ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಟಿಕೆಟ್‌

7
ವಲಸಿಗರಿಗೆ, ಜನರ ಸಮಸ್ಯೆಗಳಿಗೆ ಸ್ಪಂದಿಸದವರಿಗೆ ಸ್ಪರ್ಧಿಸಲು ಅವಕಾಶ ಇಲ್ಲ

ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಟಿಕೆಟ್‌

Published:
Updated:
ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಟಿಕೆಟ್‌

ಬೆಂಗಳೂರು: ‘ಜನರ ಸಮಸ್ಯೆಗಳಿಗೆ ಸ್ಪಂದಿಸದ ಹಾಗೂ ಪಕ್ಷಕ್ಕಾಗಿ ದುಡಿಯದ ನಾಯಕರು, ಕಾರ್ಯಕರ್ತರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಿಲ್ಲ’ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಘೋಷಿಸಿದರು.

ಇಲ್ಲಿಯ ಜ್ಞಾನಜ್ಯೋತಿ  ಸಭಾಂಗಣದಲ್ಲಿ ಸೋಮವಾರ ಕಾಂಗ್ರೆಸ್‌ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೊನೆ ಕ್ಷಣದಲ್ಲಿ ಬೇರೆ ಪಕ್ಷದಿಂದ ವಲಸೆ ಬರುವವರಿಗೆ ಮಣೆ ಹಾಕುವುದಿಲ್ಲ. ಹೆಲಿಕಾಪ್ಟರ್‌ಗಳಲ್ಲಿ ಹಾರಿ ಬಂದು, ಪ್ರಭಾವ ಬೀರುವವರಿಗಂತೂ ಮೊದಲು ಟಿಕೆಟ್‌ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಯಾರು, ಎಷ್ಟೇ ದೊಡ್ಡವರಿರಲಿ ಪಕ್ಷಕ್ಕಾಗಿ ಕೆಲಸ ಮಾಡದೆ ಟಿಕೆಟ್‌ ಕೇಳಿದರೆ ಕೊಡುವುದಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿರುವ ಪ್ರಾಮಾಣಿಕ ಕಾರ್ಯಕರ್ತರು ಹಾಗೂ ನಾಯಕರ ಪಟ್ಟಿ ತಯಾರಿಸುವಂತೆ ಈಗಾಗಲೇ ವೇಣುಗೋಪಾಲ್‌ ಅವರಿಗೆ ಹೇಳಿದ್ದೇನೆ’ ಎಂದು ರಾಹುಲ್‌ ಹೇಳಿದರು.

‘ಚುನಾವಣೆಗೆ ಇನ್ನು ಏಳೆಂಟು ತಿಂಗಳು ಉಳಿದಿದೆ. ನಿಮ್ಮ ಕ್ಷೇತ್ರಗಳಿಗೆ  ಹೋಗಿ ಕೆಲಸ ಮಾಡಿ. ಜನರ ಕಷ್ಟಸುಖ ವಿಚಾರಿಸಿ ಪರಿಹಾರ ಮಾಡಿ’ ಎಂದು ರಾಹುಲ್‌ ಪಕ್ಷದ ಶಾಸಕರಿಗೂ ಕಿವಿಮಾತು ಹೇಳಿದರು.

‘ವಿಶ್ವಾಸದಿಂದ ಮುನ್ನಡೆಯಿರಿ. ಕಾಂಗ್ರೆಸ್‌ ಏನು, ಅದರ ಶಕ್ತಿ ಏನು ಎಂಬುದನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ತೋರಿಸಿ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದೆ. ಆದರೆ, ಅದಕ್ಕಾಗಿ ಪ್ರಚಾರ ಪಡೆದಿಲ್ಲ. ಅಪಾರ ಹಣ ಖರ್ಚು ಮಾಡಿ ಪ್ರಚಾರ ಪಡೆಯಿರಿ ಎಂದು ಹೇಳುವುದಿಲ್ಲ.  ಎಲ್ಲ ಮಂತ್ರಿಗಳೂ ಸರ್ಕಾರ ಮಾಡಿರುವ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡಬೇಕು’ ಎಂದು ಸಲಹೆ ನೀಡಿದರು.

‘ನಮ್ಮ ಪಕ್ಷಕ್ಕೂ ಬಿಜೆಪಿಗೂ ಇರುವ ವ್ಯತ್ಯಾಸ ಎಂದರೆ, ನಮ್ಮಲ್ಲಿ ಕುಟುಂಬದ ವಾತಾವರಣವಿದೆ. ಅಲ್ಲಿ ಒಬ್ಬ ವ್ಯಕ್ತಿ ಮಾತನಾಡುತ್ತಾರೆ, ಉಳಿದವರು ಕೇಳುತ್ತಾರೆ. ಇತರರ ಮಾತುಗಳಿಗೆ ಬೆಲೆ ಇರುವುದಿಲ್ಲ’ ಎಂದರು.

ಕರ್ನಾಟಕದ ಧ್ವನಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಧ್ವನಿ.  ಪಕ್ಷದ ಎಲ್ಲ ನಾಯಕರೂ ಕರ್ನಾಟಕದ ಧ್ವನಿಯೇ ಆಗಿದ್ದಾರೆ.  ಜನರ ಮನಸ್ಸಿನಲ್ಲಿ ಏನಿದೆ ಎಂಬುದನ್ನು  ತಿಳಿದು  ಅದರಂತೆ ಸರ್ಕಾರ ನಡೆಸುತ್ತಿದ್ದಾರೆ. ಇದುವೇ ನಮ್ಮ ಮನ್‌ ಕೀ ಬಾತ್’ ಎಂದು ರಾಹುಲ್‌ ತಿಳಿಸಿದರು.

****

ಹೇಳಿಕೆಗೆ ಖಂಡನೆ

‘ಸೇನಾ ಮುಖ್ಯಸ್ಥ ರಾವತ್‌ ಅವರ ಬಗ್ಗೆ ಪಕ್ಷದ ನಾಯಕರೊಬ್ಬರು ನೀಡಿರುವ ಹೇಳಿಕೆ ಸರಿ ಅಲ್ಲ’ ಎಂದು ಸಂದೀಪ್‌ ದೀಕ್ಷಿತ್‌ ಹೇಳಿಕೆಯನ್ನು  ರಾಹುಲ್‌ ಗಾಂಧಿ ಟೀಕಿಸಿದರು.

‘ಸೇನಾ ಮುಖ್ಯಸ್ಥರು ದೇಶಕ್ಕೆ ಸೇರಿದವರು.  ಅವರು ನಮ್ಮೆಲ್ಲರ ರಕ್ಷಣೆಯ ಹೊಣೆ ಹೊತ್ತವರು. ಅವರ ಬಗ್ಗೆ ಟೀಕೆಗಳನ್ನು ಮಾಡಬಾರದು’ ಎಂದೂ ಹೇಳಿದರು. ‘ರಾವತ್‌ ಅವರು ಬೀದಿ ಗೂಂಡಾ’  ಎಂಬರ್ಥದಲ್ಲಿ ಸಂದೀಪ್‌  ಟೀಕೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry