ಬಿಜೆಪಿ ನಾಯಕರಿಂದ ಸೋನಿಯಾ ಭೇಟಿ

7
ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಯ್ಕೆ: ಹೆಸರು ಬಹಿರಂಗಪಡಿಸದ ಮುಖಂಡರು

ಬಿಜೆಪಿ ನಾಯಕರಿಂದ ಸೋನಿಯಾ ಭೇಟಿ

Published:
Updated:
ಬಿಜೆಪಿ ನಾಯಕರಿಂದ ಸೋನಿಯಾ ಭೇಟಿ

ನವದೆಹಲಿ: ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಸಂಬಂಧ ಬಿಜೆಪಿಯ ಹಿರಿಯ ಸಚಿವರಾದ ರಾಜನಾಥ್‌ ಸಿಂಗ್‌ ಮತ್ತು   ಎಂ. ವೆಂಕಯ್ಯ ನಾಯ್ಡು ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚಿಸಿದರು. ಆದರೆ ಸಂಭವನೀಯ ಅಭ್ಯರ್ಥಿ ಹೆಸರನ್ನು ಸಚಿವರು ಬಹಿರಂಗಪಡಿಸಿಲ್ಲ.

ಸೋನಿಯಾ ನಿವಾಸ ‘10 ಜನಪಥ್‌’ಗೆ ಬಂದಿದ್ದ ಇಬ್ಬರು ಸಚಿವರು ಸುಮಾರು 30 ನಿಮಿಷ ಕಾಲ ಸಮಾಲೋಚನೆ ನಡೆಸಿದರು.  ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್‌ ಮತ್ತು ಮಲ್ಲಿಕಾರ್ಜುನ ಖರ್ಗೆ  ಅವರೂ ಉಪಸ್ಥಿತರಿದ್ದರು.

‘ಯಾವುದೇ ಹೆಸರನ್ನು ಸೂಚಿಸದೇ ಇರುವ ಕಾರಣ ಒಮ್ಮತಕ್ಕೆ ಬರುವ ಪ್ರಶ್ನೆಯೇ ಇಲ್ಲ. ಅವರು ಹೆಸರು ಸೂಚಿಸಿದರೆ ಮಾತ್ರ ನಾವು ಪರಿಶೀಲಿಸಬಹುದು’ ಎಂದು ಬಳಿಕ ಸುದ್ದಿಗಾರರ ಜತೆ ಮಾತನಾಡಿದ  ಆಜಾದ್‌ ಮತ್ತು ಖರ್ಗೆ  ಹೇಳಿದರು. ‘ಚುನಾವಣೆಗೆ ಸಹಕಾರ ಕೋರುವುದಷ್ಟೇ ಈ ಭೇಟಿಯ ಉದ್ದೇಶವಾಗಿತ್ತು ಎನಿಸುತ್ತದೆ’ ಎಂದು ಅವರು ಹೇಳಿದರು.

‘ಸಾರ್ವಜನಿಕ ಸಂಪರ್ಕದ ಕಸರತ್ತು’:   ‘ರಾಷ್ಟ್ರಪತಿ ಚುನಾವಣೆ ಸಂಬಂಧ ಬಿಜೆಪಿ ಮುಖಂಡರು ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡುತ್ತಿರು ವುದು ಸಾರ್ವಜನಿಕ ಸಂಪರ್ಕದ ಕಸರತ್ತು ಇದ್ದಂತೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.

ನಾಯ್ಡು ಮತ್ತು ರಾಜನಾಥ್‌ ಸಿಂಗ್‌ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಬಿಜೆಪಿ ಮುಖಂಡರು ಯಾರ ಹೆಸರನ್ನೂ  ಪ್ರಸ್ತಾಪಿಸಿಲ್ಲ. ಕಳಂಕರಹಿತ ಜಾತ್ಯತೀತ ಮನೋಭಾವದ ವ್ಯಕ್ತಿ ಮುಂದಿನ ರಾಷ್ಟ್ರಪತಿ ಆಗಬೇಕು ಎಂಬುದು

ನಮ್ಮ ಪಕ್ಷದ ನಿಲುವು’ ಎಂದು  ತಿಳಿಸಿದ್ದಾರೆ.

ಪಕ್ಷದ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್‌ ಮತ್ತು ಬಿಎಸ್‌ಪಿಯ ಎಸ್‌.ಸಿ. ಮಿಶ್ರಾ ಅವರನ್ನೂ ನಾಯ್ಡು ಮತ್ತು ರಾಜನಾಥ್‌ ಭೇಟಿಯಾಗಿ ಚರ್ಚಿಸಿದರು.ಪಕ್ಷದ ಹೊರಗಿನ ಯಾವುದೇ ರಾಜಕೀಯೇತರ ಮತ್ತು ಕಲಾಂ ಅವರಂತಹ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಒಲುವು ತೋರಿಲ್ಲ ಎನ್ನಲಾಗಿದೆ.

ಭಾಗವತ್‌ ಇಲ್ಲವೇ ಸ್ವಾಮಿನಾಥನ್‌: ಶಿವಸೇನಾ (ಮುಂಬೈ ವರದಿ): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್‍ ಅವರು ರಾಷ್ಟ್ರಪತಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಶಿವಸೇನಾ, ಈಗ ಕೃಷಿ ವಿಜ್ಞಾನಿ ಎಂ.ಎಸ್‌. ಸ್ವಾಮಿನಾಥನ್‌ ಅವರ ಹೆಸರನ್ನೂ ಸೂಚಿಸಿದೆ.

ಭಾಗವತ್‌ಗೆ  ಔತಣ ನೀಡಿದ ಪ್ರಣವ್‌

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಶುಕ್ರವಾರ ಮಧ್ಯಾಹ್ನ ಭೋಜನಕೂಟ ಏರ್ಪಡಿಸಿದ್ದರು. ‘ಇದೊಂದು ವಿದಾಯದ ಕೂಟ ಅಷ್ಟೇ’ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

‘ಇಬ್ಬರು ನಾಯಕರು ಬಹಳ ವರ್ಷಗಳಿಂದ  ಪರಿಚಿತರು. ಹಾಗಾಗಿ ರಾಷ್ಟ್ರಪತಿ ಮುಖರ್ಜಿ ಅವರು ಭಾಗವತ್‌ ಅವರನ್ನು ಭೋಜನಕೂಟಕ್ಕೆ ಆಹ್ವಾನಿಸಿದ್ದರು. ಈ ಭೇಟಿ ಸಂಪೂರ್ಣ  ವೈಯಕ್ತಿಕ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ರಾಷ್ಟ್ರಪತಿ ಭವನದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜುಲೈ 25ರಂದು ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾಗುತ್ತಿರುವ  ಹಿನ್ನೆಲೆಯಲ್ಲಿ ಮುಖರ್ಜಿ ಅವರು ಬೇರೆ ಬೇರೆ ನಾಯಕರು ಮತ್ತು ವ್ಯಕ್ತಿಗಳಿಗೆ  ವಿದಾಯದ ಕೂಟಗಳನ್ನು ಏರ್ಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ,   ಕೇಂದ್ರ ಸಂಪುಟದ ಸಚಿವರು ಮತ್ತು ವಿರೋಧಪಕ್ಷದ ನಾಯಕರಿಗೆ ಕೂಡಾ ಭೋಜನ ಕೂಟ ಏರ್ಪಡಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಗೂ ಮುನ್ನ ಮುಖರ್ಜಿ ಮತ್ತು ಭಾಗವತ್‌ ಅವರು ಭೇಟಿಯಾಗುತ್ತಿರುವುದು ರಾಜಕೀಯ ಊಹಾಪೋಹಗಳಿಗೆ ಎಡೆಮಾಡಿದೆ.

ಇತ್ತೀಚೆಗೆ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಎರಡನೇ ಅವಧಿಗೆ  ಮುಂದುವರಿಯುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು. ಅತ್ಯಂತ ತೃಪ್ತಿಯಿಂದ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದರು.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ಮುಂದಿನ ರಾಷ್ಟ್ರಪತಿ ಮಾಡಬೇಕು. ರಾಷ್ಟ್ರಪತಿ ಭವನದಲ್ಲಿ ಹಿಂದುತ್ವದ ರಬ್ಬರ್‌ಸ್ಟಾಂಪ್‌ ಇರಬೇಕು ಎಂದು ಶಿವಸೇನಾ  ನಿರಂತರವಾಗಿ   ಹೇಳುತ್ತಾ ಬಂದಿದೆ.  ಆದರೆ, ರಾಷ್ಟ್ರಪತಿಯಾಗುವ ಆಸಕ್ತಿ ಇಲ್ಲ ಎಂದು ಭಾಗವತ್‌ ಈಗಾಗಲೇ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry