ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮನವಿ ತಿರಸ್ಕರಿಸಿದ ಐಸಿಜೆ

ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಕಾಲಾವಕಾಶ ನಿರಾಕರಣೆ: ಪಾಕಿಸ್ತಾನ ಹೇಳಿಕೆ
Last Updated 16 ಜೂನ್ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ : ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ವರೆಗೆ ಮುಂದೂಡುವಂತೆ ಭಾರತ ಮಾಡಿದ್ದ ಮನವಿಯನ್ನು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತಿರಸ್ಕರಿಸಿದೆ ಎಂದು ಪಾಕಿಸ್ತಾನ ಹೇಳಿದೆ.

ನೆದರ್ಲೆಂಡ್‌ನಲ್ಲಿರುವ ಪಾಕಿಸ್ತಾನದ ಕಾನ್ಸುಲೇಟ್ ಕಚೇರಿ ಮೂಲಕ ಈ ವಿಷಯ ತಿಳಿದುಬಂದಿದೆ ಎಂದು ಅಟಾರ್ನಿ ಜನರಲ್ ಅಶ್ತಾರ್ ಅಸಫ್ ಅಲಿ ಅವರು ಹೇಳಿರುವುದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ. ‘ಡಿಸೆಂಬರ್‌ವರೆಗೆ ಕಾಲಾವಕಾಶ ನೀಡಬೇಕು ಎಂದು ಭಾರತ ಮನವಿ ಸಲ್ಲಿಸಿತ್ತು. ಆದರೆ ಇದನ್ನು ತಿರಸ್ಕರಿಸಿದ ತನ್ನ ನಿರ್ಧಾರವನ್ನು ಪತ್ರದ ಮೂಲಕ ಐಸಿಜೆ ತಿಳಿಸಿದೆ’ ಎಂದು ಅಸಫ್ ಅಲಿ ಹೇಳಿದ್ದಾರೆ.

‘ಭಾರತವು ಈ ಪ್ರಕರಣವನ್ನು ವ್ಯಕ್ತಿಯೊಬ್ಬನ ಸಾವು ಮತ್ತು ಬದುಕಿನ ಪ್ರಶ್ನೆ ಎನ್ನುತ್ತಿದೆ. ಆದರೆ, ಐಸಿಜೆಯಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿಲ್ಲ ಎಂಬುದು ಪಾಕಿಸ್ತಾನದ ನಿಲುವು. ಜಾಧವ್ ಪ್ರತಿಕ್ರಿಯೆ ದಾಖಲಿಸಿಕೊಳ್ಳಲು ಎರಡರಿಂದ ಮೂರು ತಿಂಗಳ ಅವಕಾಶ ಸಾಕು ಎಂಬ ಅಭಿಪ್ರಾಯಕ್ಕೂ ಐಸಿಜೆ ಬರಬಹುದು’ ಎಂದು ಹೇಳಿದ್ದಾರೆ.

‘ಪಾಕಿಸ್ತಾನ ಡಿಸೆಂಬರ್‌ನಲ್ಲಿ ತನ್ನ ಪ್ರತಿಕ್ರಿಯೆ ಸಲ್ಲಿಸಲಿದ್ದು, 2018ರ ಜನವರಿಯಿಂದ ಪ್ರಕರಣದ ವಿಚಾರಣೆ ಆರಂಭವಾಗಲಿದೆ’ ಎಂದು ಮಾಹಿತಿಯ ಮೂಲ ಬಹಿರಂಗಪಡಿಸದೆ ಪತ್ರಿಕೆ ವರದಿ ಮಾಡಿದೆ. ಇರಾನ್‌ನಿಂದ ಪಾಕಿಸ್ತಾನ ಪ್ರವೇಶಿಸಿದ ಜಾಧವ್ ಅವರನ್ನು ಬಲೂಚಿಸ್ತಾನದಲ್ಲಿ ಬಂಧಿಸಲಾಯಿತು  ಎಂದು ಪಾಕಿಸ್ತಾನ ಹೇಳಿದೆ. ಆದರೆ, ಜಾಧವ್ ಅವರನ್ನು ಇರಾನ್‌ನಿಂದ ಅಪಹರಣ ಮಾಡಲಾಗಿತ್ತು ಎಂಬುದು ಭಾರತದ ವಾದ.

ಜಾಧವ್ ಅವರಿಗೆ ಗಲ್ಲು ಶಿಕ್ಷೆ ಜಾರಿ ಮಾಡಿ  ಪಾಕಿಸ್ತಾನ ಸೇನಾ ನ್ಯಾಯಾಲಯವು ಏಪ್ರಿಲ್‌ನಲ್ಲಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ಭಾರತವು ಮೇ 8ರಂದು ಐಸಿಜೆಗೆ ಮೇಲ್ಮನವಿ ಸಲ್ಲಿಸಿತ್ತು. ಅದರ ಮರುದಿನವೇ, ಶಿಕ್ಷೆಗೆ ತಡೆಯಾಜ್ಞೆ ನೀಡಿ ಅಂತರರಾಷ್ಟ್ರೀಯ ನ್ಯಾಯಾಲಯ ಆದೇಶಿಸಿತ್ತು.

ವಾದ ಮಂಡನೆಗೆ ಕಾಲಾವಕಾಶ
ನವದೆಹಲಿ (ಪಿಟಿಐ):  ಕುಲಭೂಷಣ್‌ ಜಾಧವ್‌ ಅವರ ಪ್ರಕರಣದಲ್ಲಿ ಸೆಪ್ಟೆಂಬರ್‌ 13ರ ಒಳಗೆ ವಾದ ಮಂಡಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಭಾರತಕ್ಕೆ ಹೇಳಿದೆ.  ಅದೇ ರೀತಿ ಪಾಕಿಸ್ತಾನಕ್ಕೆ ಡಿಸೆಂಬರ್‌ 13ರವರೆಗೆ ಕಾಲಾವಕಾಶ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT