ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ದರ ಪ್ರತಿದಿನ ಪರಿಷ್ಕರಣೆ ಸ್ವಾಗತಾರ್ಹ ಸುಧಾರಣಾ ಕ್ರಮ

Last Updated 16 ಜೂನ್ 2017, 19:30 IST
ಅಕ್ಷರ ಗಾತ್ರ

ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಪ್ರತಿದಿನ ಬೆಳಿಗ್ಗೆ ಬದಲಾಗುವ ಹೊಸ ವ್ಯವಸ್ಥೆ  ಶುಕ್ರವಾರದಿಂದ ದೇಶದಾದ್ಯಂತ ಇರುವ ಪೆಟ್ರೋಲ್ ಬಂಕ್‌ಗಳಲ್ಲಿ ಜಾರಿಗೆ ಬಂದಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಜಾರಿಗೆ ತಂದ ಮಹತ್ವದ ಸುಧಾರಣಾ ಕ್ರಮ ಇದಾಗಿದೆ. ಇಂಧನ ದರಗಳಲ್ಲಿ ಗರಿಷ್ಠ ಮಟ್ಟದ ಪಾರದರ್ಶಕತೆ ಕಾಯ್ದುಕೊಳ್ಳಲೂ ಇದರಿಂದ ಸಾಧ್ಯವಾಗಲಿದೆ. ತೈಲ ಮಾರಾಟ ಸಂಸ್ಥೆಗಳು, ಬಂಕ್‌ ಮಾಲೀಕರು ಮತ್ತು ಬಳಕೆದಾರರಿಗೂ ಇದು ಲಾಭದಾಯಕವಾಗಲಿದೆ. ಇಂಧನ ದರಗಳನ್ನು ಸರ್ಕಾರದ ನಿಯಂತ್ರಣದಿಂದ ಕೈಬಿಟ್ಟ ನಂತರದ ಪ್ರಮುಖ ಸುಧಾರಣಾ ಕ್ರಮ ಇದಾಗಿದೆ. ಕಳೆದ ತಿಂಗಳು ವಿಶಾಖಪಟ್ಟಣ, ಪುದುಚೇರಿ, ಉದಯಪುರ, ಜಮ್‌ಶೆಡ್‌ಪುರ ಮತ್ತು ಚಂಡೀಗಡ ನಗರಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತರಲಾಗಿತ್ತು. 

ಆ ಹಂತದಲ್ಲಿ,  ಗ್ರಾಹಕರು ಮತ್ತು ಬಂಕ್‌ ಮಾಲೀಕರಿಂದ ದೂರುಗಳೇನೂ ಕೇಳಿ ಬಂದಿಲ್ಲ. ಇದು ಹೊಸ ವ್ಯವಸ್ಥೆಯ ಯಶಸ್ಸಿಗೆ ಮುನ್ನುಡಿಯಾಗಿದೆ.  ಇದರಿಂದ ಪ್ರೇರಣೆಗೊಂಡು ಈಗ ದೇಶದಾದ್ಯಂತ ವಿಸ್ತರಿಸಲಾಗಿದೆ. ಮಧ್ಯರಾತ್ರಿ ದರ ಬದಲಾವಣೆ ಮಾಡುವ ನಿರ್ಧಾರ ವಿರೋಧಿಸಿ ಬಂಕ್‌ ಮಾಲೀಕರು ಬಂದ್‌ಗೆ ಕರೆಕೊಟ್ಟಿದ್ದರು. ಆದರೆ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ದರ ಬದಲಾವಣೆ ಮಾಡಲು ತೈಲ ಮಾರಾಟ ಸಂಸ್ಥೆಗಳು ಒಪ್ಪಿದ್ದರಿಂದ  ಮುಷ್ಕರ ಕೈಬಿಡಲಾಯಿತು.  ಇದರಿಂದ ಹೊಸ ವ್ಯವಸ್ಥೆ ಜಾರಿ ಹಾದಿಯಲ್ಲಿನ ಅಡಚಣೆಯೂ ದೂರವಾಗಿದೆ.  ಕೇಂದ್ರೀಕೃತ ವ್ಯವಸ್ಥೆಯಲ್ಲಿ ದರಗಳು ಸ್ವಯಂಚಾಲಿತವಾಗಿ ಬದಲಾಗುವುದರಿಂದ ಗ್ರಾಹಕರು ವಿಚಲಿತರಾಗಬೇಕಾಗಿಲ್ಲ.  ದೇಶದಲ್ಲಿನ 56 ಸಾವಿರ ಪೆಟ್ರೋಲ್‌ ಬಂಕ್‌ಗಳ ಪೈಕಿ 40 ಸಾವಿರ ಬಂಕ್‌ಗಳು ಸ್ವಯಂಚಾಲಿತ ವ್ಯವಸ್ಥೆಗೆ ಒಳಪಟ್ಟಿವೆ.  ಉಳಿದ ಕಡೆಗಳಲ್ಲಿ ಮಾತ್ರ ಮಾಲೀಕರೇ ಫಲಕಗಳಲ್ಲಿ ದರ ನಮೂದಿಸಬೇಕಾಗುತ್ತದೆ. 

ಹೊಸ ದರ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತರಲು ಸಾಕಷ್ಟು ಆಡಳಿತಾತ್ಮಕ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ದರ ನಿಗದಿಯಲ್ಲಿ ಕೈಚಳಕ ತೋರಿಸಿ ವಂಚನೆ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಗ್ರಾಹಕರು ಕೂಡ ತಮ್ಮ ಸಮೀಪದ ಬಂಕ್‌ಗಳಲ್ಲಿನ ದರದ ಕುರಿತು ಮೊಬೈಲ್‌ ಆ್ಯಪ್, ಎಸ್‌ಎಂಎಸ್‌ ಮತ್ತು ಅಂತರ್ಜಾಲ ತಾಣಗಳಿಂದ  ಮಾಹಿತಿ ಪಡೆಯಬಹುದು. ಈ ಕಾರಣಕ್ಕೆ ಬಂಕ್‌ ಮಾಲೀಕರು ದರ  ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಬರುವುದು ಅನಿವಾರ್ಯವಾಗಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಸರಾಸರಿ ದರ ಮತ್ತು ರೂಪಾಯಿ– ಡಾಲರ್‌ ವಿನಿಮಯ ದರ ಆಧರಿಸಿ ಪೆಟ್ರೋಲ್ ಮತ್ತು ಡೀಸೆಲ್‌ ದರಗಳು ಪ್ರತಿದಿನ ಬದಲಾಗಲಿವೆ.  ಈ  ದರ ವ್ಯತ್ಯಾಸವು ಪೈಸೆಗಳ ಲೆಕ್ಕದಲ್ಲಿ ಇರುವುದರಿಂದ ಗ್ರಾಹಕರಿಗೆ ಯಾವತ್ತೂ ಹೊರೆ ಎನಿಸದು. ಈ ಹಿಂದಿನಂತೆ ಪ್ರತಿ ಲೀಟರ್‌ ದರ ಹಠಾತ್ತಾಗಿ ಮೂರ್ನಾಲ್ಕು ರೂಪಾಯಿಗಳಲ್ಲಿ  ಹೆಚ್ಚಳಗೊಳ್ಳದು.  ತೈಲ ಪೂರೈಸುವ ಸಂಸ್ಥೆಗಳ ಅಧಿಕಾರಿಗಳು ಇಂಧನ ಮಾರಾಟ ಮತ್ತು ದರಗಳಲ್ಲಿನ ಲೆಕ್ಕಪತ್ರ ತಪಾಸಣೆ ಮಾಡುವುದರಿಂದ ಮಾಲೀಕರು ಕೈಚಳಕ ತೋರಿಸಲೂ ಮುಂದಾಗಲಿಕ್ಕಿಲ್ಲ.

ಇದುವರೆಗೆ 15 ದಿನಗಳಿಗೆ ಒಮ್ಮೆ  ದರ ಪರಿಷ್ಕರಿಸಲಾಗುತ್ತಿತ್ತು. ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ಕಾರಣಕ್ಕೆ ನಿಗದಿತ ಪರಿಷ್ಕರಣೆಯನ್ನೇ  ಮುಂದೂಡಲಾಗುತ್ತಿತ್ತು. ಇದರಿಂದ  ಕೆಲವೊಮ್ಮೆ ದರ ಏರಿಕೆ ದುಬಾರಿಯಾಗಿ ಪರಿಣಮಿಸುತ್ತಿತ್ತು. ಇನ್ನು ಮೇಲೆ ಸರ್ಕಾರದ ಇಂತಹ ಮರ್ಜಿ ಕಾಯುವಂತಹ ಸಂದರ್ಭವೇ ಬರಲಾರದು. ಇಂಧನ ಬಳಕೆ ವಿಷಯದಲ್ಲಿ ಆಮದನ್ನೇ ಹೆಚ್ಚಾಗಿ ಅವಲಂಬಿಸಿರುವ ಆರ್ಥಿಕತೆಯಲ್ಲಿ ತೈಲೋತ್ಪನ್ನಗಳ ದರಗಳನ್ನು  ರಾಜಕೀಯ ಪರಿಗಣನೆಗೆ ಬದಲಾಗಿ ಮಾರುಕಟ್ಟೆ ಶಕ್ತಿಗಳೇ ನಿರ್ಧರಿಸುವುದು ಹೆಚ್ಚು ಅಪೇಕ್ಷಣೀಯ.

ಸರ್ಕಾರದ ನಿಯಂತ್ರಣ ರದ್ದಾಗಿದ್ದರೂ, ಅಂತರರಾಷ್ಟ್ರೀಯ ಮಾರುಕಟ್ಟೆಯ ದರಕ್ಕೆ ಹೋಲಿಸಿದರೆ ನಮ್ಮಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಈಗಲೂ ದುಬಾರಿ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ಇಂಧನದ ಮೇಲೆ ಗರಿಷ್ಠ ಮಟ್ಟದ ತೆರಿಗೆ ವಿಧಿಸುತ್ತಿರುವುದೇ ಇದಕ್ಕೆ ಕಾರಣ. ಹೊಸ ವ್ಯವಸ್ಥೆಯು ಎಲ್ಲೆಡೆ ಯಶಸ್ವಿಯಾಗಲು, ಪೆಟ್ರೋಲ್‌ ಬಂಕ್‌ಗಳನ್ನೆಲ್ಲ  ಆದಷ್ಟು ಬೇಗ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಗೆ ಒಳಪಡಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT