ವನ್ಯಜೀವಿಗಳೇ ಇವರ ಜೀವಾಳ

7

ವನ್ಯಜೀವಿಗಳೇ ಇವರ ಜೀವಾಳ

Published:
Updated:
ವನ್ಯಜೀವಿಗಳೇ ಇವರ ಜೀವಾಳ

ಮೂರು ತಲೆಮಾರುಗಳಿಂದಲೂ ವನ್ಯಜೀವಿ ಛಾಯಾಗ್ರಹಣದ ಮೂಲಕ ವನ್ಯಜೀವಿ ರಕ್ಷಣೆಯಲ್ಲಿ ತೊಡಗಿಸಿಕೊಂಡ  ಹರಿದ್ವಾರದ ‘ಬೇಡಿ ಕುಟುಂಬ’ದ ಹೆಸರು ಜಗತ್ತಿನಲ್ಲೇ ಪರಿಚಿತ. ಡಾ.ರಮೇಶ್‌ ಬೇಡಿ ಎಂಬವರು ಆರಂಭಿಸಿದ ಈ ಪ್ರವೃತ್ತಿಯನ್ನು ಆ ಕುಟುಂಬದ ಮಕ್ಕಳೂ ನೆಚ್ಚಿಕೊಂಡಿದ್ದು ವಿಶೇಷ.

ಡಾ. ರಮೇಶ್‌ ಆಗ ಚಾಲ್ತಿಯಲ್ಲಿದ್ದ  ‘ರೋಲಿಕೋರ್ಡ್‌’ ಕ್ಯಾಮೆರಾದಲ್ಲಿ ಕಪ್ಪು ಬಿಳುಪಿನ ಚಿತ್ರಗಳನ್ನು ತೆಗೆದು ವನ್ಯಜೀವಿ ಛಾಯಾಗ್ರಹಣದಲ್ಲಿ ಛಾಪು ಮೂಡಿಸಿದ್ದರು, ಅಲ್ಲದೆ, ಇವರು ಇದೇ ಕ್ಷೇತ್ರಕ್ಕೆ ಸಂಬಂಧಿಸಿದ 74 ಪುಸ್ತಕಗಳನ್ನು ರಚಿಸಿದ್ದಾರೆ. ರಮೇಶ್‌ ನಂತರ ಅವರ ಪುತ್ರ ನರೇಶ್‌ ಬೇಡಿ ಇದೇ ಕ್ಷೇತ್ರದಲ್ಲಿ ಮುಂದುವರಿದರು. 70ರ ದಶಕದಲ್ಲಿ ವನ್ಯಜೀವಿಗೆ ಸಂಬಂಧಿಸಿದಂತೆ ಬಿಬಿಸಿ ಸೇರಿದಂತೆ ಹಲವು ವಾಹಿನಿಗಳಿಗೆ ಸಾಕ್ಷ್ಯಚಿತ್ರ ನಿರ್ಮಿಸಿದ ಹೆಗ್ಗಳಿಕೆ ನರೇಶ್‌ ಅವರದ್ದು. ಇವರ ಸಾಧನೆಗೆ ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿದ್ದು, ‘ಪದ್ಮಶ್ರೀ’ ಪ್ರಶಸ್ತಿಯಿಂದಲೂ ಪುರಸ್ಕೃತರಾಗಿದ್ದರು.

ವನ್ಯಜೀವಿ ಛಾಯಾಗ್ರಹಣ ಮತ್ತು ಸಾಕ್ಷ್ಯಚಿತ್ರಕ್ಕಾಗಿ ಪ್ರತಿಷ್ಠಿತ ‘ಗ್ರೀನ್‌ ಆಸ್ಕರ್‌’ ಪುರಸ್ಕೃತರಾದವರು ವಿಜಯ್‌ ಬೇಡಿ ಮತ್ತು ಅಜಯ್‌ ಬೇಡಿ ಎಂಬ ಅವಳಿ ಸಹೋದರರು. ಅವರಿಗೆ ನಾಡಿಗಿಂತ ಕಾಡಿನ ಬಗ್ಗೆ ಹೆಚ್ಚು ಒಲವು. ವನ್ಯಜೀವಿಗಳ ರಕ್ಷಣೆಯಲ್ಲಿ ಛಾಯಾಗ್ರಹಣದ ಪಾತ್ರದ ಬಗ್ಗೆ ವಿಜಯ್‌ ಹೇಳಿರುವುದೇನು?

(ರಾಜಸ್ತಾನದ ಬಿಷ್ಣೋಯಿ ಬುಡಕಟ್ಟು ಸಮುದಾಯದ ಮಹಿಳೆ ತನ್ನ ಮಗುವಿನ ಜೊತೆ ಸಾಕುಪ್ರಾಣಿಗೂ ಹಾಲುಣಿಸುತ್ತಿರುವುದು)

* ಈ ಕ್ಷೇತ್ರಕ್ಕೆ ಬರಲು ಪ್ರೇರಣೆ ಏನು?

ಬೇಸಿಗೆಯಲ್ಲಿ ವಿಶ್ರಾಂತಿ ಪಡೆಯಲು ಗಿರಿಧಾಮಗಳಿಗೆ ಭೇಟಿ ನೀಡುತ್ತೇವೆ. ಚಿಕ್ಕಂದಿನಿಂದಲೇ ನನ್ನ ಅಜ್ಜ, ತಂದೆ ಜತೆಗೆ ನಾನು ಕೂಡ ಅರಣ್ಯಕ್ಕೆ ತೆರಳುತ್ತಿದ್ದೆ. ಹೀಗಾಗಿ, ವನ್ಯಜೀವಿಗಳ ಬಗ್ಗೆ  ಬಾಲ್ಯದಲ್ಲೇ ನಾನು ಕುತೂಹಲ ಬೆಳೆಸಿಕೊಂಡೆ. ಒಂದು ರೀತಿಯಲ್ಲಿ ವನ್ಯಜೀವಿ ಕುರಿತಾದ ಕಾಳಜಿ ನಮಗೆ ರಕ್ತಗತವಾಗಿ ಬಂದಿದೆ.

* ಛಾಯಾಗ್ರಹಣದತ್ತ ಹೊರಳಲು ಕಾರಣ?

ತಂದೆ ಜತೆ ಕಾಡಿನಲ್ಲಿ ತೆರಳುತ್ತಿದ್ದಾಗ ವನ್ಯಜೀವಿಗಳ ಓಡಾಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆ ನಿಟ್ಟಿನಲ್ಲಿ ಫೋಟೊಗ್ರಫಿ ಸೂಕ್ತ ಎಂದು ಇದರಲ್ಲಿ ತೊಡಗಿಸಿಕೊಂಡೆ.

* ಇದರಿಂದ ನೀವು ಕಲಿತಿದ್ದೆನು?

ವನ್ಯಜೀವಿ ಛಾಯಾಗ್ರಹಣ ಎಂಬುದು ನನ್ನ ಪಾಲಿಗೆ ಮನರಂಜನೆ ಅಲ್ಲ.  ಚಿತ್ರ, ವಿಡಿಯೊ ಮೂಲಕ ಅವುಗಳ ಜೀವನಶೈಲಿ ಅಧ್ಯಯನ ಮಾಡಿ ರಕ್ಷಣೆಗೆ ತೊಡಗುವಂತೆ ಪ್ರೇರಣೆ ನೀಡುವುದು ಮೂಲ ಉದ್ದೇಶ.

* ನೀವು ಮಾಡಿದ ಸವಾಲಿನ ಪ್ರಾಜೆಕ್ಟ್‌ ಯಾವುದು?

ಪಂಡಾ ಕುರಿತಾಗಿ ನಾನು ಮಾಡಿದ್ದು ಸವಾಲಿನ ಪ್ರಾಜೆಕ್ಟ್‌. ಸಾಕಷ್ಟು ಮಂದಿ ಅದು ಚೀನಾದಲ್ಲಿ ಮಾತ್ರ ಇದೆ ನಂಬಿದ್ದರು. ಆದರೆ ನಾನು ಹಿಮಾಲಯ ಪರ್ವತ ಪ್ರದೇಶದಲ್ಲಿ ಮೂರು ವರ್ಷ ಕೈಗೊಂಡ ಪ್ರಾಜೆಕ್ಟ್‌ಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ 20ಕ್ಕೂ ಅಧಿಕ ಪ್ರಶಸ್ತಿಗಳು ಸಿಕ್ಕಿವೆ. ಇದಕ್ಕಾಗಿ ‘ಹಸಿರು ಆಸ್ಕರ್‌ ಪ್ರಶಸ್ತಿ’ ಕೂಡ ಸಿಕ್ಕಿದೆ. ಇಷ್ಟು ದೊಡ್ಡ ಪುರಸ್ಕಾರ ಸಿಕ್ಕಿದಾಗ ನಮ್ಮ ಪರಿಶ್ರಮ ಸಾರ್ಥಕವಾಯಿತು ಎಂದೆನಿಸಿತು.

* ಪ್ರಾಜೆಕ್ಟ್‌ನಲ್ಲಿ ತೊಡಗಿದ್ದ ವೇಳೆ ಎದುರಾದ ಸವಾಲುಗಳು ಏನು?

ಯಾವುದೇ ಪ್ರಾಣಿ, ಪಕ್ಷಿಗಳ ಜೀವನದ ಕುರಿತಾಗಿ ಪ್ರಾಜೆಕ್ಟ್‌ ಒಂದು ದಿನಕ್ಕೆ ಮುಗಿಯುವುದಿಲ್ಲ. ಪಂಡಾ ಪ್ರಾಜೆಕ್ಟ್‌ನಲ್ಲಿ ಮೈನಸ್‌ 20 ಡಿಗ್ರಿ ತಾಪಮಾನದಲ್ಲಿ ಕೆಲಸ ಮಾಡಿದ್ದೇನೆ.  ಅದೇ ರೀತಿ ಅಧಿಕಾರಿಗಳು, ರಾಜಕಾರಣಿಗಳು, ಸರ್ಕಾರದ ನೀತಿಗೆ ಅನುಗುಣವಾಗಿ ಕೆಲಸ ಮಾಡುವುದು ಸವಾಲಿನ ವಿಚಾರ.

ಕಪ್ಪೆಗಳ ಕುರಿತಾಗಿ ಮುಂದಿನ ಪ್ರಾಜೆಕ್ಟ್‌ ಮಾಡಲಿದ್ದೇನೆ.

(ಅಸ್ಸಾಂನ ಕಾಜಿರಂಗಾದಲ್ಲಿ ಕ್ಯಾಮೆರಾಗೆ ಸೆರೆಸಿಕ್ಕ ಘೇಂಡಾಮೃಗ)

* ಕರ್ನಾಟಕದ ಬಗ್ಗೆ ನಿಮ್ಮ ಅನಿಸಿಕೆಯೇನು?

ಕರ್ನಾಟಕ ನನ್ನ ಇಷ್ಟದ ಸ್ಥಳಗಳಲ್ಲಿ ಒಂದು. ಬಂಡೀಪುರ, ಕಬಿನಿಗೂ ಭೇಟಿ ನೀಡಿದ್ದೇನೆ. ಇಲ್ಲಿನ ಜನರಿಗೂ ವನ್ಯಜೀವಿ ರಕ್ಷಣೆ ಕುರಿತು ಸಾಕಷ್ಟು ಕಾಳಜಿ ಇರುವುದನ್ನು ಗಮನಿಸಿದ್ದೇನೆ.

* ವನ್ಯಜೀವಿ ಛಾಯಾಗ್ರಹಣದಲ್ಲಿ ತೊಡಗಿಕೊಳ್ಳಲು ಬಯಸುವವರ ಬಗ್ಗೆ?

ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಆದರೆ ಇದು ಗ್ಲಾಮರಸ್‌ ಕ್ಷೇತ್ರವಲ್ಲ. ಅತ್ಯಂತ ಕಠಿಣ  ಪರಿಸ್ಥಿತಿಯಲ್ಲೂ ವನ್ಯಜೀವಿ ಛಾಯಾಗ್ರಹಣ, ಸಾಕ್ಷ್ಯಚಿತ್ರ ತಯಾರಿಸುವುದು ನಿಜಕ್ಕೂ ಸವಾಲು. ಇದಕ್ಕೆ ಸಾಕಷ್ಟು ತಾಳ್ಮೆ ಬೇಕು. ನಿರಂತರ ಅಧ್ಯಯನ ನಡೆಸಿ,  ಅವುಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡರೆ ಸಾಧನೆ ಮಾಡಬಹುದು.

* ಈ ಕ್ಷೇತ್ರಕ್ಕೆ ಬರಲು ಇಚ್ಚಿಸುವ ಯುವ ಜನರಿಗೆ ನಿಮ್ಮ ಸಲಹೆ ?

ವನ್ಯಜೀವಿಗಳನ್ನು ಪ್ರೀತಿಸಿ, ಅರಣ್ಯ ಸಂರಕ್ಷಣೆ ನಿಟ್ಟಿನಲ್ಲಿ ತೊಡಗಿಸಿಕೊಳ್ಳಿ. ಸಾಕಷ್ಟು  ಶ್ರಮಪಟ್ಟು ಕೆಲಸ ಮಾಡಿದರೆ ಈ ಕ್ಷೇತ್ರದಲ್ಲಿ ಯಶಸ್ಸು ನಿಶ್ಚಿತ.ಚಿತ್ರಗಳು:
ವಿಜಯ್‌ ಬೇಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry