ಬೆಂಗಳೂರು ವಿ.ವಿ ಕುಲಪತಿ ನೇಮಕಾತಿ ಬಿಕ್ಕಟ್ಟು

7
ರಾಜ್ಯ ಸರ್ಕಾರ ಶಿಫಾರಸು ಮಾಡಿದ ಹೆಸರು ತಿರಸ್ಕರಿಸಿದ ರಾಜ್ಯಪಾಲ ವಜುಭಾಯ್‌ ವಾಲಾ

ಬೆಂಗಳೂರು ವಿ.ವಿ ಕುಲಪತಿ ನೇಮಕಾತಿ ಬಿಕ್ಕಟ್ಟು

Published:
Updated:
ಬೆಂಗಳೂರು ವಿ.ವಿ ಕುಲಪತಿ ನೇಮಕಾತಿ ಬಿಕ್ಕಟ್ಟು

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ  ಡಾ. ಸಂಗಮೇಶ ಎ. ಪಾಟೀಲ ಅವರ ಹೆಸರನ್ನು ರಾಜ್ಯಪಾಲ ವಜುಭಾಯ್‌ ವಾಲಾ ತಿರಸ್ಕರಿಸಿದ್ದಾರೆ.

ಅಲ್ಲದೆ, ಈ ಹುದ್ದೆಗೆ ಡಾ. ವೇಣುಗೋಪಾಲ್‌ ಅವರನ್ನು ನೇಮಕ ಮಾಡುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಕುಲಪತಿ ನೇಮಕ ವಿಷಯ ರಾಜಭವನ ಹಾಗೂ ವಿಧಾನಸೌಧದ ನಡುವೆ ಸಂಘರ್ಷಕ್ಕೆ ಎಡೆಮಾಡಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾಗಿರುವ ಸಂಗಮೇಶ ಪಾಟೀಲ ಸದ್ಯ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿಯ ಕುಲಸಚಿವ (ಮೌಲ್ಯಮಾಪನ) ಆಗಿದ್ದಾರೆ. ವೇಣುಗೋಪಾಲ್‌ ಬೆಂಗಳೂರು ಯು.ವಿ.ಸಿ.ಇ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ.

‘ವೇಣುಗೋಪಾಲ್‌, ಅತ್ಯುತ್ತಮ ಶೈಕ್ಷಣಿಕ  ಅರ್ಹತೆ ಹೊಂದಿರುವುದರಿಂದ ಅವರನ್ನೇ ಕುಲಪತಿ ಹುದ್ದೆಗೆ ನೇಮಿಸಬೇಕೆಂದು ರಾಜ್ಯಪಾಲರು ಸೂಚಿಸಿದ್ದಾರೆ’ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ– 2010ರ ಅನ್ವಯ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಶೈಕ್ಷಣಿಕ ಅರ್ಹತೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಆಧಾರದಲ್ಲಿ ಕುಲಪತಿಗಳನ್ನು ನೇಮಿಸಬೇಕು. ಅದಕ್ಕೆ ರಾಜ್ಯ ಸರ್ಕಾರದ ಸಹಮತ ಇರಬೇಕು.

‘ಸರ್ಕಾರ ಶಿಫಾರಸು ಮಾಡಿರುವ ಹೆಸರನ್ನು ತಿರಸ್ಕರಿಸುವ ಅಧಿಕಾರ ರಾಜ್ಯಪಾಲರಿಗಿದೆ. ಅಗತ್ಯವಾದರೆ ಸರ್ಕಾರದಿಂದ ಸ್ಪಷ್ಟನೆ ಪಡೆಯಬಹುದು. ಆದರೆ, ಇಂಥವರನ್ನೇ ನೇಮಕ ಮಾಡಿ ಎಂದು ಅವರು ಏಕಪಕ್ಷೀಯವಾಗಿ ಸೂಚಿಸಲು ಬರುವುದಿಲ್ಲ. ರಾಜ್ಯ ಸರ್ಕಾರ ಕಳುಹಿಸಿದ ಮೊದಲ ಪಟ್ಟಿಯಲ್ಲಿರುವ ಹೆಸರುಗಳ ಬಗ್ಗೆ ರಾಜ್ಯಪಾಲರಿಗೆ ಆಕ್ಷೇಪಗಳಿದ್ದರೆ ಮತ್ತೊಂದು ಪಟ್ಟಿ ಕಳುಹಿಸುವಂತೆ ಕೇಳಬಹುದು’ ಎಂದು ಕಾಯ್ದೆ ಸ್ಪಷ್ಟಪಡಿಸಿದೆ.

‘ಹಿಂದೆಯೂ ಕೆಲವು ಸಂದರ್ಭಗಳಲ್ಲಿ ರಾಜ್ಯಪಾಲರು ಸರ್ಕಾರದ ಜೊತೆ ಸಮಾಲೋಚಿಸದೆ ಕುಲಪತಿಗಳನ್ನು ನೇಮಕ ಮಾಡಿದ ಉದಾಹರಣೆಗಳಿವೆ. ಸರ್ಕಾರದ ಸಹಮತದೊಂದಿಗೆ ಎಂಬ ವ್ಯಾಖ್ಯಾನಕ್ಕೆ ಅರ್ಥವೇ ಇಲ್ಲವಾಗಿದೆ’ ಎಂದೂ ಮೂಲಗಳು ವಿವರಿಸಿವೆ.

ಕಾಯ್ದೆಯಡಿ ಇರುವ ಅವಕಾಶ ಬಳಸಿಕೊಂಡು ಸರ್ಕಾರ ಸಂಗಮೇಶ ಪಾಟೀಲರ ಹೆಸರನ್ನೇ ಪುನಃ ರಾಜ್ಯಪಾಲರಿಗೆ ಕಳುಹಿಸಲು ತೀರ್ಮಾನಿಸಿದೆ. ಈ ಕುರಿತು ಅವರಿಗೆ ಮನವರಿಕೆ ಮಾಡಿಕೊಡಲೂ ನಿರ್ಧರಿಸಿದೆ.  ಒಂದೆರಡು ದಿನಗಳಲ್ಲಿ ರಾಜಭವನಕ್ಕೆ ಪತ್ರ ತಲುಪಿಸುವ ಸಾಧ್ಯತೆ ಇದೆ. ಈ ಶಿಫಾರಸನ್ನು ರಾಜ್ಯಪಾಲರು ಹಾಗೇ ಇಟ್ಟುಕೊಂಡು ಕಾಲಹರಣ ಮಾಡಿದರೆ ಏನು ಮಾಡುವುದು ಎಂಬ ಆತಂಕವೂ ಸರ್ಕಾರಕ್ಕಿದೆ.

ಅಂತಿಮಗೊಂಡ ಮೂವರ ಹೆಸರು: ಬೆಂಗಳೂರು ವಿ.ವಿ ಕುಲಪತಿ ಹುದ್ದೆಗೆ ಮೂವರು ಅರ್ಹರ ಹೆಸರನ್ನು ಶಿಫಾರಸು ಮಾಡಲು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್‌.ಆರ್‌. ನಿರಂಜನ ಅವರ ನೇತೃತ್ವದಲ್ಲಿ ಮೂವರ ಶೋಧನಾ ಸಮಿತಿ ರಚಿಸಲಾಗಿತ್ತು.

ಸಂಗಮೇಶ ಪಾಟೀಲ, ವೇಣುಗೋಪಾಲ್‌ ಮತ್ತು ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ. ನಾಗಭೂಷಣ್‌ ಅವರ ಹೆಸರುಗಳನ್ನು ಸಮಿತಿ ಅಂತಿಮಗೊಳಿಸಿತ್ತು. ಈ ಮಧ್ಯೆ, ನಾಗಭೂಷಣ್‌ ಅವರು ಅಲಹಾಬಾದ್‌ ಐಐಐಟಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಮುಖ್ಯಾಂಶಗಳು

* ಡಾ. ಸಂಗಮೇಶ ಪಾಟೀಲರ ಹೆಸರು ಒಪ್ಪದ ರಾಜ್ಯಪಾಲ

* ಡಾ. ವೇಣುಗೋಪಾಲ್‌ ಅವರನ್ನು ನೇಮಿಸುವಂತೆ ಸೂಚನೆ

* ರಾಜಭವನ– ವಿಧಾನಸೌಧದ ನಡುವೆ ಸಂಘರ್ಷ ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry