ಚಾಂಪಿಯನ್‌ ಭಾರತಕ್ಕೆ ಬಾಂಗ್ಲಾದೇಶ ಸವಾಲು

7
ಟೂರ್ನಿಯಲ್ಲಿ ಮೊದಲ ಬಾರಿ ಸೆಣಸಲಿರುವ ಉಭಯ ತಂಡಗಳು; ಶಿಖರ್ ಧವನ್‌, ರೋಹಿತ್‌ ಶರ್ಮಾ ಆಕರ್ಷಣೆ

ಚಾಂಪಿಯನ್‌ ಭಾರತಕ್ಕೆ ಬಾಂಗ್ಲಾದೇಶ ಸವಾಲು

Published:
Updated:
ಚಾಂಪಿಯನ್‌ ಭಾರತಕ್ಕೆ ಬಾಂಗ್ಲಾದೇಶ ಸವಾಲು

ಬರ್ಮಿಂಗ್‌ಹ್ಯಾಮ್‌: ಭರವಸೆಯ ಅಲೆ ಯಲ್ಲಿ ತೇಲುತ್ತಿರುವ ಭಾರತ ಮತ್ತು ಇತಿಹಾಸ ನಿರ್ಮಿಸುವ ನಿರೀಕ್ಷೆಯಲ್ಲಿರುವ ಬಾಂಗ್ಲಾದೇಶ ತಂಡಗಳು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿ ಫೈನಲ್‌ ಪಂದ್ಯದಲ್ಲಿ ಗುರುವಾರ ಸೆಣಸಲಿವೆ.

ಉತ್ತಮ ಲಯದಲ್ಲಿರುವ ಬ್ಯಾಟ್ಸ್‌ ಮನ್‌ಗಳು, ಪಂದ್ಯಕ್ಕೆ ಯಾವುದೇ ಸಂದರ್ಭದಲ್ಲಿ ತಿರುವು ನೀಡಬಲ್ಲ ಬೌಲರ್‌ಗಳು ಮತ್ತು ಎದುರಾಳಿಗಳ ಧೃತಿಗೆಡಿಸಬಲ್ಲ ಫೀಲ್ಡಿಂಗ್‌ ಭಾರತದ ಭರವಸೆ ಹೆಚ್ಚಿಸಿದೆ. ನ್ಯೂಜಿಲೆಂಡ್‌ ವಿರುದ್ಧ ಅಮೋಘ ಜಯ ಸಾಧಿಸಿದ ನಂತರ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಬಾಂಗ್ಲಾದೇಶ ಫೈನಲ್ ಹಂತಕ್ಕೇರುವ ಕನಸು ಹೊತ್ತು ಎಜ್‌ಬಾಸ್ಟನ್‌ ಕ್ರೀಡಾಂಗಣಕ್ಕೆ ಇಳಿಯ ಲಿದೆ. ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಯಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯ.

ಪಾಕಿಸ್ತಾನವನ್ನು ಆರಂಭಿಕ ಪಂದ್ಯದಲ್ಲಿ ಮಣಿಸಿ, ದಕ್ಷಿಣ ಆಫ್ರಿಕಾ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿದ ಭಾರತ ನಾಲ್ಕರ ಘಟ್ಟದ ಪಂದ್ಯದಲ್ಲಿ ಜಯ ಗಳಿಸುವ ನೆಚ್ಚಿನ ತಂಡ ಎಂಬುದು ಕ್ರಿಕೆಟ್ ಲೋಕದ ಲೆಕ್ಕಾಚಾರ. ಆದರೆ ಯಾವುದೇ ಕ್ಷಣದಲ್ಲಿ ಪುಟಿದೇಳುವ ಸಹಜ ಗುಣ ಇರುವ ಬಾಂಗ್ಲಾದೇಶವನ್ನು ವಿರಾಟ್ ಕೊಹ್ಲಿ ಬಳಗ ಲಘುವಾಗಿ ಪರಿಗಣಿಸುವಂತಿಲ್ಲ.

2007ರ ವಿಶ್ವಕಪ್‌ನ ಲೀಗ್‌ ಪಂದ್ಯದಲ್ಲಿ ಭಾರತ ವನ್ನು ಈ ತಂಡ ಐದು ವಿಕೆಟ್‌ಗಳಿಂದ ಸೋಲಿಸಿತ್ತು. ಇಂಥ ಅಚ್ಚರಿಯ ಫಲಿತಾಂಶ ನೀಡಬಲ್ಲ ಸಾಮರ್ಥ್ಯ ತಂಡಕ್ಕೆ ಈಗಲೂ ಇದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ್ದು ಇದಕ್ಕೆ ಸಾಕ್ಷಿ. ಗುರುವಾರ ಗೆಲುವು ಸಾಧಿಸಿ ಮೊದಲ ಬಾರಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್‌ ಪ್ರವೇಶಿಸಲು ಮಷ್ರಫೆ ಮೊರ್ತಜಾ ಬಳಗ ತುದಿಗಾಲಲ್ಲಿ ನಿಂತಿರುವುದರಿಂದ ಭಾರತ ಎಚ್ಚರಿಕೆಯ ಹೆಜ್ಜೆ ಇರಿಸಬೇಕಾಗಿದೆ. 

ಮೊದಲ ಎರಡು ಪಂದ್ಯಗಳಿಂದ ಹೊರಗೆ ಉಳಿದು ಮೂರನೇ ಪಂದ್ಯದಲ್ಲಿ ಅವಕಾಶ ಲಭಿಸಿದರೂ ಪರಿಣಾಮಕಾರಿಯಾಗದ ರವಿಚಂದ್ರನ್ ಅಶ್ವಿನ್‌ ಅವರಿಗೆ ಸೆಮಿಫೈನಲ್‌ನಲ್ಲಿ ಅವಕಾಶ ಸಿಗಬಹುದೇ ಎಂಬ ಕುತೂಹಲದ ಪ್ರಶ್ನೆಗೆ ಗುರುವಾರವಷ್ಟೇ ಉತ್ತರ ಸಿಗಲಿದೆ. ಅಶ್ವಿನ್ ಅವರನ್ನು ಹೊರಗುಳಿಸಿದರೆ ಉಮೇಶ್‌ ಯಾದವ್ ಅವರಿಗೆ ಮತ್ತೆ ಸ್ಥಾನ ಸಿಗುವ ಸಾಧ್ಯತೆ ಇದೆ. ಉಮೇಶ್‌ ಮೊದಲ ಪಂದ್ಯದಲ್ಲಿ 30 ರನ್‌ಗಳಿಗೆ ಮೂರು ವಿಕೆಟ್ ಕಬಳಿಸಿದ್ದರು.ಎರಡನೇ ಪಂದ್ಯದಲ್ಲಿ ಒಂದೂ ವಿಕೆಟ್‌ ಗಳಿಸದ ಅವರು 67 ರನ್‌ ಬಿಟ್ಟುಕೊಟ್ಟಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಅಂಗಳಕ್ಕೆ ಇಳಿದ ಅಶ್ವಿನ್‌ ಒಂಬತ್ತು ಓವರ್‌ಗಳಲ್ಲಿ 43 ರನ್‌ಗಳಿಗೆ ಒಂದು ವಿಕೆಟ್ ಉರುಳಿಸಿದ್ದರು. ಮೊದಲ ಎರಡನೇ ಪಂದ್ಯದಲ್ಲಿ ಕಳಪೆ ಬೌಲಿಂಗ್ ಮಾಡಿದ್ದ ಭಾರತದ ಬೌಲರ್‌ಗಳು ಕೊನೆಯ ಪಂದ್ಯದಲ್ಲಿ ಮೊನಚಾದ ದಾಳಿ ಸಂಘಟಿಸಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.

ಮೂರು ವರ್ಷಗಳಿಂದ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿರುವ ಬಾಂಗ್ಲಾದೇಶ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಈ ತಂಡದ ಸೆಮಿ ಪ್ರವೇಶಕ್ಕೆ ಅದೃಷ್ಟವೂ ಕಾರಣವಾಗಿತ್ತು.

ಸದ್ಯ ಭಾರತ ತಂಡದ ಯಾವ ಆಟಗಾರನೊಂದಿಗೆ ಕೂಡ ಬಾಂಗ್ಲಾ ಆಟಗಾರರನ್ನು ಹೋಲಿಸಲು ಸಾಧ್ಯವಿಲ್ಲ. ಶಿಖರ್ ಧವನ್‌ ಮತ್ತು ರೋಹಿತ್ ಶರ್ಮಾ ಅವರ ಆರಂಭಿಕ ಜೊತೆಯಾಟ  ಟೂರ್ನಿಯುದ್ದಕ್ಕೂ ಎದುರಾಳಿ ಬೌಲರ್‌ಗಳ ಬೆವರಿಳಿಸಿದೆ. ವಿರಾಟ್ ಕೊಹ್ಲಿ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಹೇಂದ್ರ ಸಿಂಗ್ ದೋನಿಯಂತೂ 50 ಓವರ್‌ಗಳ ಪಂದ್ಯದ ‘ರಾಜ’ ಎಂಬ ಹೆಸರು ಗಳಿಸಿದ್ದಾರೆ. ಯುವರಾಜ್ ಸಿಂಗ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಮುಂತಾದವರು ಪರಿಣಾಮಕಾರಿಯಾಗಿ ಬೆಳೆದಿದ್ದಾರೆ.

ಅತ್ತ ಬಾಂಗ್ಲಾದೇಶ ತಂಡದಲ್ಲಿ ತಮೀಮ್ ಇಕ್ಬಾಲ್‌ ಉತ್ತಮ ರನ್‌ ಸರಾಸರಿ ಉಳಿಸಿಕೊಂಡಿದ್ದರೂ ಅವರ ಆರಂಭಿಕ ಜೊತೆಗಾರ ಸೌಮ್ಯ ಸರ್ಕಾರ್‌ ಗುಂಪು ಹಂತದ ಪಂದ್ಯಗಳಲ್ಲಿ ಗಮನ ಸೆಳೆಯಲು ವಿಫಲರಾಗಿದ್ದಾರೆ. ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಇಮ್ರುಲ್‌ ಕೈಸ್‌ ಮತ್ತು ಮಧ್ಯಮ ಕ್ರಮಾಂಕದ ಶಬ್ಬೀರ್ ರಹಮಾನ್‌ಗೂ ಪರಿಣಾಮ ಬೀರಲು ಆಗಲಿಲ್ಲ. ಮುಷ್ಫಿಕುರ್‌ ರಹೀಮ್‌ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಕಲೆಯನ್ನು ಇನ್ನೂ ಕರಗತ ಮಾಡಿಕೊಂಡಿಲ್ಲ. ಹೀಗಾಗಿ ಶಕೀಬ್‌ ಅಲ್ ಹಸನ್ ಮತ್ತು  ಮೊಹಮ್ಮದುಲ್ಲ ಅವರ ಮೇಲೆ ಈ ತಂಡ ಭರವಸೆ ಅಪಾರ ನಿರೀಕ್ಷೆ ಇರಿಸಿದೆ. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರ ಅಬ್ಬರದ ಆಟ ತಂಡವನ್ನು ಜಯದ ದಡ ಸೇರಿಸಿತ್ತು.

ನಾಯಕ ಮಷ್ರಫೆ ಮೊರ್ತಜಾ ಮತ್ತು ಮುಸ್ತಫಿಜುರ್ ರಹಮಾನ್‌ ಹೊಸ ಚೆಂಡನ್ನು ನಿರೀಕ್ಷೆಗೆ ತಕ್ಕಂತೆ ಬಳಸಲು ವಿಫಲರಾಗಿದ್ದಾರೆ. ಹೀಗಾಗಿ ಟಸ್ಕಿನ್ ಅಹಮ್ಮದ್‌ ಮತ್ತು ಮೊಸಾಡೆಕ್ ಹೊಸೈನ್‌ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಭಾರತದ ಮೇಲೆಯೇ ಹೆಚ್ಚು ಒತ್ತಡ

ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶಕ್ಕಿಂತ ಭಾರತ ತಂಡದ ಮೇಲೆಯೇ ಹೆಚ್ಚು ಒತ್ತಡ ಇದೆ ಎಂದು ಬಾಂಗ್ಲಾದೇಶ ತಂಡದ ಮಾಜಿ ನಾಯಕರಾದ ಮಹಮ್ಮದ್ ಅಶ್ರಫುಲ್ ಮತ್ತು ಹಬೀಬುಲ್‌ ಬಾಷಾರ್‌ ಅಭಿಪ್ರಾಯಪಟ್ಟರು. ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು ‘ನಮ್ಮ ತಂಡ ಈ ಹಿಂದೆ ಏಷ್ಯಾ ಕಪ್ ಫೈನಲ್‌ ಪ್ರವೇಶಿಸಿತ್ತು. ಆದರೆ ಮಿನಿ ವಿಶ್ವಕಪ್‌ ಎಂದೇ ಕರೆಯಲಾಗುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ಗುರುವಾರ ಜಯ ಸಾಧಿಸಿ ಇತಿಹಾಸ ಬರೆಯುವುದರಲ್ಲಿ ಸಂದೇಹವಿಲ್ಲ’ ಎಂದು ಭರವಸೆ ವ್ಯಕ್ತಪಡಿಸಿದರು.

ಬಾಂಗ್ಲಾ ಅಪಾಯಕಾರಿ ತಂಡ

‘ಬಾಂಗ್ಲಾದೇಶ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಆ ತಂಡವನ್ನು ನಾವು ಲಘುವಾಗಿ ಕಂಡಿಲ್ಲ’ ಎಂದು ಹೇಳಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ‘ಸದ್ಯದ ಪರಿಸ್ಥಿತಿಯಲ್ಲಿ ಬಾಂಗ್ಲಾ ಅಪಾಯಕಾರಿ ತಂಡ’ ಎಂದು ಅಭಿಪ್ರಾಯಪಟ್ಟರು. ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ‘ಕ್ರಿಕೆಟ್‌ ಪ್ರಪಂಚದ ಎಂಟು ಅತ್ಯುತ್ತಮ ತಂಡಗಳಲ್ಲಿ ಬಾಂಗ್ಲಾದೇಶವೂ ಒಂದು ಎಂಬುದನ್ನು ಮರೆಯುವಂತಿಲ್ಲ. ಆದ್ದರಿಂದ ಸೆಮಿಫೈನಲ್‌ನಲ್ಲಿ ಗಂಭೀರವಾಗಿ ಆಡಲಿದ್ದೇವೆ’ ಎಂದು ಅವರು ಹೇಳಿದರು. ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಸೆಮಿಫೈನಲ್‌ನಲ್ಲೂ ಕಣಕ್ಕೆ ಇಳಿಸಲಾಗುವುದು ಎಂದು ಅವರು ವಿವರಿಸಿದರು.

ಯುವರಾಜ್‌ಗೆ 300ನೇ ಪಂದ್ಯ

ಗುರುವಾರದ ಪಂದ್ಯದಲ್ಲಿ ಯುವರಾಜ್ ಸಿಂಗ್‌ ಕಣಕ್ಕೆ ಇಳಿದರೆ ಅದು ಅವರ 300ನೇ ಪಂದ್ಯ ಆಗಲಿದೆ. 299 ಏಕದಿನ ಪಂದ್ಯಗಳನ್ನು ಆಡಿರುವ 35 ವರ್ಷ ವಯಸ್ಸಿನ ಯುವಿ 274 ಇನಿಂಗ್ಸ್‌ಗಳಲ್ಲಿ 8622 ರನ್‌ ಗಳಿಸಿದ್ದಾರೆ. ಇದರಲ್ಲಿ 14 ಶತಕ ಮತ್ತು 52 ಅರ್ಧಶತಕಗಳಿವೆ. ಅವರ ಅತ್ಯಧಿಕ ವೈಯಕ್ತಿಕ ಮೊತ್ತ 150 ರನ್‌. ಬೌಲಿಂಗ್‌ನಲ್ಲೂ ಸಾಮರ್ಥ್ಯ ಮೆರೆದಿರುವ ಈ ಎಡಗೈ ಸ್ಪಿನ್ನರ್‌ 111 ವಿಕೆಟ್‌ ಕಬಳಿಸಿದ್ದಾರೆ. 31ಕ್ಕೆ 5 ಪಂದ್ಯವೊಂದರಲ್ಲಿ ಅವರ ಅತ್ಯುತ್ತಮ ಬೌಲಿಂಗ್‌.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ರೋಹಿತ್ ಶರ್ಮಾ, ಯುವರಾಜ್ ಸಿಂಗ್‌, ಎಂ.ಎಸ್‌.ಧೋನಿ (ವಿಕೆಟ್ ಕೀಪರ್‌), ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್‌, ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜ, ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್ ಬೂಮ್ರಾ, ಮಹಮ್ಮದ್ ಶಮಿ, ದಿನೇಶ್ ಕಾರ್ತಿಕ್‌, ಅಜಿಂಕ್ಯ ರಹಾನೆ.

ಬಾಂಗ್ಲಾದೇಶ: ಮಷ್ರಫೆ ಮೊರ್ತಜಾ (ನಾಯಕ), ತಮೀಮ್ ಇಕ್ಬಾಲ್‌, ಇಮ್ರುಲ್‌ ಕೈಸ್‌, ಸೌಮ್ಯ ಸರ್ಕಾರ್‌, ಶಬ್ಬೀರ್ ರಹಮಾನ್‌, ಮಹಮ್ಮದುಲ್ಲಾ ರಿಯಾದ್‌, ಶಕೀಬ್ ಅಲ್ ಹಸನ್‌, ಮುಷ್ಫಿಕುರ್‌ ರಹೀಮ್‌ (ವಿಕೆಟ್ ಕೀಪರ್‌), ರುಬೆಲ್‌ ಹೊಸೈನ್‌, ಮುಸ್ತಫಿಜೂರ್‌ ರಹಮಾನ್‌, ಟಸ್ಕಿನ್ ಅಹಮ್ಮದ್‌, ಮೆಹದಿ ಹೊಸೈನ್‌ ಮಿಜಾಜ್‌, ಮೊಸಾಡೆಕ್‌ ಹೊಸೈನ್‌, ಸುನ್ಜಮುಲ್‌ ಇಸ್ಲಾಮ್‌, ಶಫೀವುಲ್‌ ಇಸ್ಲಾಮ್‌

ಪಂದ್ಯ ಆರಂಭ: ಮಧ್ಯಾಹ್ನ 3 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry