ಬಿತ್ತನೆ ಬೀಜ ಪೂರೈಕೆಗೆ ತಾತ್ಸಾರ

7

ಬಿತ್ತನೆ ಬೀಜ ಪೂರೈಕೆಗೆ ತಾತ್ಸಾರ

Published:
Updated:
ಬಿತ್ತನೆ ಬೀಜ ಪೂರೈಕೆಗೆ ತಾತ್ಸಾರ

ತುಮಕೂರು: ಕೃಷಿ, ಶಿಕ್ಷಣ, ತೋಟಗಾರಿಕೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯದ ಬಗ್ಗೆ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ತಿಂಗಳ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯಾಯಿತು.

‘ಜಿಲ್ಲೆಯಾದ್ಯಂತ ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದರೂ ಕೃಷಿ ಇಲಾಖೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಮೇ ತಿಂಗಳಲ್ಲಿಯೇ ಶೇಂಗಾ ಬಿತ್ತನೆ ಚುರುಕುಗೊಳಿಸಲಾಗಿದೆ. ಪಾವಗಡ ತಾಲ್ಲೂಕಿನ ರೈತರು ಪಕ್ಕದ ಆಂಧ್ರಪ್ರದೇಶಕ್ಕೆ ಹೋಗಿ ಶೇಂಗಾ ಬೀಜ ತಂದು ಬಿತ್ತನೆ ಮಾಡಿದ್ದಾರೆ. ಆದರೆ, ನಮ್ಮ ಕೃಷಿ ಇಲಾಖೆ ಇನ್ನೂ ಬಿತ್ತನೆ ಬೀಜ ಪೂರೈಸುವ ಕೆಲಸ ಮಾಡಿಲ್ಲ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪಾಪಣ್ಣ  ಅಸಮಾಧಾನ ವ್ಯಕ್ತಪಡಿಸಿದರು.

‘ಮುಂಚಿತವಾಗಿಯೇ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿರಬೇಕು. ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಪೂರೈಕೆಗೆ ಪರ್ಮಿಟ್ ಕೊಟ್ಟಿರಬೇಕು. ಆದರೆ, ಇದ್ಯಾವ ಕೆಲಸವನ್ನೂ ಮಾಡಿಲ್ಲ. ಅನಿವಾರ್ಯವಾಗಿ ರೈತರು ಖಾಸಗಿ ಬಿತ್ತನೆ ಬೀಜ ಮಾರಾಟ ಮಳಿಗೆಗಳಲ್ಲಿ, ಹೊರ ರಾಜ್ಯದಿಂದ ತಂದು ಬಿತ್ತನೆ ಮಾಡಿದ್ದಾರೆ. ಅತಿ ಹೆಚ್ಚು ಶೇಂಗಾ ಬೆಳೆಯುವ ಪಾವಗಡ ತಾಲ್ಲೂಕಿನಲ್ಲಿ ಶೇ 50ಕ್ಕಿಂತ ಹೆಚ್ಚು ಶೇಂಗಾ ಬಿತ್ತನೆ ಮಾಡಲಾಗಿದೆ. ಕೃಷಿ ಇಲಾಖೆ ಏನೂ ಕೆಲಸ ಮಾಡಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ರೈತರಿಗೆ ಸಬ್ಸಿಡಿ ದರದಲ್ಲಿ ₹ 57ಕ್ಕೆ 1 ಕೆ.ಜಿ ಶೇಂಗಾ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ಕೊಡಲಾಗುತ್ತಿದೆ. ಖಾಸಗಿ ಮಳಿಗೆಗಳಲ್ಲೂ ಇದೇ ದರಕ್ಕೆ ಬಿತ್ತನೆ ಬೀಜ ಲಭಿಸುತ್ತಿವೆ. ಹೀಗಾಗಿ ರೈತರು ಅಲ್ಲಿ ಖರೀದಿಸಿರಬಹುದು’ ಎಂದು ಕೃಷಿ ಇಲಾಖೆ ಪ್ರಭಾರ ಜಂಟಿ ನಿರ್ದೇಶಕಿ ರೂಪಾ ಮಾಹಿತಿ ನೀಡಿದರು.

‘ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಪೂರೈಸಲಾಗಿದೆ. ದಾಸ್ತಾನು ಮಾಡಲಾಗಿದೆ. ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕೆ.ಜಿ.ಶಾಂತಾರಾಮ್ ಮಾತನಾಡಿ,‘ರೈತರು ಬೇರೆ ಕಡೆ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ ಎಂದರೆ ಅವರಿಗೆ ಸಕಾಲದಲ್ಲಿ ನಿಮ್ಮ ಇಲಾಖೆಯಿಂದ ಬಿತ್ತನೆ ಬೀಜ ಪೂರೈಕೆ ಆಗಿಲ್ಲ ಎಂದೇ ಅರ್ಥ. ಎಲ್ಲಿ ಲೋಪ ಆಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ವರದಿ ಕೊಡಬೇಕು’ ಎಂದು ಸೂಚಿಸಿದರು.

‘ಸದ್ಯಕ್ಕೆ ಕೆಲ ಬೆಳೆಗಳ ಬಿತ್ತನೆ ಬೀಜ ಬೇಡಿಕೆ ಕಡಿಮೆ ಇರಬಹುದು. ಮುಂಗಾರು ಶುರುವಾಗಿರುವುದರಿಂದ ಇದ್ದಕ್ಕಿದ್ದಂತೆ ಬೇಡಿಕೆ ಜಾಸ್ತಿ ಆಗಬಹುದು. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚು ಬಿತ್ತನೆ ಬೀಜ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಸಮಸ್ಯೆ ಬಿಗಡಾಯಿಸಿದಾಗ ಸಬೂಬು ಹೇಳುವ ಪರಿಸ್ಥಿತಿ ತಂದುಕೊಳ್ಳಬಾರದು’ ಎಂದರು.

‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಸ್ಥಾನ ಕಳೆದ ವರ್ಷಕ್ಕಿಂತ ಸಾಕಷ್ಟು ಕಡಿಮೆ ಆಗಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಆತ್ಮಾವಲೋಕನ ಮಾಡಿಕೊಳ್ಳುವ ಪ್ರಯತ್ನ ಮಾಡಿಲ್ಲ. ವಿಷಯ ಪರಿವೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಉಪನಿರ್ದೇಶಕರನ್ನೇ ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕೆಲ ವರ್ಷಗಳು ಕಳೆದರೆ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಇರುವುದಿಲ್ಲ ಎಂಬ ರೀತಿಯಲ್ಲಿ ಸಾರ್ವಜನಿಕವಾಗಿ ಚರ್ಚೆಗಳಾಗುತ್ತಿವೆ. ಅದಕ್ಕೆ ಪುಷ್ಟಿ ನೀಡುವಂತೆ ಇವರು ವರ್ತಿಸುತ್ತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು. ಸ್ಥಾಯಿ ಸಮಿತಿ ಅಧ್ಯಕ್ಷ ಪಾಪಣ್ಣ ಮಾತನಾಡಿ, ‘ಸಾಕ್ಸ್, ಶೂ, ಸಮವಸ್ತ್ರ ವಿತರಣೆ ಎಸ್‌ಡಿಎಂಸಿಯವರೇ ಖರೀದಿಸಿ ವಿತರಣೆ ಮಾಡಲು ಜವಾಬ್ದಾರಿ ವಹಿಸಲಾಗಿದೆ. ಆದರೆ, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ಇಲಾಖೆಯ ಬಹುಪಾಲು ಅಧಿಕಾರಿಗಳೇ ಖರೀದಿಸಿ ವಿತರಣೆ ಮಾಡುವ ದಂಧೆ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಪಾಠ ಮಾಡುವುದಕ್ಕಿಂತ ತೋಟ ಮಾಡುವುದು, ಬಡ್ಡಿ ವ್ಯವಹಾರ ಮಾಡುವುದು, ಟ್ಯಾಕ್ಸಿ ನಡೆಸುವುದು–  ಇಂತುಹದರಲ್ಲಿಯೇ ಸಮಯ ಕಳೆದು ಹೋದರೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಹೇಗೆ ಸುಧಾರಣೆ ಆಗುತ್ತದೆ. ಉಪನಿರ್ದೇಶಕರಾಗಿ ನಿವೇನು ಮಾಡುತ್ತಿದ್ದೀರಿ’ ಎಂದು ಮಧುಗಿರಿ ಡಿಡಿಪಿಐ ಮತ್ತು ತುಮಕೂರು ಡಿಡಿಪಿಐ ವಿರುದ್ಧ ಸಿಇಒ ಶಾಂತಾರಾಮ್ ಹರಿಹಾಯ್ದರು. ‘ಶೂ, ಸಮವಸ್ತ್ರ, ಸಾಕ್ಸ್ ವಿತರಣೆಯಲ್ಲಿ ಅಕ್ರಮ ನಡೆದರೆ ಸುಮ್ಮನಿರಲ್ಲ’ ಎಂದೂ ಎಚ್ಚರಿಕೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ‘ಕಟ್ಟೆಗೊಲ್ಲಹಳ್ಳಿ,ಚುಂಚನಕಟ್ಟೆ, ಚಂಗಪ್ಪನಹಳ್ಳಿ ಗ್ರಾಮಕ್ಕೆ 7 ತಿಂಗಳಿಂದ ಟ್ಯಾಂಕರ್ ನೀರು ಪೂರೈಸಲಾಗಿದೆ. ಆದರೆ, ಬಿಲ್ ಪಾವತಿ ಮಾಡಿಲ್ಲ ಯಾಕೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲಲಿತೇಶ್ ಅವರನ್ನು ಪ್ರಶ್ನಿಸಿದರು.

ದೀರ್ಘ ಅವಧಿಯವರೆಗೆ ಟ್ಯಾಂಕರ್‌ ನೀರು ಪೂರೈಕೆಗೆ ಅವಕಾಶ ಕೊಟ್ಟವರು ಯಾರು? ಕೊಳವೆ ಬಾವಿ ಕೊರೆಸಿ  ಅಥವಾ ಬೇರೆ ಕಡೆಯಿಂದ ನೀರು ಪೂರೈಸುವ ವ್ಯವಸ್ಥೆ ಮಾಡಬೇಕಿತ್ತು. ಅದನ್ನು ಯಾಕೆ ಮಾಡಿಲ್ಲ. ಒಂದು ಕೊಳವೆ ಬಾವಿ ವಿಫಲವಾದರೆ  ಬೇರೆ ಕಡೆಯಿಂದ ನೀರು ಪೂರೈಕೆಗೆ ಮುಂದಾಗಬೇಕಿತ್ತು. ಅದನ್ನು ಮಾಡದೇ ಟ್ಯಾಂಕರ್‌ಗಳಿಂದ ನೀರು ಪೂರೈಸಿರುವುದು ಸರಿಯಲ್ಲ. ಇವರಿಗೆ ಷೋಕಾಸ್ ನೋಟಿಸ್ ಕೊಡಿ’ ಎಂದು ಉಪಕಾರ್ಯದರ್ಶಿಗೆ ಸಿಇಒ ಆದೇಶಿಸಿದರು.

ಉಪಾಧಕ್ಷರಿಂದ ತರಾಟೆ: ‘ಮಲ್ಲಸಂದ್ರ ಬಳಿ ಕುಡಿಯುವ ನೀರು ಪೂರೈಕೆ ಪೈಪ್‌ 3 ಅಡಿ ಆಳದಲ್ಲಿ ಹಾಕಬೇಕು. ಆದರೆ, 2 ಅಡಿ ಆಳದಲ್ಲಿ ಹಾಕಲಾಗಿದೆ. ಲೋಪದ ಬಗ್ಗೆ ತಿಳಿಸಿ ಸರಿಪಡಿಸಲು ಸೂಚಿಸಿದರೂ ಗಮನಹರಿಸಿಲ್ಲ’ ಎಂದು ಉಪಾಧ್ಯಕ್ಷೆ ಶಾರದಾ ತರಾಟೆಗೆ ತೆಗೆದುಕೊಂಡರು. ಆರೋಗ್ಯ ಇಲಾಖೆ, ಪಶು ಪಾಲನೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

ಕೃಷಿ ಭಾಗ್ಯ ಯೋಜನೆಯಲ್ಲಿ ಅವ್ಯವಹಾರ

ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಕೃಷಿ ಭಾಗ್ಯ ಯೋಜನೆಯಡಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸೇರಿ ಜಿಲ್ಲೆಯಾದ್ಯಂತ ರೈತರಿಗೆ ಸೌಲಭ್ಯ ಕಲ್ಪಿಸುವಲ್ಲಿ  ಅಕ್ರಮವಾಗಿದೆ. ಈ ಕುರಿತು ವಿವರಣೆ ಬಯಸಿದರೂ ಭೇಟಿ ಮಾಡಿ ವಿವರಣೆ ಒದಗಿಸಿಲ್ಲ ಎಂದು ಅಧ್ಯಕ್ಷೆ, ಉಪಾಧ್ಯಕ್ಷೆ, ಸಿಇಒ ಅವರು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಇಂದಿನ ಸಭೆಯಲ್ಲಿ ಪೂರ್ಣ ವಿವರ ಒದಗಿಸಲು ಅವಕಾಶ ಕೊಡಬೇಕು ಎಂದು ಸವಿತಾ ಅವರು ಮನವಿ ಮಾಡಿದರೂ ಅಧ್ಯಕ್ಷರು ಅದಕ್ಕೆ ಅವಕಾಶ ಕೊಡಲಿಲ್ಲ. ಬದಲಾಗಿ ಆಂತರಿಕ ತನಿಖೆ ನಡೆಸಿ ವರದಿ ಸಲ್ಲಿಸಲು ಸಿಇಒ ಅವರು ಉಪಕಾರ್ಯದರ್ಶಿಗೆ ಸೂಚಿಸಿದರು.

ಅಂಗನವಾಡಿ ದುರಸ್ತಿಗೆ ಹಣ ಬಿಡುಗಡೆ

‘ಜಿಲ್ಲೆಯಲ್ಲಿನ ಅಂಗನವಾಡಿ ಕಟ್ಟಡ ದುರಸ್ತಿಗೆ ₹ 1ಕೋಟಿ 70 ಲಕ್ಷ ಬಿಡುಗಡೆ ಆಗಿದೆ.  ಪ್ರತಿ ತಾಲ್ಲೂಕಿಗೆ ₹ 17 ಲಕ್ಷ ಬಿಡುಗಡೆ ಮಾಡಲಾಗುತ್ತಿದೆ’ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಂಜೇಗೌಡ ವಿವರಿಸಿದರು.

ಅಂಕಿ -ಅಂಶ

₹1.7ಕೋಟಿ ಅಂಗನವಾಡಿ ದುರಸ್ತಿಗೆ ಬಂದ ಹಣ

840 ಶಿಥಿಲ ಅಂಗನವಾಡಿಗಳು

340 ಆದ್ಯತೆಯನುಸಾರ ಆಯ್ಕೆ ಮಾಡಿದ ಅಂಗನವಾಡಿಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry