ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ಪೈಪೋಟಿ’

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ಲಂಡನ್ :  ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುವುದನ್ನು ಆಭಿಮಾನಿಗಳು ಬಯಸಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಸೋಮವಾರ ರಾತ್ರಿ ಲಾರ್ಡ್ಸ್‌ನಲ್ಲಿ ಭಾರತದ ಹೈಕಮಿಷನರ್ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು. ಅವರೊಂದಿಗೆ ಮಹೇಂದ್ರಸಿಂಗ್ ದೋನಿ, ಕೋಚ್ ಅನಿಲ್ ಕುಂಬ್ಳೆ ಕೂಡ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಲೀಗ್ ಹಂತವು ನಮಗೆ ಸವಾಲಿನದ್ದಾಗಿತ್ತು.  ಅದರಲ್ಲಿ ನಾವು ಯಶಸ್ವಿಯಾಗಿ ಸೆಮಿಫೈನಲ್ ಹಂತಕ್ಕೆ ತಲುಪಿದ್ದೇವೆ. ಆದರೆ ಬಹಳಷ್ಟು ಅಭಿಮಾನಿಗಳು ಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಆಡಲಿವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ’ ಎಂದರು.
‘ಸೆಮಿಫೈನಲ್‌ನಲ್ಲಿ ಗೆಲ್ಲುವ ವಿಶ್ವಾಸ ನಮಗೆ ಇದೆ.  ಭಾರತವು ಫೈನಲ್‌ನಲ್ಲಿ ಇರಬೇಕು ಎಂಬುದೇ ನಮ್ಮ ಗುರಿ.  ಎದುರಾಳಿ ಯಾರೇ ಇದ್ದರೂ ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡುತ್ತೇವೆ. ನಮ್ಮ ತಂಡವು ಆಡುವ ಎಲ್ಲ ಪಂದ್ಯಗಳಿಗೂ ಪ್ರೇಕ್ಷಕರು ಅಪಾರ ಸಂಖ್ಯೆಯಲ್ಲಿ ಬರುತ್ತಾರೆ’ ಎಂದರು.

‘ಇಂಗ್ಲೆಂಡ್‌ನಲ್ಲಿ ಉತ್ತಮವಾದ ಬಿಸಿಲು ಬಿದ್ದರೆ ಕ್ರಿಕೆಟ್ ಆಡಲು ಅದಕ್ಕಿಂತ ಶ್ರೇಷ್ಠ ಜಾಗ ಮತ್ತೊಂದಿಲ್ಲ. ಆದರೆ ಹವಾಮಾನ ನಿಯಂತ್ರಿಸುವುದು ನಮ್ಮ ಕೈಯಲ್ಲಿ ಇಲ್ಲ. ಎಂತಹದೇ ಪರಿಸ್ಥಿತಿ ಇದ್ದರೂ ಅದಕ್ಕೆ ಹೊಂದಿಕೊಂಡು ಆಡುವುದಷ್ಟೇ ನಮ್ಮ ಕೆಲಸ’ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗ ರಾದ ಫಾರೂಕ್ ಎಂಜಿನಿಯರ್, ದಿಲೀಪ್ ದೋಶಿ, ಇಂಗ್ಲೆಂಡ್ ತಂಡದ ಮಾಜಿ ಆಟಗಾರರಾದ ಆ್ಯಂಡ್ರ್ಯೂ ಸ್ಟಾರ್ಸ್, ಮಾಂಟಿ ಪನೇಸರ್ ಹಾಜರಿದ್ದರು.

ಭಾರತ ತಂಡವು ಗುರುವಾರ ನಡೆಯುವ ಸೆಮಿಫೈನಲ್‌ನಲ್ಲಿ ಬಾಂಗ್ಲಾ ದೇಶ ತಂಡವನ್ನು ಎದುರಿಸಲಿದೆ.

ವಿರಾಟ್ ಚಿತ್ರಕ್ಕೆ ₹2.4 ಕೋಟಿ
ಬರ್ಮಿಂಗ್‌ಹ್ಯಾಮ್ (ಪಿಟಿಐ):   ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಕಲಾಕೃತಿಗೂ ಈಗ ಕೋಟಿ ಕೋಟಿ ಮೌಲ್ಯ. ವಿರಾಟ್ ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆಯ ಚಿತ್ರಗಳು ಇರುವ ಸಮಗ್ರ ಕಲಾಕೃತಿಯನ್ನು ಉದ್ಯಮಿಯೊಬ್ಬರು ₹2.4 ಕೋಟಿ ನೀಡಿ ಖರೀದಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಭಾರತದ ಉದ್ಯಮಿ ಪೂನಮ್ ಗುಪ್ತಾ ಅವರು ಕಲಾಕೃತಿಯನ್ನು ಖರೀದಿಸಿದ್ದಾರೆ. ಕಲಾವಿದ ಸಶಾ ಜಾಫ್ರಿ ಅವರು ಈ ಕಲಾಕೃತಿಯನ್ನು ರಚಿಸಿದ್ದಾರೆ. ಹೋದ ವಾರ ವಿರಾಟ್ ಕೊಹ್ಲಿ ಪ್ರತಿಷ್ಠಾನವು ಏರ್ಪಡಿಸಿದ್ದ ಸಹಾಯಾರ್ಥ ಔತಣ ಕೂಟದಲ್ಲಿ ಜಾಫ್ರಿ ಅವರು ಈ ಕಲಾ ಕೃತಿಯನ್ನು ಕಾಣಿಕೆ ನೀಡಿದ್ದರು.

ಅಂತರರಾಷ್ಟ್ರೀಯ ಖ್ಯಾತಿಯ ಜಾಫ್ರಿ ಅವರು ಈ ಹಿಂದೆ  ದೋನಿ, ಯುವರಾಜ್ ಸಿಂಗ್, ಡೇವಿಡ್ ಬೆಕ್‌ಹ್ಯಾಮ್ ಅವರು ನಡೆಸಿದ್ದ ಸಹಾಯಾರ್ಥ  ಕಾರ್ಯಕ್ರಮ ಗಳಿಗೂ ಕೈ ಜೋಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT