ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರ ಸಂಗೀತ ಸಭಾದ ಪ್ರಥಮ ಸಮ್ಮೇಳನ

Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ಸಂಗೀತ ವಿಮರ್ಶಕ ಟಿ.ಬಿ. ನರಸಿಂಹಾಚಾರ್ ಸಂಗೀತಕ್ಕೆ ನೀಡಿದ ಕೊಡುಗೆ ಅನನ್ಯ. ರಾಜ್ಯದಲ್ಲಿ ಶತಮಾನದ ಹಿಂದೆ ಇದ್ದದ್ದು ಎರಡೇ ಸಂಗೀತ ಸಭಾಗಳು. 1905ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗಾಯನ ಸಮಾಜ. ಆ ಕಾಲದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದುದು ಗಾಯನ ಸಮಾಜದಲ್ಲಿ ಮಾತ್ರ.

ಆಮೇಲೆ 1948ರಲ್ಲಿ ಟಿ.ಬಿ. ನರಸಿಂಹಾಚಾರ್‌ ಸಂಗೀತ ಪ್ರೇಮಿಗಳ ಸಹಕಾರದೊಂದಿಗೆ ಕರ್ನಾಟಕ ಸಂಗೀತವನ್ನು ಪ್ರಚಾರ ಮಾಡುವ ಸಲುವಾಗಿ ಉತ್ತರ ಬೆಂಗಳೂರಿನಲ್ಲಿ (ಮಲ್ಲೇಶ್ವರ, ರಾಜಮಹಲ್‌ ಗುಟ್ಟಹಳ್ಳಿ, ಶೇಷಾದ್ರಿಪುರ, ಶ್ರೀರಾಮಪುರ, ರಾಜಾಜಿನಗರ) ಒಂದು ಸಂಗೀತ ಸಭಾ ಸ್ಥಾಪಿಸಿದರು. ಅದುವೇ ‘ಮಲ್ಲೇಶ್ವರಂ ಸಂಗೀತ ಸಭಾ’.

ಆಗ ಬಹಳ ಸಕ್ರಿಯವಾಗಿದ್ದ ಸಂಗೀತ ಸಭಾದಲ್ಲಿ ಟಿ.ಬಿ ನರಸಿಂಹಾಚಾರ್‌ ಅವರೇ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಾರಂಭಿಸಿದರು. ಸಂಗೀತದ ಖ್ಯಾತನಾಮರೆಲ್ಲ ಇಲ್ಲಿ ಬಂದು ಹಾಡಲಾರಂಭಿಸಿದರು. ಎಂ.ಎಸ್‌.ಸುಬ್ಬುಲಕ್ಷ್ಮಿ, ಅರಿಯಾಕುಡಿ, ಚೆಂಬೈ ಭಾಗವತರು, ಶೆಮ್ಮಂಗುಡಿ, ಎಂಎಲ್‌ವಿ ಅವರಂತಹ ದಿಗ್ಗಜರು ಹಾಡಿದರು. ಸಂಗೀತ ಸಭೆಗೆ ಹಲವಾರು ಸದಸ್ಯರಾದರು.

ಮುಂದೆ 2–3 ದಶಕಗಳ ಕಾಲ ಟಿಎನ್‌ಬಿ ಅವಿರತವಾಗಿ ದುಡಿದರು. ಮಲ್ಲೇಶ್ವರ ಸಂಗೀತ ಸಭಾ ಬಹಳ ಜನಪ್ರಿಯವಾಯಿತು.  ಸಂಗೀತೋತ್ಸವಗಳೂ ಬಹಳಷ್ಟು ನಡೆಯಿತು.

1966ರಿಂದ ತಮಿಳುನಾಡಿನ ಖ್ಯಾತ ಗಾಯಕ ಗಾಯಕಿಯರನ್ನೂ ಸಭೆ ಆಹ್ವಾನಿಸಿ ಕಛೇರಿ ನಡೆಸಿತು ಬೆಂಗಳೂರಿಗರಿಗೆ ಸಂಗೀತದ ರಸದೌತಣ ಸಿಗಲಾರಂಭಿಸಿತು.

ರೇಡಿಯೊ ಸಂಗೀತ ಕೇಳುತ್ತಿದ್ದ ಟಿಎನ್‌ಬಿ ಆಕಾಶವಾಣಿ ಕಲಾವಿದರಿಗೂ ವೇದಿಕೆ ನೀಡಲಾರಂಭಿಸಿದರು. 1973ರ ಹೊತ್ತಿಗೆ ಮಲ್ಲೇಶ್ವರ ಸಂಗೀತ ಸಭಾ ಒಂದು ಪರಿಪೂರ್ಣ ಸಂಗೀತ ವೇದಿಕೆಯಾಗಿ ಮಾರ್ಪಟ್ಟಿತು. ಕರ್ನಾಟಕ, ತಮಿಳುನಾಡು ಮಾತ್ರವಲ್ಲದೆ ಆಂಧ್ರದ ಕಲಾವಿದರೂ ಬರತೊಡಗಿದರು.

ನಂತರ ಉದಯೋನ್ಮುಖ ಹಾಗೂ ಮಕ್ಕಳ ಸಂಗೀತ ಪ್ರತಿಭೆಯನ್ನು ಪ್ರೋತ್ಸಾಹಿಸಲು ‘ಟೈಗರ್‌ ವರದಾಚಾರ್‌ ಸ್ಮಾರಕ ಸಂಗೀತ ಸ್ಪರ್ಧೆ’ ಶುರು ಮಾಡಿದರು. 1988ರವರೆಗೂ ನಿರಂತರ ಸಂಗೀತ ಚಟುವಟಿಕೆಗಳಿಂದ ಸಭಾ ಬಹಳ ಖ್ಯಾತಿಯನ್ನೂ ಗಳಿಸಿತು. ಸ್ವಂತ ಕಟ್ಟಡವೂ ಇಲ್ಲದೆ ಮಲ್ಲೇಶ್ವರದ ಶ್ರೀರಾಮ ಮಂದಿರ ಸಭಾಂಗಣದಲ್ಲೇ ಈ ಎಲ್ಲ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದವು.

ವಿದ್ವಾನ್‌ ಟಿ.ಬಿ.ನರಸಿಂಹಾಚಾರ್‌ ಅವರ ಕಾಲಾನಂತರ ಮಲ್ಲೇಶ್ವರ ಸಂಗೀತ ಸಭಾ ತನ್ನ ಸಂಗೀತ ಚಟುವಟಿಕೆಗಳನ್ನು ಕೆಲಕಾಲ ಸ್ಥಗಿತಗೊಳಿಸಿತು. ಕೆಲ ವರ್ಷಗಳ ನಂತರ ಸ್ಥಳೀಯ ಕಲಾವಿದರು ಈ ಸಭಾದ ವತಿಯಿಂದ ಕಛೇರಿಗಳನ್ನು ನಡೆಸಲಾರಂಭಿಸಿದರು.

ಸಂಗೀತ ಸಮ್ಮೇಳನ: ಇದೀಗ ಸಂಗೀತ ಸಭಾ ಮತ್ತೆ ಸಂಗೀತ ಪರ್ವವನ್ನು ಆರಂಭಿಸಿದೆ.  ಜೂನ್‌ 16ರಿಂದ ಮೂರು ದಿನಗಳ ಪ್ರಥಮ ಸಂಗೀತ ಸಮ್ಮೇಳನ ಹಮ್ಮಿಕೊಂಡಿದೆ.

ಮಲ್ಲೇಶ್ವರದ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಈ ಸಂಗೀತ ಸಮ್ಮೇಳನದಲ್ಲಿ ಗಾನಕಲಾಭೂಷಣ ಆರ್‌.ಕೆ. ಪದ್ಮನಾಭ ಸಂಗೀತ ಅಧ್ಯಕ್ಷತೆ ವಹಿಸುವರು. ಯುವ ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ಯುವ ಮೃದಂಗ ವಾದಕ ಬಿ.ಸಿ. ಮಂಜುನಾಥ್‌ ವಹಿಸುವರು.

ದೇಶ ವಿದೇಶಗಳಲ್ಲಿ ಮೃದಂಗ ನಾದವನ್ನು ಹರಿಸುತ್ತಿರುವ ಬಿ.ಸಿ. ಮಂಜುನಾಥ್‌ ಸಮ್ಮೇಳನದ ಯುವ ವಿಭಾಗದ ಅಧ್ಯಕ್ಷತೆ ವಹಿಸುವರು.

**

ಪ್ರಥಮ ಸಂಗೀತ ಸಮ್ಮೇಳನ
* ವೀಣೆ-ಸುಮಾ ಸುಧೀಂದ್ರ . ವಯೋಲನ್‌ –ಎನ್.ಎನ್.ಗಣೇಶ್ ಕುಮಾರ್. ಮೃದಂಗ– ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ. ಘಟ-ಎಸ್.ಎನ್. ನಾರಾಯಣಮೂರ್ತಿ
* ಆಯೋಜನೆ–ಮಲ್ಲೇಶ್ವರ ಸಂಗೀತ ಸಭಾ ಟ್ರಸ್ಟ್
* ದಿನಾಂಕ: 17-06-2017
* ಸಮಯ : ಸಂಜೆ 06:30 ಯಿಂದ 08:30
* ಸ್ಥಳ : ಶ್ರೀರಾಮಮಂದಿರ, ಈಸ್ಟ್‍ಪಾರ್ಕ್ ರಸ್ತೆ, 8ನೇ ಅಡ್ಡರಸ್ತೆ, ಮಲ್ಲೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT