಗಳ ಮೇಲೆ  ಭಿತ್ತಿಪತ್ರ ಅಂಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವೃತ್ತ, ರಸ್ತೆಗಳಿಗೆ ಇಟ್ಟ  ಹೆಸರನ್ನೇ ಅಧಿಕೃತವಾಗಿ ಬಳಸಲು ಸೂಚಿಸಬೇಕು’ ಎಂದು  ದುರ್ಗಿಗುಡಿ ಚೆನ್ನುಡಿ ಬಳಗದ ತ್ಯಾಗರಾಜ ಮಿತ್ಯಾಂತ ಒತ್ತಾಯಿಸುತ್ತಾರೆ.

* * 

ಹೋರ್ಡಿಂಗ್ಸ್‌ ತೂಗು  ಹಾಕುವ ಕುರಿತು ಶೀಘ್ರ ಸಭೆ ಕರೆಯಲಾಗುವುದು.  ವಿಳಂಬ ಮಾಡದೆ ತಕ್ಷಣವೇ  ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಎನ್‌.ಏಳುಮಲೈ,

ಮೇಯರ್, ನಗರಪಾಲಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry