ಬರಡು ಭೂಮಿಯಲ್ಲಿ ಚಿಗುರಿತು ಜರ್ಬೇರಾ

7

ಬರಡು ಭೂಮಿಯಲ್ಲಿ ಚಿಗುರಿತು ಜರ್ಬೇರಾ

Published:
Updated:
ಬರಡು ಭೂಮಿಯಲ್ಲಿ ಚಿಗುರಿತು ಜರ್ಬೇರಾ

ಯುವಕ ಸಾಫ್ಟ್‌ವೇರ್‌ ಎಂಜಿನಿಯರ್‌. ಎಂ.ಟೆಕ್‌ ಪದವೀಧರರಾಗಿರುವ ಇವರಿಗೆ ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ತಿಂಗಳಿಗೆ 1.5 ಲಕ್ಷ ರೂಪಾಯಿ ಸಂಬಳ. ಆದರೆ ಕೃಷಿಯಲ್ಲಿ ತೊಡಗಿ  ಏನಾದರೂ ಸಾಧಿಸಬೇಕು ಹಾಗೂ ಸ್ಥಳೀಯರಿಗೆ ಕೆಲಸ ನೀಡಬೇಕು ಎಂಬ ಹಂಬಲ ಅವರನ್ನು ಆ ಕೆಲಸ ಬಿಟ್ಟು ವಾಪಸ್‌ ಊರಿಗೆ ಬರುವಂತೆ ಮಾಡಿತು. ಬಂದವರೇ ಜರ್ಬೇರಾ ಪುಷ್ಪಕೃಷಿಯಲ್ಲಿ ತೊಡಗಿ, ಅದರಲ್ಲಿ ಯಶಸ್ವಿಯಾಗಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.

ಕಲಬುರ್ಗಿಯ ಖಾಜ ಬಂದೆ ನವಾಜ್‌ (ಕೆಬಿಎನ್‌) ಕಾಲೇಜಿನಲ್ಲಿ ಎಂ.ಟೆಕ್‌ ಮುಗಿಸಿರುವ  ಎಂ.ಎ. ಖಾದಿರ್‌ ಉಮರ್‌ ಕೃಷಿ ಕಾಯಕದಲ್ಲಿ ತೊಡಗಿ ಯಶ

ಕಂಡ ಯುವಕ.

ಕೃಷಿ ಕಾರ್ಯ ಕೈಗೊಳ್ಳಲು ಖಾದಿರ್‌ ಅವರು ಆಯ್ಕೆ ಮಾಡಿಕೊಂಡಿದ್ದು ಕಲಬುರ್ಗಿಯ ಹೊರವಲಯ ಕುಸನೂರ ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ಬಂದಿರುವ 10 ಎಕರೆ ಬರಡು ಭೂಮಿಯನ್ನು. ಇದರಲ್ಲಿ ಒಂದು ಎಕರೆಯಷ್ಟು ಭೂಮಿಯನ್ನು ಹದಗೊಳಿಸಿ, ಪಾಲಿಹೌಸ್‌ ನಿರ್ಮಿಸಿಕೊಂಡು ಜರ್ಬೇರಾ ಹೂವು ಬೆಳೆಯುತ್ತಿದ್ದಾರೆ. ಅವರ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸಿ ಅವರ ಏಳು ಮಂದಿ ಸಹೋದರರು ಆರ್ಥಿಕ ನೆರವನ್ನೂ ನೀಡಿದ್ದಾರೆ. ಸದ್ಯ ಜರ್ಬೇರಾ ಬೆಳೆಯಿಂದ ಪ್ರತೀ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಸಿಗುತ್ತಿದೆ.

ಹುಮನಾಬಾದ್‌ನಿಂದ ಮಣ್ಣು, ತುಮಕೂರಿನ ಹೆಂಚು

ಕಲಬುರ್ಗಿ ಹೊರವಲಯದಲ್ಲಿ ಗುಡ್ಡಗಾಡಿನಂತಿರುವ ಇವರ ಜಮೀನನ್ನು ಬರಡು ಭೂಮಿ ಎಂದೇ ರೈತರು ಕರೆಯುತ್ತಿದ್ದರು. ಇಂತಹ ಭೂಮಿಯನ್ನು ಆಯ್ಕೆ ಮಾಡಿಕೊಂಡಿರುವ ಖಾದಿರ್‌ ಉಮರ್‌ ಒಂದು ಎಕರೆ ಪ್ರದೇಶದಲ್ಲಿ ಪಾಲಿಹೌಸ್‌ ನಿರ್ಮಾಣಕ್ಕಾಗಿ 70 ಕಿ.ಮೀ ದೂರದ ಬೀದರ್‌ ಜಿಲ್ಲೆಯ ಹುಮನಾಬಾದ್‌ನಿಂದ 91 ಟ್ರಕ್‌ ಮಣ್ಣು ತಂದು, 25 ಸಾವಿರ ಜರ್ಬೇರಾ ಸಸಿಗಳನ್ನು ನೆಟ್ಟು, ಹನಿ ನೀರಾವರಿ (ಡ್ರಿಪ್‌ ಇರಿಗೇಷನ್‌) ಅಳವಡಿಸಿಕೊಂಡು ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ.

ಕೆಂಪು, ಬಿಳಿ, ಹಳದಿ, ಗುಲಾಬಿ ಬಣ್ಣ ಸೇರಿದಂತೆ ಏಳು ಬಗೆಯ ಜರ್ಬೇರಾವನ್ನು ಬೆಳೆಯುತ್ತಿದ್ದು, ಪಾಲಿಹೌಸ್‌ ನಿರ್ವಹಣೆ, ಹೂವು ಕಟಾವು ಹಾಗೂ ಜೋಡಣೆ, ನೀರು ಸಿಂಪಡಣೆ, ಹೂವು ಪ್ಯಾಕಿಂಗ್‌ ಹಾಗೂ ವಿತರಣೆ ಮತ್ತಿತರ ಕೆಲಸಗಳಿಗಾಗಿ 20 ಕೃಷಿ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದಾರೆ.

ಗಿಡದಿಂದ ಬೇರ್ಪಡಿಸಿದ ಹೂವುಗಳ ಸುರಕ್ಷತೆ ಹಾಗೂ ಅವುಗಳನ್ನು ಪ್ಯಾಕಿಂಗ್‌ ಮಾಡಲು ಸುಸಜ್ಜಿತ ಪ್ಯಾಕ್‌ಹೌಸ್‌ ನಿರ್ಮಿಸಿಕೊಂಡಿದ್ದಾರೆ. ಪ್ಯಾಕ್‌ಹೌಸ್‌ ಮೇಲು ಹೊದಿಕೆಗೆ ತುಮಕೂರಿನಿಂದ ಎರಡು ಟ್ರಕ್‌ಗಳಲ್ಲಿ ಹೆಂಚುಗಳನ್ನು ತಂದು ಮನೆ ನಿರ್ಮಿಸಿಕೊಂಡಿರುವುದು ವಿಶೇಷ.  ಹೈದರಾಬಾದ್‌ ಕರ್ನಾಟಕ ಬಹುತೇಕ ಕಡೆ ಸಿಮೆಂಟ್‌ ಶೀಟ್‌ಗಳ ಬಳಕೆ ಹೆಚ್ಚು.

ನಾಲ್ಕು ಸಾವಿರ ಹೂವುಗಳು

ನಿತ್ಯ ನಾಲ್ಕು ಸಾವಿರ ಹೂವು ತೆಗೆಯಲಾಗುತ್ತಿದೆ. ಹೂವನ್ನು ಪ್ಯಾಕ್‌ ಮಾಡಿ ಸ್ಥಳೀಯ ಹಾಗೂ ಹೈದರಾಬಾದ್‌, ಪುಣೆಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ. ಸಾಮಾನ್ಯ ದಿನಗಳಲ್ಲಿ ಒಂದು ಜರ್ಬೇರಾ ಹೂವಿನ ಬೆಲೆ ನಾಲ್ಕು ರೂಪಾಯಿ. ಹಬ್ಬ ಹರಿದಿನಗಳಲ್ಲಿ ₹10ಕ್ಕೆ ಮಾರಾಟವಾಗುತ್ತದೆ. ತಿಂಗಳಿಗೆ ನಿರ್ವಹಣೆ ಖರ್ಚು ಕಳೆದು ₹2 ಲಕ್ಷ ಆದಾಯ ಸಿಗುತ್ತಿದೆ ಎಂದು ಖಾದಿರ್‌ ಹೇಳುತ್ತಾರೆ.

‘ಜರ್ಬೇರಾ ಕೃಷಿ ಕೈಗೊಳ್ಳುವ ಸಲುವಾಗಿ ಐದು ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಐದರಲ್ಲೂ ಸಮೃದ್ಧವಾಗಿ ನೀರು ಬರುತ್ತಿದೆ. ಎರಡು ಕೊಳವೆ ಬಾವಿಗಳಲ್ಲಿ ಬರುವ ನೀರು ಕೃಷಿಗೆ ಸಾಕಾಗುತ್ತದೆ. ಹಾಗಾಗಿ ಎರಡು ಕೊಳವೆ ಬಾವಿಯ ನೀರನ್ನು 60 ಸಾವಿರ ಲೀಟರ್‌ ಸಾಮರ್ಥ್ಯದ ಕೃಷಿ ಹೊಂಡದಲ್ಲಿ ಶೇಖರಿಸಿ, ಕೃಷಿಗೆ ಬಳಸಿಕೊಳ್ಳುತ್ತಿದ್ದೇವೆ’ ಎಂದು ಅವರು ವಿವರಿಸುತ್ತಾರೆ. ವಿದ್ಯುತ್‌ ಸಮಸ್ಯೆ ತಲೆದೂರಿದಾಗ ಬೆಳೆಗಳಿಗೆ ಸಮಸ್ಯೆಯಾಗದಿರಲಿ ಎಂದು ಡೀಸೆಲ್  ಜನರೇಟರ್‌ ಅಳವಡಿಸಿಕೊಂಡಿದ್ದು, ಇದರಿಂದ ಬೆಳೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಮನೆ ನಿರ್ಮಿಸಿದ್ದಾರೆ.

(ಜರ್ಬೇರಾ ಆರೈಕೆಯಲ್ಲಿ ಖಾದಿರ್‌)

ಪದವೀಧರನ ಕೈಹಿಡಿದ ಜರ್ಬೇರಾ ಕೃಷಿ

ಕೈತುಂಬ ಸಿಗುವ ಸಂಬಳ ಬಿಟ್ಟು ಆರಂಭಿಸಿದ ಜರ್ಬೇರಾ ಕೃಷಿ ಅವರ ಕೈಹಿಡಿದಿದ್ದು, ಸದ್ಯ ನೀರಿನ ಲಭ್ಯತೆ ಹೆಚ್ಚು ಇರುವುದರಿಂದ ಮತ್ತೊಂದು ಎಕರೆಯಲ್ಲಿ ಜರ್ಬೇರಾ ಬೆಳೆಯಲು ಸಿದ್ಧತೆ ನಡೆಸಿದ್ದಾರೆ.

ಏಳು ಬಣ್ಣದ ಹೂವುಗಳಿಂದ ಕೂಡಿದ ಈ ಜರ್ಬೇರಾ ತೋಟ ನಳನಳಿಸುತ್ತಿದೆ. ಬರದ ಛಾಯೆ ಆವರಿಸಿಕೊಂಡಿರುವ ಬರಡು ಭೂಮಿಯ ಮಧ್ಯ ನಿರ್ಮಿಸಿರುವ ಈ ಪಾಲಿಹೌಸ್‌ ದಾರಿಹೋಕರ ಗಮನ ಸೆಳೆಯುತ್ತಿದೆ.

**

ನೆರವಿಗೆ ಬಂದ ಕೃಷಿ ಭಾಗ್ಯ ಯೋಜನೆ

ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್‌ ನಿರ್ಮಾಣಕ್ಕಾಗಿ ತೋಟಗಾರಿಕೆ ಇಲಾಖೆ ₹42 ಲಕ್ಷ ಅಂದಾಜು ಮೊತ್ತ ನಿಗದಿಪಡಿಸಿದ್ದು, ಶೇ 50ರಷ್ಟು ಸಬ್ಸಿಡಿ ನೀಡುತ್ತಿದೆ. ಇದರ ಭಾಗವಾಗಿ ಖಾದಿರ್‌ ಉಮರ್ ಅವರಿಗೆ ₹21.35 ಲಕ್ಷ ಸಬ್ಸಿಡಿ ನೀಡಿದೆ. ಅಲ್ಲದೆ ಪ್ಯಾಕ್‌ ಹೌಸ್‌ ಹಾಗೂ 60 ಸಾವಿರ ಲೀಟರ್‌ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಾಣಕ್ಕೂ ಸಹಾಯಧನ ನೀಡಿದೆ. ತೆಲಂಗಾಣದಲ್ಲಿ ಪಾಲಿಹೌಸ್‌ ನಿರ್ಮಾಣಕ್ಕೆ ಶೇ 75ರಷ್ಟು ಸಬ್ಸಿಡಿ ಇದೆ. ಅದರಂತೆ ರಾಜ್ಯದಲ್ಲೂ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಾರೆ ಖಾದಿರ್‌ ಉಮರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry