‘ಎಸ್‌ಪಿಜಿ’ ವಿರುದ್ಧ ಕಾಂಗ್ರೆಸ್‌ನಲ್ಲಿ ಆಕ್ರೋಶ

7
ಅವಿಶ್ವಾಸ ನಿರ್ಣಯ ಸೋಲಿಗೆ ವಿ.ಎಸ್. ಉಗ್ರಪ್ಪ, ಎಚ್.ಎಂ. ರೇವಣ್ಣ ಹೊಣೆ

‘ಎಸ್‌ಪಿಜಿ’ ವಿರುದ್ಧ ಕಾಂಗ್ರೆಸ್‌ನಲ್ಲಿ ಆಕ್ರೋಶ

Published:
Updated:
‘ಎಸ್‌ಪಿಜಿ’ ವಿರುದ್ಧ ಕಾಂಗ್ರೆಸ್‌ನಲ್ಲಿ ಆಕ್ರೋಶ

ಬೆಂಗಳೂರು: ‘ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದಲ್ಲಿ ಪಕ್ಷ ಮುಖಭಂಗ ಅನುಭವಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಪೆಷಲ್‌ ಪ್ರೊಟೆಕ್ಷನ್ ಗ್ರೂಪ್‌ (ಎಸ್‌ಪಿಜಿ) ಕಾರಣ’ ಎಂಬ ಅಭಿಪ್ರಾಯ ಕಾಂಗ್ರೆಸ್‌ ವಲಯದಲ್ಲಿ ಬಂದಿದೆ.‘ಈ ಗುಂಪನ್ನು ಹೊರಗಿಡದಿದ್ದರೆ ಭವಿಷ್ಯದಲ್ಲಿ ಸರ್ಕಾರ ಮತ್ತು ಪಕ್ಷಕ್ಕೆ ಉಳಿಗಾಲವಿಲ್ಲ’ ಎಂಬ ಆತಂಕವನ್ನೂ ಕೆಲವು ಸಚಿವರು, ಶಾಸಕರು ಮುಖ್ಯಮಂತ್ರಿ ಎದುರೇ ಹೊರಹಾಕಿದ್ದಾರೆ.‘ಸಭಾಪತಿ ಸ್ಥಾನದಿಂದ ಡಿ.ಎಚ್. ಶಂಕರಮೂರ್ತಿ ಅವರನ್ನು ಕೆಳಗಿಳಿಸುವ ಮುನ್ನ ಕೆಪಿಸಿಸಿ ಅಧ್ಯಕ್ಷ ಹಾಗೂ ಸಭಾ ನಾಯಕರೂ ಆಗಿರುವ ಜಿ. ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್‌, ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ಜತೆ ಸೌಜನ್ಯಕ್ಕಾದರೂ ಚರ್ಚೆ ನಡೆಸಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿ.ಎಸ್‌. ಉಗ್ರಪ್ಪ, ಎಚ್‌.ಎಂ. ರೇವಣ್ಣ, ಅಶೋಕ ಪಟ್ಟಣ ಅವರನ್ನು ‘ಮುಖ್ಯಮಂತ್ರಿ ಎಸ್‌ಪಿಜಿ’ ಎಂದು ಕಾಂಗ್ರೆಸ್‌ ಶಾಸಕರು ಟೀಕಿಸುವುದುಂಟು. ಈ ಗುಂಪಿನ ಸಲಹೆ ಕೇಳಿ ಮುಖ್ಯಮಂತ್ರಿ  ಅನೇಕ ಬಾರಿ ಎಡವಿದ್ದಾರೆ. ಪಕ್ಷ ಹಲವು ಬಾರಿ ಮುಜುಗರ ಅನುಭವಿಸಿದೆ. ಇದು ಗೊತ್ತಿದ್ದೂ ಸಿದ್ದರಾಮಯ್ಯ ಈ ಗುಂಪನ್ನೇ  ನೆಚ್ಚಿಕೊಂಡಿದ್ದಾರೆ. ಹೀಗಾಗಿ ಸಭಾಪತಿ ವಿರುದ್ಧದ ನಿರ್ಣಯದಲ್ಲಿ  ಪಕ್ಷದ ನಾಯಕತ್ವ ತಲೆ ತಗ್ಗಿಸುವ ಸನ್ನಿವೇಶ ನಿರ್ಮಾಣವಾಯಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಚಿವರು, ಶಾಸಕರ ತರಾಟೆ: ಅವಿಶ್ವಾಸ ನಿರ್ಣಯದಲ್ಲಿ ಸೋಲುಂಟಾಗುತ್ತಿದ್ದಂತೆ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಎದುರಾದ ಸಚಿವ ತನ್ವೀರ್ ಸೇಠ್‌, ‘ಜನರಿಂದ ಆಯ್ಕೆಯಾದವರನ್ನು ನಿಮ್ಮ ಪಕ್ಕ ಇಟ್ಟುಕೊಂಡಿಲ್ಲ. ಶಾಸಕರಿಂದ ಆಯ್ಕೆಯಾದವರನ್ನು ಎಲ್ಲ ಕೆಲಸಕ್ಕೂ ಮುಂದೆ ಬಿಡುತ್ತೀರಿ. ಅದರಿಂದಲೇ ಮುಜುಗರ ಅನುಭವಿಸಬೇಕಾಗುತ್ತಿದೆ’ ಎಂದು ಟೀಕಿಸಿದರು ಎನ್ನಲಾಗಿದೆ.‘ಈ ಪ್ರಕರಣದಿಂದ ಪಕ್ಷಕ್ಕೆ ಹಿನ್ನಡೆಯಾಯಿತು. ಇನ್ನು ಮುಂದೆ ಉಗ್ರಪ್ಪ ಅವರನ್ನು ಮುಂದಿಟ್ಟುಕೊಂಡೇ ಎಲ್ಲ ಕೆಲಸ ಮಾಡಿಸಿಕೊಳ್ಳಿ. ಆಗ ಗೊತ್ತಾಗುತ್ತದೆ’ ಎಂದು ಸಚಿವ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯಗೆ ಸಿಟ್ಟಿನಿಂದ ಹೇಳಿದರು.ಸೋಲಿನಿಂದ ಸಿಟ್ಟಾಗಿದ್ದ ಜಿ. ಪರಮೇಶ್ವರ್ ಅವರು, ‘ನೀವು ಪಕ್ಷಕ್ಕೆ ಬಂದಾಗ ಕೆ.ಎನ್‌. ರಾಜಣ್ಣನನ್ನು ಎದುರು ಹಾಕಿಕೊಂಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಿದೆ. ಆಮೇಲೆ ನೀವು ನನ್ನನ್ನೇ ಸೋಲಿಸಿದಿರಿ (2013ರ ಚುನಾವಣೆಯಲ್ಲಿ). ಈಗ ನೋಡಿದರೆ ಪಕ್ಷವನ್ನೇ ಮುಗಿಸಲು ಹೊರಟಿದ್ದೀರಿ’ ಎಂದು ಉಗ್ರಪ್ಪ ಅವರ ಮೇಲೆ ಹರಿಹಾಯ್ದಿದ್ದಾರೆ.ಪರಿಷತ್ತಿನ ಸದಸ್ಯ ಹಾಗೂ ಪಕ್ಷದ ಕಾರ್ಯಾಧ್ಯಕ್ಷ ಎಸ್‌.ಆರ್. ಪಾಟೀಲ, ‘ಈಗ  ಯಾವ ಆರ್ಟಿಕಲ್‌(ಸಂವಿಧಾನದ ವಿಧಿ) ಹೇಳುತ್ತೀರ್ರೀ’ ಎಂದು ಉಗ್ರಪ್ಪ ಅವರನ್ನು ವ್ಯಂಗ್ಯದಿಂದ ಪ್ರಶ್ನಿಸಿದರು.ಉಗ್ರಪ್ಪ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿ ದೂರು

ಉಗ್ರಪ್ಪ, ರೇವಣ್ಣ  ವಿರುದ್ಧ ಕ್ರಮ ಕೈಗೊಳ್ಳುವಂತೆ ಮಧುಗಿರಿ ಶಾಸಕ ಕೆ.ಎನ್‌. ರಾಜಣ್ಣ  ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ಮೌಖಿಕವಾಗಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ದೂರವಾಣಿಯಲ್ಲಿ ಮಾತನಾಡಿದ ಅವರು, ಕಳೆದ 14 ದಿನಗಳಿಂದ ನಡೆದ ವಿದ್ಯಮಾನಗಳನ್ನು ವಿವರಿಸಿದ್ದಾರೆ.

ಈ ಪ್ರಕರಣದ ಕುರಿತು ಪರಮೇಶ್ವರ್‌ ಅವರೂ ದೂರವಾಣಿಯಲ್ಲಿ ವೇಣುಗೋಪಾಲ್‌ ಅವರಿಗೆ ವಿವರಣೆ ನೀಡಿದ್ದಾರೆ. ಇದೇ 27ರಂದು ಬೆಂಗಳೂರಿಗೆ ಬರಲಿರುವ ವೇಣುಗೋಪಾಲ್‌ಗೆ ಲಿಖಿತ ದೂರು ನೀಡಲು ತುಮಕೂರು ಜಿಲ್ಲೆ, ಬೆಂಗಳೂರು ನಗರದ ಶಾಸಕರು ನಿರ್ಧರಿಸಿದ್ದಾರೆ.ಶಿಸ್ತುಕ್ರಮಕ್ಕೆ ಆಗ್ರಹಿಸಿ ಪರಮೇಶ್ವರ್‌ಗೆ ಲಿಖಿತ ದೂರು ನೀಡಲು ಕೆಲವು ಶಾಸಕರು ಶುಕ್ರವಾರವೇ ತೀರ್ಮಾನಿಸಿದ್ದರು. ಮುಖ್ಯಮಂತ್ರಿ ಸೂಚನೆ ಮೇರೆಗೆ  ಹಿಂದೆ ಸರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry