ವಿ.ವಿ ಕಾಯ್ದೆ: ನೇಮಕಾತಿ ಅಧಿಕಾರಕ್ಕೆ ಕತ್ತರಿ

7
ತಿದ್ದುಪಡಿ ಮಸೂದೆ ಇಂದು ಮಂಡನೆ

ವಿ.ವಿ ಕಾಯ್ದೆ: ನೇಮಕಾತಿ ಅಧಿಕಾರಕ್ಕೆ ಕತ್ತರಿ

Published:
Updated:
ವಿ.ವಿ ಕಾಯ್ದೆ: ನೇಮಕಾತಿ ಅಧಿಕಾರಕ್ಕೆ ಕತ್ತರಿ

ಬೆಂಗಳೂರು: ವಿಶ್ವವಿದ್ಯಾಲಯಗಳ ನೇಮಕಾತಿ ಅಧಿಕಾರ ಮತ್ತು ಕಾಮಗಾರಿ ಟೆಂಡರ್ ಕರೆಯುವ ಅಧಿಕಾರಗಳಿಗೆ ಕತ್ತರಿ ಹಾಕಲು ಸರ್ಕಾರ ಉದ್ದೇಶಿಸಿದೆ.

ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಗೆ ಕೆಲವು ಮಾರ್ಪಾಡುಗಳನ್ನು ಮಾಡಿರುವ 2017ರ ತಿದ್ದುಪಡಿ ಮಸೂದೆಯು ವಿಧಾನಸಭೆಯಲ್ಲಿ ಬುಧವಾರ ಮಂಡನೆ ಆಗುವ ಸಾಧ್ಯತೆ ಇದೆ.

ಸದ್ಯ ವಿವಿಗಳಿಗೆ ನೇಮಕಾತಿ ಮಾಡಿಕೊಳ್ಳುವ  ಸ್ವಾಯತ್ತ ಅಧಿಕಾರ  ಇದೆ. ಇದನ್ನು ಬದಲಾವಣೆ ಮಾಡಿ ಕೇಂದ್ರೀಕೃತ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಯಾವ ವಿವಿಯಲ್ಲಿ ಎಷ್ಟು ಬೋಧಕರ ಅಗತ್ಯ ಇದೆ ಎಂಬುದನ್ನು ಸಂಬಂಧಪಟ್ಟ ವಿವಿಗಳು ಈ ಸಮಿತಿಗೆ ವರದಿ ಕಳುಹಿಸಬೇಕು. ನೇಮಕಾತಿಗಾಗಿ ರಚಿ­ಸಲಾಗುವ ಸಮಿತಿಗೆ ಆ ವಿವಿ ಕುಲಪತಿಯೂ ಸದಸ್ಯರಾಗಿರುತ್ತಾರೆ. ಬೋಧಕೇತರ ಸಿಬ್ಬಂದಿಯನ್ನು ಈಗಿರುವ ವ್ಯವಸ್ಥೆಯಂತೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಿಸಲಾಗುತ್ತದೆ.

ನೇಮಕಾತಿ ಉದ್ದೇಶಕ್ಕೆ ಸಿದ್ಧಪಡಿಸಲಾದ ವಿಷಯ ತಜ್ಞರ ದೊಡ್ಡ ಪಟ್ಟಿಯೇ ಉನ್ನತ ಶಿಕ್ಷಣ ಇಲಾಖೆಯಲ್ಲಿ ಇರುತ್ತದೆ. ಚೀಟಿ ಎತ್ತುವ ಮೂಲಕ  ಸಮಿತಿ ಸದಸ್ಯರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ.

ಪಾಠ ಮಾಡುವ ವೀಡಿಯೊ ವೆಬ್‌ಸೈಟ್‌ಗೆ: ವಿಶ್ವವಿದ್ಯಾಲಯಗಳ ಬೋಧಕರನ್ನು ಇದುವರೆಗೆ ಅಯಾ ವಿಷಯ ತಜ್ಞರ ಸಮಿತಿ ಸಂದರ್ಶನ ನಡೆಸಿ, ಅರ್ಹರ ಹೆಸರನ್ನು ಸಿಂಡಿಕೇಟ್ ಸಭೆಗೆ ಶಿಫಾರಸು ಮಾಡುತ್ತಿತ್ತು. ಕೇಂದ್ರೀಕೃತ  ನೇಮಕಾತಿ ವ್ಯವಸ್ಥೆ ನಂತರ, ಬೋಧಕ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂದರ್ಶನದ ಜೊತೆ ಪ್ರಾಯೋಗಿಕವಾಗಿ ಪಾಠ ಮಾಡುವ ಪರೀಕ್ಷೆಯನ್ನು ಏರ್ಪಡಿಸಲಾಗುತ್ತದೆ.  ಅದರ ವಿಡಿಯೊವನ್ನು ವೆಬ್‌ಸೈಟ್‌ಗೆ ಹಾಕಲಾಗುತ್ತದೆ. ಅವರ ಬೋಧನಾ ಮಟ್ಟ ಹೇಗಿದೆ ಎಂದು ಅಭಿಪ್ರಾಯ ತಿಳಿಸಬಹುದು. ಇದಕ್ಕೂ ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ಟೆಂಡರ್ ಕರೆಯುವ ಅಧಿಕಾರವೂ ರದ್ದು: ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗೆ ಏನೇ ಕಾಮಗಾರಿ ಮಾಡಬೇಕಿದ್ದರೂ ಆಡಳಿತ ವರ್ಗಕ್ಕೆ ಟೆಂಡರ್ ಕರೆಯುವ ಅವಕಾಶ ಇತ್ತು. ಈಗ ‘ವಿಶ್ವವಿದ್ಯಾಲಯ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ’ ರಚಿಸಿ ಆ ಮೂಲಕ ವಿಶ್ವವಿದ್ಯಾಲಯಗಳ ಕಾಮಗಾರಿಗಳಿಗೆ ಟೆಂಡರ್ ನಡೆಸಲಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ₹ 10 ಕೋಟಿಗೂ ಅಧಿಕ ಮೊತ್ತದ ಕಾಮಗಾರಿ ಕೈಗೊಳ್ಳಬೇಕಾದರೆ ಸಂಪುಟ ಸಭೆಯ ಅನುಮೋದನೆ ಪಡೆಯಬೇಕಾಗುತ್ತದೆ.

ಎಲ್ಲ ಕಾಯ್ದೆಗಳು ವಿಲೀನ: ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ– 2000ರಡಿ 17 ವಿಶ್ವವಿದ್ಯಾಲಯಗಳು ಬರುತ್ತವೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಹೀಗೆ 11 ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ 8 ಪ್ರತ್ಯೇಕ ಕಾಯ್ದೆಗಳಿವೆ. ಇವೆಲ್ಲವುಗಳನ್ನೂ ಒಟ್ಟುಗೂಡಿಸಿ ಒಂದೇ ಕಾಯ್ದೆಯಡಿ ತರುವ ಪ್ರಯತ್ನ ನಡೆದಿದೆ.

ಅವಧಿ ಮುಗಿಯುವುದರೊಳಗೆ ಹೊಸ ಕುಲಪತಿ: ವಿಶ್ವವಿದ್ಯಾಲಯದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಕುಲಪತಿ ಅವಧಿ ಮುಗಿಯುವ ಎರಡು ತಿಂಗಳು ಮೊದಲೇ ಹೊಸ ಕುಲಪತಿಯನ್ನು ನೇಮಿಸಲು ಉದ್ದೇಶಿಸಲಾಗಿದೆ. ಈಗ ಕುಲಪತಿಯ ಅವಧಿ ಮುಗಿದ ನಂತರ ಶೋಧನಾ ಸಮಿತಿ ರಚನೆ ಮಾಡಲಾಗುತ್ತದೆ. ನಾಲ್ಕಾರು ತಿಂಗಳು ವಿಳಂಬ ಆದರೆ ಅಲ್ಲಿವರೆಗೂ ಹಂಗಾಮಿ ಕುಲಪತಿ ಇರುತ್ತಾರೆ. ಇದರಿಂದ ಆಡಳಿತದ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ.

ಸಿಂಡಿಕೇಟ್‌ ಸದಸ್ಯರಾಗಿ ನೇಮಕಗೊಳ್ಳುವವರು ವೃತ್ತಿಪರ ಕೋರ್ಸ್‌ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂಬ ಷರತ್ತನ್ನು ಮಸೂದೆ ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry