ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹100 ಕೋಟಿ ಮೌಲ್ಯದ ಜಾಗ ವಶ

ವರ್ತೂರು ಕೆರೆ: ಒತ್ತುವರಿಯಾಗಿದ್ದ 16ಎಕರೆ 17 ಗುಂಟೆ ತೆರವು
Last Updated 14 ಜೂನ್ 2017, 20:18 IST
ಅಕ್ಷರ ಗಾತ್ರ

ಬೆಂಗಳೂರು:  ಮಹದೇವಪುರ ಕ್ಷೇತ್ರದ ವರ್ತೂರು ಕೆರೆಯಲ್ಲಿ ಒತ್ತುವರಿಯಾಗಿದ್ದ ₹100 ಕೋಟಿ ಮೌಲ್ಯದ ಒಟ್ಟು 16 ಎಕರೆ 17 ಗುಂಟೆ ಜಾಗವನ್ನು ಬಿಡಿಎ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.

ಕೆರೆ ಪಶ್ಚಿಮ ಭಾಗದ ರಾಮಗೊಂಡನಹಳ್ಳಿ ಕಡೆ ಕೆಲ ಸ್ಥಳೀಯ ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ 2014ರ ಜುಲೈ 21ರಂದು ವರದಿ ಪ್ರಕಟಗೊಂಡಿತ್ತು. ಇದನ್ನು ಪರಿಗಣಿಸಿದ ಜಿಲ್ಲಾಡಳಿತವು ಹೊಸದಾಗಿ ಸರ್ವೇ ನಡೆಸಿ ತೆರವು ಕಾರ್ಯಾಚರಣೆ ನಡೆಸುವಂತೆ ಕಂದಾಯ ಇಲಾಖೆಗೆ ಆದೇಶ ನೀಡಿತ್ತು.

ಪೂರ್ವ ತಾಲ್ಲೂಕಿನ ತಹಶೀಲ್ದಾರ್ ತೇಜಸ್‌ಕುಮಾರ್ ಹಾಗೂ ಬಿಡಿಎ ಅಧಿಕಾರಿಗಳು ಬೆಳಿಗ್ಗೆ 8ಕ್ಕೆ ಬಂದು ತೆರವು ಕಾರ್ಯಾಚರಣೆ ನಡೆಸಿದರು.
ಕೆರೆಯ ದಂಡೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ನಾಲ್ಕು ವಾಣಿಜ್ಯ ಮಳಿಗೆಗಳು, ಗ್ಯಾರೇಜ್ ಹಾಗೂ ಶೆಡ್‌ಗಳನ್ನು ತೆರವುಗೊಳಿಸಿದರು.
ತೆರವುಗೊಳಿಸಿದ ಜಾಗದಲ್ಲಿ ತಂತಿ ಬೇಲಿ ಅಳವಡಿಸಲಾಯಿತು.

ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡ ಸಂಜು ಎಂಬುವರು ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು. ಅಲ್ಲದೆ, ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಲಾಟೆ ಮಾಡಿದರು. ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ ಕುಮಾರ್, ‘ವರ್ತೂರು ಕೆರೆಯು ಒಟ್ಟು 445 ಎಕರೆ 14 ಗುಂಟೆ ವಿಸ್ತೀರ್ಣ ಹೊಂದಿದೆ.  ರಾಮಗೊಂಡನಹಳ್ಳಿ ಕಡೆಯಿಂದ ಸಿದ್ದಾಪುರ ಗ್ರಾಮದವರೆಗೂ ಕೆರೆಯ ದಂಡೆಯಲ್ಲಿ 16 ಎಕರೆ 17 ಗುಂಟೆ ಒತ್ತುವರಿಯಾಗಿತ್ತು. ಅದನ್ನು ಈಗ ತೆರವುಗೊಳಿಸಿದ್ದೇವೆ’ ಎಂದರು.

‘ಕೆರೆಯ ಬೇಲಿಯನ್ನು ಕಿತ್ತು ಹಾಕಿರುವ ಕೆಲ ರೈತರು, ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಆ ಜಾಗವನ್ನೂ ತೆರವುಗೊಳಿಸಲಾಗಿದೆ. ಒತ್ತುವರಿ ತೆರವು ಮಾಡುವುದಷ್ಟೇ ಅಲ್ಲ, ವರ್ತೂರು ಕೆರೆಯ ಸಂರಕ್ಷಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದರು. ‘ವರ್ತೂರು ಕೆರೆ ಭಾಗದಲ್ಲಿ 30 ಎಕರೆ 17 ಗುಂಟೆ ಜಾಗ ಒತ್ತುವರಿ ಆಗಿದೆ ಎಂದು ಎ.ಟಿ.ರಾಮಸ್ವಾಮಿ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಪರೀಶಿಲನೆ ನಡೆಸಲಾಗುತ್ತಿದೆ. ಹಂತ ಹಂತವಾಗಿ ಒತ್ತುವರಿ ಕಾರ್ಯಾಚರಣೆ ನಡೆಸುತ್ತೇವೆ’ ಎಂದರು.

‘ವರ್ತೂರು ಕೆರೆ ಕೋಡಿ ಭಾಗದಲ್ಲಿ ಅನಧಿಕೃತವಾಗಿ ಮಣ್ಣು ಸುರಿದು ಒತ್ತುವರಿ ಮಾಡುತ್ತಿರುವ ದೂರುಗಳಿವೆ. ಹೀಗಾಗಿ  ನಿಗಾ ವಹಿಸುವಂತೆ ವರ್ತೂರು ಠಾಣೆಯ ಪೊಲೀಸರಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT