ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ‘ಸುಳ್ಳು ಸುದ್ದಿ’ ಹಬ್ಬಿಸಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ

7

ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ‘ಸುಳ್ಳು ಸುದ್ದಿ’ ಹಬ್ಬಿಸಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ

Published:
Updated:
ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ‘ಸುಳ್ಳು ಸುದ್ದಿ’ ಹಬ್ಬಿಸಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ

ನವದೆಹಲಿ: ಕಾರ್ಗಿಲ್‌ನಲ್ಲಿ ಸೈನಿಕರು ಭಾರತದ ಧ್ವಜವನ್ನು ಎತ್ತಿಹಿಡಿಯುತ್ತಿರುವಂತಹ ಎಡಿಟ್‌ ಮಾಡಿದ ಫೋಟೊ ಹಾಗೂ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್‌ ‘ರಾಷ್ಟ್ರವಿರೋಧಿ’ ಘೋಷಣೆ ಕೂಗುತ್ತಿರುವಂತಹ ವಿಡಿಯೊ ಹಬ್ಬಿಸುವ ಮೂಲಕ ‘ಸುಳ್ಳು ಸುದ್ದಿ’ಗಳ ಪ್ರಚಾರಕರಂತಾಗಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಈಗ ಮತ್ತೊಂದು ಸುಳ್ಳು ಸುದ್ದಿ ಹಬ್ಬಿಸಿರುವ ಸಂಗತಿ ಬಯಲಾಗಿದೆ.

ಈ ಬಾರಿ ಸಂಬಿತ್‌ ಎನ್‌ಡಿಟಿವಿ ಸುದ್ದಿವಾಹಿನಿಯನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿಯೊಂದನ್ನು ಹಬ್ಬಿಸಿದ್ದಾರೆ. ಪಾಕಿಸ್ತಾನದ ವೆಬ್‌ಸೈಟ್‌ ‘ಟೈಮ್ಸ್‌ ಆಫ್‌ ಇಸ್ಲಾಮಾಬಾದ್‌’ ಮರು ಪ್ರಕಟಣೆ ಮಾಡಿದ್ದ ಸುದ್ದಿಯೊಂದನ್ನು ಸಂಬಿತ್‌ ಭಾನುವಾರ (ಜೂನ್‌ 11) ರೀಟ್ವೀಟ್‌ ಮಾಡಿದ್ದಾರೆ.

ಇತ್ತೀಚೆಗೆ ಎನ್‌ಡಿಟಿವಿ ಸುದ್ದಿವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಬಿತ್‌, ‘ಎನ್‌ಡಿಟಿವಿ ಬಿಜೆಪಿ ವಿರುದ್ಧದ ಅಜೆಂಡಾ ಹೊಂದಿದೆ’ ಎಂದು ಆರೋಪಿಸಿದ್ದರು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ವಾಹಿನಿಯು ಕಾರ್ಯಕ್ರಮದ ಮಧ್ಯದಲ್ಲೇ ಸಂಬಿತ್ ಅವರನ್ನು ಚರ್ಚೆಯಿಂದ ಹೊರಗೆ ಕಳಿಸಿತ್ತು.

ಇದರಿಂದ ಎನ್‌ಡಿಟಿವಿಯ ಮೇಲೆ ಇನ್ನಷ್ಟು ಕೋಪಗೊಂಡಿರುವ ಸಂಬಿತ್‌ ಸಂದರ್ಭ ಸಿಕ್ಕಾಗಲೆಲ್ಲಾ ಸುಳ್ಳು ಸುದ್ದಿಗಳ ಮೂಲಕ ಎನ್‌ಡಿಟಿವಿ ಸುದ್ದಿವಾಹಿನಿಯ ವಿರುದ್ಧ ಆರೋಪ ಮಾಡುತ್ತಲೇ ಇದ್ದಾರೆ. ಈಗ ಪ್ರತೀಕಾರದ ಅಸ್ತ್ರವಾಗಿ ‘ಟೈಮ್ಸ್‌ ಆಫ್‌ ಇಸ್ಲಾಮಾಬಾದ್‌’ನಲ್ಲಿ ಮರು ಪ್ರಕಟಗೊಂಡಿದ್ದ ಸುದ್ದಿಯನ್ನು ಬಳಸಿಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ ಎಂಬುದು ಬಹಿರಂಗಗೊಂಡಿರುವುದರಿಂದ ಸಂಬಿತ್‌ ಅವರಿಗೆ ಮುಖಭಂಗವಾದಂತಾಗಿದೆ.

‘ನರೇಂದ್ರ ಮೋದಿ ಅವರ ‘ಮೇಕ್‌ ಇನ್‌ ಇಂಡಿಯಾ’ ಅಭಿಯಾನ ವಿಫಲವಾಗಿದೆ’ ಎಂಬ ಸುದ್ದಿಯನ್ನು ‘ಟೈಮ್ಸ್‌ ಆಫ್‌ ಇಸ್ಲಾಮಾಬಾದ್‌’ ಮರು ಪ್ರಕಟಣೆ ಮಾಡಿತ್ತು. ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗಾಗಿ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಬರೆದ ಲೇಖನವನ್ನು ಮರು ಪ್ರಕಟಿಸಿದ್ದ ‘ಟೈಮ್ಸ್‌ ಆಫ್‌ ಇಸ್ಲಾಮಾಬಾದ್‌’ ಸುದ್ದಿ ಮೂಲವನ್ನು ಉಲ್ಲೇಖಿಸುವಾಗ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಬದಲಿಗೆ ‘ಎನ್‌ಡಿಟಿವಿ’ಯನ್ನು ಉಲ್ಲೇಖಿಸಿತ್ತು.

ಎನ್‌ಡಿಟಿವಿ ಉಲ್ಲೇಖವನ್ನೇ ಆಧಾರವಾಗಿಸಿಕೊಂಡು ಸಂಬಿತ್‌ ‘ಟೈಮ್ಸ್‌ ಆಫ್‌ ಇಸ್ಲಾಮಾಬಾದ್‌’ ಸುದ್ದಿಯ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಎನ್‌ಡಿಟಿವಿ ತಾನು ಆ ಸುದ್ದಿ ಪ್ರಕಟಿಸಿಲ್ಲ ಎಂಬುದನ್ನು ಟ್ವೀಟ್‌ ಮಾಡಿತ್ತು. ಅಲ್ಲದೆ, ಸಂಬಿತ್‌ ತಮ್ಮ ವಿರುದ್ಧ ‘ಅಜೆಂಡಾ’ ಸಾಬೀತು ಮಾಡಲು ಈ ಸುಳ್ಳು ಸುದ್ದಿಯನ್ನು ಬಳಸಿಕೊಂಡಿದ್ದಾರೆಂಬ ಅಂಶವನ್ನು ಗುರುತಿಸಿದ ಎನ್‌ಡಿಟಿವಿ ಈ ಬಗ್ಗೆ ಸಂಬಿತ್‌ ಅವರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದೆ.

‘ಎನ್‌ಡಿಟಿವಿ ಬಿಜೆಪಿ ವಿರುದ್ಧದ ಅಜೆಂಡಾ ಹೊಂದಿದೆ’ ಎಂದು ಪ್ರಚಾರ ಮಾಡಲು ಸಂಬಿತ್‌ ಈ ಹಿಂದೆ ಬಳಸಿಕೊಂಡಿರುವ ಬಹುತೇಕ ಟ್ವೀಟ್‌ಗಳು ‘ಟೈಮ್ಸ್‌ ಆಫ್‌ ಇಸ್ಲಾಮಾಬಾದ್‌’ ವೆಬ್‌ಸೈಟ್‌ನ ಸುಳ್ಳು ಸುದ್ದಿಯ ಲಿಂಕ್‌ಗಳೇ ಆಗಿವೆ.

‘ಟೈಮ್ಸ್‌ ಆಫ್‌ ಇಸ್ಲಾಮಾಬಾದ್‌’ ಪಾಕಿಸ್ತಾನದ ಒಂದು ವೆಬ್‌ಸೈಟ್‌ ಅಷ್ಟೇ. ಅದು ಪತ್ರಿಕೆಯಲ್ಲ. ಭಾರತದ ಹಿಂದೂಗಳ ಭಾವನೆಗಳನ್ನು ಕೆರಳಿಸುವಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸಲು ಈ ವೆಬ್‌ಸೈಟ್‌ ‘ಕು’ಖ್ಯಾತಿ ಪಡೆದಿದೆ. ಮೇ 16ರಂದು ಶ್ರೀನಗರ ಡೇಟ್‌ಲೈನ್‌ನಲ್ಲಿ ಈ ವೆಬ್‌ಸೈಟ್‌ ಪ್ರಕಟಿಸಿದ್ದ ಅರುಂಧತಿ ರಾಯ್‌ ಅವರ ಕುರಿತ ಸುಳ್ಳು ಸುದ್ದಿ ವಿವಾದಕ್ಕೆ ಕಾರಣವಾಗಿತ್ತು. ಈ ಸುಳ್ಳು ಸುದ್ದಿಯನ್ನು ಆಧರಿಸಿ ಬಿಜೆಪಿ ಸಂಸದ ಪರೇಶ್‌ ರಾವಲ್‌ ಮಾಡಿದ್ದ ಟ್ವೀಟ್‌ ಕೂಡಾ ವಿವಾದ ಉಂಟು ಮಾಡಿತ್ತು.

‘ಕಾಶ್ಮೀರದಲ್ಲಿ ಮಾನವ ಗುರಾಣಿಯಾಗಿ ಯುವಕನನ್ನು ಜೀಪ್‌ಗೆ ಕಟ್ಟುವ ಬದಲು ರಾಷ್ಟ್ರದ್ರೋಹಿ ಅರುಂಧತಿ ರಾಯ್‌ ಅವರನ್ನು ಜೀಪ್‌ಗೆ ಕಟ್ಟಬೇಕಿತ್ತು’ ಎಂದು ರಾವಲ್‌ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ತೆಗೆದು ಹಾಕುವಂತೆ ಟ್ವಿಟರ್‌ನಿಂದ ಒತ್ತಡ ಬಂದ ಕಾರಣ ರಾವಲ್‌ ತಮ್ಮ ಟ್ವೀಟ್‌ ಅನ್ನು ತೆಗೆದು ಹಾಕಿದ್ದರು.

ಪಾಕಿಸ್ತಾನದ ವೆಬ್‌ಸೈಟ್‌ಗಳು ‘ತಯಾರಿಸುವ’ ಇಂತಹ ಸುಳ್ಳು ಸುದ್ದಿಗಳನ್ನು ಭಾರತದಲ್ಲಿ ಹಿಂದುತ್ವವಾದಿಗಳು ‘ಸಮರ್ಪಕ’ವಾಗಿ ಬಳಸಿಕೊಳ್ಳುತ್ತಿದ್ದಾರೆ. ಹಿಂದೂಗಳ ಭಾವನೆಗಳನ್ನು ಕೆರಳಿಸಲು ಭಾರತದ ಹಿಂದುತ್ವವಾದಿಗಳು ಇಂತಹ ಸುಳ್ಳು ಸುದ್ದಿ, ಸುಳ್ಳು ಹೇಳಿಕೆಗಳ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿದ್ದಾರೆ.

ಎ.ಆರ್‌. ರೆಹಮಾನ್‌ ಬಗ್ಗೆ ಸುಳ್ಳು ಪೋಸ್ಟರ್‌

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್‌ ಹೆಸರಲ್ಲಿ ಜೂನ್‌ 10ರಂದು ಪ್ರಕಟವಾಗಿದ್ದ ಒಂದು ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ‘ನಾನು ದನದ ಮಾಂಸ ತಿನ್ನುವುದಿಲ್ಲ. ನನ್ನ ತಾಯಿ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದರು. ಅವರು ಹಬ್ಬದ ದಿನಗಳಂದು ಗೋಪೂಜೆ ಮಾಡುತ್ತಿದ್ದರು’ ಎಂದು ಎ.ಆರ್‌. ರೆಹಮಾನ್‌ ಹೇಳಿರುವಂತೆ ಒಂದು ಪೋಸ್ಟರ್‌ ತಯಾರಿಸಿ ಹಬ್ಬಿಸಲಾಗಿತ್ತು.

ಹಿಂದುತ್ವವಾದಿ ಒಲವಿರುವ ಪತ್ರಕರ್ತ ಎಸ್‌. ಗುರುಮೂರ್ತಿ ಎಂಬುವರು ಈ ಪೋಸ್ಟರ್‌ ಅನ್ನು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಅನ್ನು 2600ಕ್ಕೂ ಹೆಚ್ಚು ಮಂದಿ ರೀಟ್ವೀಟ್‌ ಮಾಡಿದ್ದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೂ ಪೋಸ್ಟರ್‌ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿದ್ದರು. ಇದು ನಕಲಿ ಹೇಳಿಕೆಯ ಪೋಸ್ಟರ್‌ ಎಂಬುದು ಗೊತ್ತಾಗುತ್ತಿದ್ದಂತೆ ನಿರ್ಮಲಾ ಅವರು ಆ ರೀಟ್ವೀಟ್‌ ಮಾಡಿದ್ದನ್ನು ತೆಗೆದು ಹಾಕಿ ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದರು.

ಕೃಪೆ: ದಿ ವೈರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry