ಕಬ್ಬನ್‌ ಉದ್ಯಾನ: 2ನೇ ಶನಿವಾರ ವಾಹನ ಸಂಚಾರ ನಿಷೇಧ

7

ಕಬ್ಬನ್‌ ಉದ್ಯಾನ: 2ನೇ ಶನಿವಾರ ವಾಹನ ಸಂಚಾರ ನಿಷೇಧ

Published:
Updated:
ಕಬ್ಬನ್‌ ಉದ್ಯಾನ: 2ನೇ ಶನಿವಾರ ವಾಹನ ಸಂಚಾರ ನಿಷೇಧ

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ 2ನೇ ಶನಿವಾರವೂ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು ನಗರ ಪೊಲೀಸ್‌ ಕಮಿಷನರ್‌ ಮುಂದಾಗಿದ್ದಾರೆ.

ಇದರಿಂದಾಗಿ ಪ್ರತಿ ತಿಂಗಳ ಭಾನುವಾರದ ಜತೆಗೆ 2ನೇ ಶನಿವಾರವೂ ಉದ್ಯಾನದಲ್ಲಿ ವಾಹನಗಳ ಸಂಚಾರ ನಿಷೇಧವಾಗಲಿದೆ. ‘ವಾಹನಗಳ ಓಡಾಟ ಹೆಚ್ಚಾದರೆ ಉದ್ಯಾನದ ಮೇಲೆ ಗಂಭೀರ ಪರಿಣಾಮ ಬೀಳುತ್ತದೆ ಎಂದು ಭಾನುವಾರ ಹಾಗೂ ಪ್ರತಿ 2ನೇ ಶನಿವಾರ ಸಂಚಾರ ನಿಷೇಧಿಸಿದ್ದೆವು.

ಉದ್ಯಾನದ ಸುತ್ತಮುತ್ತ ವಾಹನಗಳ ದಟ್ಟಣೆ ಹೆಚ್ಚಿದೆ ಎಂದು ಹೇಳಿ ನಗರ ಪೊಲೀಸರು 2ನೇ ಶನಿವಾರವೂ ವಾಹನ ಓಡಾಟಕ್ಕೆ ಅವಕಾಶ ನೀಡಿದ್ದರು. ಇದಕ್ಕೆ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾಗಿತ್ತು’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಸಭೆ ನಡೆಯಿತು. ಈ ವೇಳೆ ಉದ್ಯಾನದ ವಿಷಯ ಪ್ರಸ್ತಾಪಿಸಲಾಯಿತು.

ಅದಕ್ಕೆ ಮುಖ್ಯ ಕಾರ್ಯದರ್ಶಿ, ವಾಹನಗಳ ಓಡಾಟದಿಂದ ಉದ್ಯಾನದ ರೂಪವೇ ಹಾಳಾಗುತ್ತದೆ. ಹೀಗಾಗಿ ಆದೇಶವನ್ನು ಹಿಂಪಡೆಯುವಂತೆ ಕಮಿಷನರ್‌ ಪ್ರವೀಣ್‌ ಸೂದ್‌ ಅವರಿಗೆ ಸೂಚಿಸಿದರು. ಅದಕ್ಕೆ ಕಮಿಷನರ್‌ ಸಹ ಒಪ್ಪಿದ್ದು, ಆದೇಶ ಹೊರಡಿಸುವುದು ಮಾತ್ರ ಬಾಕಿ ಇದೆ’ ಎಂದು ಹೇಳಿದರು.

ಈ ಕುರಿತು ಮಾತನಾಡಿದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ, ‘ಉದ್ಯಾನದಲ್ಲಿ ವರ್ಷಪೂರ್ತಿ ವಾಹನಗಳ ಸಂಚಾರ ನಿಷೇಧಿಸುವ ಅಧಿಕಾರ ತೋಟಗಾರಿಕೆ ಇಲಾಖೆಗೆ ಇದೆ’ ಎಂದು ಹೇಳಿದರು. ತೋಟಗಾರಿಕೆ ಇಲಾಖೆಯ ಆಯುಕ್ತ ಪಿ.ಸಿ.ರೇ ಮಾತನಾಡಿ, ‘ಜುಲೈ 8ರಂದು ವಾಹನಗಳು ಸಂಚರಿಸದಂತೆ ನೋಡಿಕೊಳ್ಳುವ ಭರವಸೆ ಪೊಲೀಸರಿಂದ ಸಿಕ್ಕಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry