‘ಸೌಂದರ್ಯ ಪ್ರಜ್ಞೆಯೇ ನಿಜವಾದ ಫ್ಯಾಷನ್’

7

‘ಸೌಂದರ್ಯ ಪ್ರಜ್ಞೆಯೇ ನಿಜವಾದ ಫ್ಯಾಷನ್’

Published:
Updated:
‘ಸೌಂದರ್ಯ ಪ್ರಜ್ಞೆಯೇ 	ನಿಜವಾದ ಫ್ಯಾಷನ್’

‘ನಮಗೆ ಆರಾಮವೆನಿಸುವ ಉಡುಪು ಧರಿಸಬೇಕು. ಸರಳತೆಯ ಜತೆಗೆ  ಧರಿಸುವವರ ಸೌಂದರ್ಯ ಪ್ರಜ್ಞೆಯನ್ನೂ ಆ ಉಡುಪು ಬಿಂಬಿಸುವಂತಿರಬೇಕು. ನನ್ನ ಪ್ರಕಾರ ಅದುವೇ ನಿಜವಾದ ಫ್ಯಾಷನ್...’

ಹೀಗೆಂದು ಫ್ಯಾಷನ್ ಬಗ್ಗೆ ಸರಳವಾಗಿ ಭಾಷ್ಯ ಬರೆದವರು ಫ್ಯಾಷನ್ ಡಿಸೈನರ್ ಲತಾ ಪುಟ್ಟಣ್ಣ.

ಸಾಂಪ್ರದಾಯಿಕ ಫ್ಯಾಷನ್ ಶಿಕ್ಷಣ ಪಡೆಯದೆ ಸೃಜನಶೀಲತೆ ಮತ್ತು  ಅಪಾರ ಪರಿಶ್ರಮ, ಶ್ರದ್ಧೆಯ ಕಾರಣದಿಂದ ದೇಶ–ವಿದೇಶಗಳಲ್ಲಿ ತಮ್ಮ ಫ್ಯಾಷನ್ ಛಾಪು ಮೂಡಿಸಿರುವ ಲತಾ, ಅಪ್ಪಟ ಕನ್ನಡತಿ.

ಲಾಕ್ಮೆ ಫ್ಯಾಷನ್ ವೀಕ್, ವೋಗ್ ಫ್ಯಾಷನ್ ಷೋಗಳು ಸೇರಿದಂತೆ ಲಂಡನ್, ಸಿಂಗಪುರ ಹೀಗೆ ವಿದೇಶಗಳಲ್ಲೂ ಭಾರತೀಯ ಸಾಂಪ್ರದಾಯಿಕ ವಸ್ತ್ರವಿನ್ಯಾಸಗಳನ್ನು ಪರಿಚಯಿಸಿದ ಕೀರ್ತಿ ಅವರದು.

ನಟಿ ಸುಮಲತಾ, ಗೀತಾ ಶಿವರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ , ನೃತ್ಯಗಾರ್ತಿ, ನಟಿ ಲಕ್ಷ್ಮೀ ಗೋಪಾಲಸ್ವಾಮಿ ಹೀಗೆ ಅನೇಕ ಸೆಲೆಬ್ರಿಟಿಗಳು ಲತಾ ಅವರ ವಿನ್ಯಾಸದ ಉಡುಪುಗಳಿಗೆ  ಮಾರು ಹೋದವರ ಪಟ್ಟಿಯಲ್ಲಿದ್ದಾರೆ.

ಎರಡು ದಶಕಗಳಿಂದ ಫ್ಯಾಷನ್ ಜಗತ್ತಿನಲ್ಲಿ ಸಕ್ರಿಯರಾಗಿರುವ ಲತಾ, ‘ದಿ ಆರ್ಟ್ ವಿಲೇಜ್’ ಹೆಸರಿನಲ್ಲಿ ಜೂನ್ 16ರಂದು ರವಿಕೆಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ‘ಮೆಟ್ರೊ’ದೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

* ಫ್ಯಾಷನ್ ಡಿಸೈನಿಂಗ್ ಕ್ಷೇತ್ರಕ್ಕೆ ಬಂದದ್ದು ಹೇಗೆ?

ಚೆನ್ನಾಗಿ ಡ್ರೆಸ್‌ ಮಾಡಿಕೊಳ್ಳುವುದೆಂದರೆ ನನಗಿಷ್ಟ. ನನ್ನ ಕಲ್ಪನೆಯ ವಿನ್ಯಾಸಗಳ ಸ್ಕೆಚ್ ಮಾಡಿ ಟೈಲರ್ ಹತ್ತಿರ ಹೊಲಿಸುತ್ತಿದ್ದೆ. ಅದು ನನ್ನ ಸುತ್ತಮುತ್ತಲಿನವರಿಗೂ ಇಷ್ಟವಾಗುತ್ತಿತ್ತು.  ಒಮ್ಮೆ  ವಿವಿಧ ವಿನ್ಯಾಸದ 100 ಸಲ್ವಾರ್ ಕಮೀಜ್‌ಗಳನ್ನು ಡಿಸೈನ್ ಮಾಡಿ ಪ್ರದರ್ಶನಕ್ಕಿಟ್ಟೆ. ಅದರಲ್ಲಿ 80 ಉಡುಪುಗಳು ಮಾರಾಟವಾದವು. ಇದು ಫ್ಯಾಷನ್ ಡಿಸೈನರ್ ಆಗಲು ಪ್ರೇರಣೆಯಾಯಿತು.

* ನಿಮ್ಮ ವಿನ್ಯಾಸದ ವಿಶೇಷತೆಯೇನು?

ಸರಳತೆ ಇದ್ದಲ್ಲಿ ಸೌಂದರ್ಯವಿದೆ. ಅದನ್ನು ನನ್ನ ಉಡುಪುಗಳ ವಿನ್ಯಾಸದಲ್ಲಿ ತರಲು ಯತ್ನಿಸಿದ್ದೇನೆ. ಉಡುಪುಗಳಲ್ಲಿ ಜಾಸ್ತಿ ಫ್ಯೂಷನ್ ಮಾಡುವುದು ನನಗಿಷ್ಟವಿಲ್ಲ. ಪರಂಪರೆಯ ಸ್ಪರ್ಶ ಮತ್ತು ಕಲಾತ್ಮಕತೆ ನನ್ನ ವಿನ್ಯಾಸದ ವಿಶಿಷ್ಟ ಗುರುತು. ಭಾರತದಲ್ಲಿ ದೊರೆಯುವ ಎಲ್ಲಾ ರೀತಿಯ ಬಟ್ಟೆಗಳಲ್ಲೂ ವಿನ್ಯಾಸ ಮಾಡಿದ್ದೇನೆ.

* ಹೊಸ ರವಿಕೆಗಳ ವಿನ್ಯಾಸದ ಬಗ್ಗೆ ಹೇಳಿ.

ಈ ಕ್ಷೇತ್ರಕ್ಕೆ ಬಂದು 25 ವರ್ಷಗಳಾದ ಖುಷಿಗೆ ವಿಶಿಷ್ಟ ವಿನ್ಯಾಸದ ರವಿಕೆಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಿದ್ದೇನೆ.  25ರಿಂದ 55ರ ವಯೋಮಾನದ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ರವಿಕೆಗಳ ವಿನ್ಯಾಸ ಮಾಡಿದ್ದೇನೆ. ಈ ವಿನ್ಯಾಸ ಬಹುಪಯೋಗಿ. ಜೀನ್ಸ್‌ ಪ್ಯಾಂಟ್, ಗಾಗ್ರಾ, ಸೀರೆ, ಲೆಹೆಂಗಾ, ಲಂಗ–ದಾವಣಿ ಹೀಗೆ ವಿವಿಧ ಬಗೆಯ ಉಡುಪುಗಳಿಗೂ ಸೂಕ್ತವಾಗಿವೆ ಎಂಬುದೇ ವಿಶೇಷ.

* ನಿಮ್ಮ ವಿನ್ಯಾಸದ ದಿರಿಸುಗಳು ದುಬಾರಿ ಅನ್ನುತ್ತಾರಲ್ಲ...

‘ರೈಟ್ ಕ್ವಾಲಿಟಿ ರೈಟ್ ಪ್ರೈಸ್’ ಎನ್ನುವುದು ನನ್ನ ಧ್ಯೇಯ.  ನಾನು ಅವಸರದಲ್ಲಿ ವಿನ್ಯಾಸ ಮಾಡುವುದಿಲ್ಲ. ಒಮ್ಮೆ  ನನ್ನ ವಿನ್ಯಾಸದ ಉಡುಪು ಧರಿಸಿದವರು ಮತ್ತೊಮ್ಮೆ ಹುಡುಕಿಕೊಂಡು ನಮ್ಮ ಅಂಗಡಿಗೆ ಬರುತ್ತಾರೆ.  ಒಂದು ವಿನ್ಯಾಸವನ್ನು ಒಬ್ಬರಿಗೆಂದು ರೂಪಿಸಿದ ಮೇಲೆ ಅದನ್ನು  ಮತ್ತೊಬ್ಬರಿಗೆ ರಿಪೀಟ್ ಮಾಡುವುದಿಲ್ಲ.

* ನಗರದಲ್ಲಿ ನಿಮ್ಮ ಬ್ರಾಂಡ್‌ನ ಮಾರುಕಟ್ಟೆ ಹೇಗಿದೆ?

ನನ್ನ ವಿನ್ಯಾಸದ ಉಡುಪುಗಳಿಗೆ ಸೀಮಿತ ಮಾರುಕಟ್ಟೆ ಇದೆ. ಇದನ್ನು ನಾನು ವ್ಯವಹಾರ ಮನೋಭಾವಕ್ಕಿಂತ ಹೆಚ್ಚಾಗಿ ಖುಷಿಗಾಗಿ ಮಾಡುತ್ತಿದ್ದೇನೆ. ಇತರರು ನನಗೆ ಪ್ರತಿಸ್ಪರ್ಧಿಗಳಲ್ಲ. ಮೂರು ತಿಂಗಳ ಹಿಂದೆಯಷ್ಟೇ ಆನ್‌ಲೈನ್ ಮಾರಾಟ ಆರಂಭಿಸಿದ್ದೇನೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊಮ್ಮಗಳು ಆನ್‌ಲೈನ್  ಮಾರಾಟದ ಉಸ್ತುವಾರಿ ಹೊತ್ತಿದ್ದಾಳೆ.

(ವೆಬ್‌ಸೈಟ್‌: www.shrishtilathaputtanna.in

ವಿಳಾಸ: ಸೃಷ್ಟಿ ಫ್ಲ್ಯಾಗ್‌ಶಿಪ್ ಸ್ಟೋರ್,

ನಂ.102, 2ನೇ ಕ್ರಾಸ್, ಲಾಲ್‌ಬಾಗ್, ಸಿದ್ದಾಪುರ, ಜಯನಗರ 1ನೇ ಬ್ಲಾಕ್ ದೂರವಾಣಿ: 080–2656 7349)

**

‘ದಿ ಆರ್ಟ್ಸ್‌ ವಿಲೇಜ್’  ವಸ್ತ್ರಗಳ ಪ್ರದರ್ಶನ–ಮಾರಾಟ: ನಂ. 57, 58, 59, ಬೌರಿಂಗ್ ಇನ್‌ಸ್ಟಿಟ್ಯೂಟ್‌ ಎದುರು, ಸೇಂಟ್ ಮಾರ್ಕ್ಸ್‌ ರಸ್ತೆ, ಜೂನ್ 16, ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ. ರವಿಕೆಗಳ ಬೆಲೆ ₹ 4000ದಿಂದ ಆರಂಭ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry