ಆಟಕ್ಕೆ ಶೀಘ್ರವೇ ರೈಲ್ವೆ ಮೈದಾನ ಸಜ್ಜು

7
ಕ್ರಿಕೆಟ್‌ ಚಟುವಟಿಕೆಗೆ ನಾಲ್ಕು ಪಿಚ್‌ ನಿರ್ಮಾಣ, ನಡಿಗೆಗಾಗಿಯೇ ಪ್ರತ್ಯೇಕ ಟ್ರ್ಯಾಕ್‌

ಆಟಕ್ಕೆ ಶೀಘ್ರವೇ ರೈಲ್ವೆ ಮೈದಾನ ಸಜ್ಜು

Published:
Updated:
ಆಟಕ್ಕೆ ಶೀಘ್ರವೇ ರೈಲ್ವೆ ಮೈದಾನ ಸಜ್ಜು

ಹುಬ್ಬಳ್ಳಿ: ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ನಗರದ ರೈಲ್ವೆ ಕ್ರೀಡಾ ಮೈದಾನದಲ್ಲಿ ನಡೆಯುತ್ತಿರುವ ನವೀಕರಣ ಕಾರ್ಯ ಜುಲೈ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದೆ.ಕ್ಲಬ್‌ ರಸ್ತೆಯಲ್ಲಿರುವ ಮೈದಾನದಲ್ಲಿ ಎಂಟು ಲೈನ್‌ಗಳ ಅಥ್ಲೆಟಿಕ್‌ ಟ್ರ್ಯಾಕ್‌, ಕ್ರಿಕೆಟ್‌ ಮೈದಾನ, ಬ್ಯಾಸ್ಕೆಟ್‌ಬಾಲ್ ಮತ್ತು ವಾಲಿಬಾಲ್‌ ಅಂಕಣ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೈದಾನದ ಸುತ್ತಲೂ ಒಳಚರಂಡಿ ವ್ಯವಸ್ಥೆ ನಿರ್ಮಿಸ ಲಾಗುತ್ತಿದೆ. ಕ್ರಿಕೆಟ್‌ ಮೈದಾನದ ಅಂಚಿಗೆ ಹೊಂದಿಕೊಂಡಂತೆ ಮಣ್ಣಿನ ಅಥ್ಲೆಟಿಕ್‌ ಟ್ರ್ಯಾಕ್‌ ಸಜ್ಜಾಗುತ್ತಿದೆ. ಈ ಟ್ರ್ಯಾಕ್‌ಗಾಗಿ ಮಣ್ಣನ್ನು ಸಮತಟ್ಟು ಮಾಡಲಾಗಿದೆ.ಕ್ರಿಕೆಟ್‌ ಮೈದಾನದಲ್ಲಿ ಒಟ್ಟು ನಾಲ್ಕು ಪಿಚ್‌ಗಳನ್ನು ಸಜ್ಜು ಮಾಡಲಾಗುತ್ತಿದ್ದು, ಎರಡು ಪಿಚ್‌ಗಳು ಅಭ್ಯಾಸಕ್ಕೆ, ಉಳಿದ ಇನ್ನೆರೆಡು ಪಿಚ್‌ ಪಂದ್ಯಗಳನ್ನು ನಡೆಸಲು ಮೀಸಲಿಡಲಾಗಿದೆ.‘ರೈಲ್ವೆ ಮೈದಾನದಲ್ಲಿ ಎಂಟು ತಿಂಗಳ ಹಿಂದೆಯೇ ಕಾಮಗಾರಿ ಆರಂಭವಾಗಿದೆ. ಅಥ್ಲೆಟಿಕ್‌ ಟ್ರ್ಯಾಕ್‌, ನವೀಕೃತ ಕ್ರಿಕೆಟ್‌ ಮೈದಾನ, ನೂತನ ವಾಲಿಬಾಲ್‌ ಕೋರ್ಟ್‌ ಹೀಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಜುಲೈ ಮೊದಲ ವಾರದಲ್ಲಿ ಕೆಲಸ ಪೂರ್ಣಗೊಳ್ಳಲಿದ್ದು, ಬಳಿಕ ರೈಲ್ವೆ ಕ್ರೀಡಾಪಟುಗಳ ಬಳಕೆಗೆ ಮೈದಾನ ಮುಕ್ತವಾಗಲಿದೆ’ ಎಂದು ಮೈದಾನದ ಉಸ್ತುವಾರಿ ನೋಡಿ ಕೊಳ್ಳುತ್ತಿರುವ ಮಂಜು ಬಸವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.‘ಮೈದಾನವು ಹಿಂದೆ ಕ್ರೀಡಾ ಚಟುವಟಿಕೆಗಳಿಗಿಂತ ಬೇರೆ ಉದ್ದೇಶ ಕ್ಕಾಗಿಯೇ ಹೆಚ್ಚು ಬಳಕೆಯಾಗುತ್ತಿತ್ತು. ಎಂಟು ತಿಂಗಳ ಹಿಂದೆ ಕ್ರೀಡಾ ವಿಭಾಗದ ಉಸ್ತುವಾರಿ ವಹಿಸಿಕೊಂಡ ರೈಲ್ವೆ ಕ್ರೀಡಾ ಕಾರ್ಯದರ್ಶಿ ಎ.ಕೆ. ಮಲಿಕ್‌ ಅವರು ಮೈದಾನ ನವೀಕರಣ  ಕಾರ್ಯಕ್ಕೆ ಯೋಜನೆ ರೂಪಿಸಿದರು. ಕ್ರಿಕೆಟಿಗರಿಗೆ ಈಗಾಗಲೇ ಪೆವಿಲಿಯನ್‌ ಮತ್ತು ಡ್ರೆಸ್ಸಿಂಗ್ ಕೊಠಡಿ ಇದೆ.

ಮೈದಾನದಲ್ಲಿ ಹೊಸದಾಗಿ ‘ಗ್ರಾಸ್‌’ ಬೆಳೆಸಲಾಗುತ್ತಿದೆ. ಮುಂದಿನ ನಮ್ಮ ಬಜೆಟ್‌ ನೋಡಿ ಕೊಂಡು ಹೊನಲು ಬೆಳಕಿನಲ್ಲಿ ಪಂದ್ಯ ಗಳನ್ನು ನಡೆಸಲು ವ್ಯವಸ್ಥೆ ಮಾಡುವ ಯೋಜನೆ ಇದೆ’ ಎಂದು ಮಂಜು ತಿಳಿಸಿದರು.ಮಂಜು ಬಸವರಾಜ ಸ್ವತಃ ಅಥ್ಲೀಟ್‌ ಆಗಿದ್ದವರು. ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 5000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಪದಕದ ಸಾಧನೆ ಮಾಡಿದ್ದರು. ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಮಂಜು 2010ರಿಂದ ಮೂರು ವರ್ಷ ಅಂತರ ವಾರ್ಸಿಟಿ ಕ್ರೀಡಾಕೂಟಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದರು. ಈಗ ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದಲ್ಲಿ ಉದ್ಯೋಗಿಯಾಗಿದ್ದಾರೆ.ನಡಿಗೆಗೆ ಪ್ರತ್ಯೇಕ ಟ್ರ್ಯಾಕ್‌: ನಡಿಗೆ ಮೂಲಕ ದೈಹಿಕ ಕಸರತ್ತು ನಡೆಸುವ ಕ್ರೀಡಾಪಟುಗಳಿಗೆ ಪ್ರತ್ಯೇಕ ಟ್ರ್ಯಾಕ್‌ ನಿರ್ಮಾಣವಾಗುತ್ತಿದೆ. ‘ಓಡುವ ಮತ್ತು ನಡೆಯುವ ಕ್ರೀಡಾಪಟುಗಳ ನಡುವೆ ಗೊಂದಲವಾಗ ಬಾರದು. ಅಭ್ಯಾಸಕ್ಕೆ ಅಡ್ಡಿಯಾಗ ಬಾರದು ಎನ್ನುವ ಕಾರಣಕ್ಕೆ ನಡಿಗೆಗೆ ಪ್ರತ್ಯೇಕ ಟ್ರ್ಯಾಕ್‌ ನಿರ್ಮಿಸಲಾಗುತ್ತಿದೆ’ ಎಂದು ಮಂಜು ಹೇಳಿದರು.‘ಮೈದಾನ ನವೀಕರಣ ಕೆಲಸ ಈಗಾಗಲೇ ಮುಗಿಯಬೇಕಿತ್ತು. ಆದರೆ ನಗರದಲ್ಲಿ ಪದೇ ಪದೇ ಮಳೆ ಬಂದ ಕಾರಣ ವಿಳಂಬವಾಗಿದೆ. ಮುಂದಿನ 15 ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ’ ಎಂದು ಎಂದು ಅವರು ಹೇಳಿದರು.

*

ರೈಲ್ವೆ ಮೈದಾನ ಹಿಂದೆ ಕ್ರೀಡಾ ಚಟುವಟಿಕೆಗಳಿಗಿಂತ ಬೇರೆ ಉದ್ದೇಶಕ್ಕೆ ಹೆಚ್ಚು ಬಳಕೆಯಾಗುತ್ತಿತ್ತು. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ.

-ಮಂಜು ಬಸವರಾಜ,

ಎಂಜಿನಿಯರ್‌, ರೈಲ್ವೆ ಇಲಾಖೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry