ಬಾಟಲಿ ನೀರೇ ಪೌಷ್ಟಿಕ ಆಹಾರ

7
ಬದುಕಿನ ಯಾತನೆ ತೆರೆದಿಟ್ಟ ಮನೆಗೆಲಸದ ಮಹಿಳೆಯರು

ಬಾಟಲಿ ನೀರೇ ಪೌಷ್ಟಿಕ ಆಹಾರ

Published:
Updated:
ಬಾಟಲಿ ನೀರೇ ಪೌಷ್ಟಿಕ ಆಹಾರ

ಬೆಂಗಳೂರು: ‘ಮನೆ ಮಾಲೀಕರ ಬೈಗುಳಗಳೇ ನಿತ್ಯದ ಸುಪ್ರಭಾತ. ಬಾಟಲಿ ನೀರೇ ದಿನದ ಪೌಷ್ಟಿಕ ಆಹಾರ. 25 ವರ್ಷಗಳ ಕೆಲಸದಲ್ಲಿ ಅನುಭವಿಸಿದ ಯಾತನೆಗೆ ಲೆಕ್ಕವೇ ಇಲ್ಲ’.

ನಗರದ ಜೈನ್‌ ಕಾಲೇಜಿನಲ್ಲಿ ಸ್ತ್ರೀ ಜಾಗೃತಿ ಸಮಿತಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಅಂತರರಾಷ್ಟ್ರೀಯ ಮನೆಗೆಲಸಗಾರರ  ದಿನಾಚರಣೆ’ ಕಾರ್ಯಕ್ರಮದಲ್ಲಿ ಮನೆಗೆಲಸದ ಮಹಿಳೆಯರು ತಮ್ಮ ಬದುಕಿನ ನೋವು ತೋಡಿಕೊಂಡರು.

ಆರಂಭದಲ್ಲಿ  ವೇದಿಕೆ ಏರಿದ ವೆಂಕಟಾಪುರದ ದೀಪಾ ಅವರು ಮಾತನಾಡಿ, ‘ಬಾಲ್ಯದಿಂದಲೂ ತಂದೆ– ತಾಯಿ ಪ್ರೀತಿ ಸಿಗಲಿಲ್ಲ. ಆರು ವರ್ಷದವಳಿದ್ದಾಗಲೇ ಮನೆಗೆಲಸಕ್ಕೆ ಸೇರಿದೆ. ಅಂದಿನಿಂದ ಅನುಭವಿಸುತ್ತಿರುವ ನೋವಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ’ ಎಂದು ಕಣ್ಣೀರಿಟ್ಟರು.

ಹೆಸರು ಹೇಳಿದರೆ ಜೀವಕ್ಕೆ ಆಪತ್ತು ಇದೆ ಎನ್ನುತ್ತ ಮಾತು ಆರಂಭಿಸಿದ ಇನ್ನೊಬ್ಬ ಮಹಿಳೆ, ‘ಕೇರಳದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಮನೆ ಮಾಲೀಕನೇ ನನ್ನ ಮಗಳ ಮೇಲೆ ಲೈಂಗಿಕ  ದೌರ್ಜನ್ಯ ಎಸಗಿದ. ಅದನ್ನು ಪ್ರಶ್ನಿಸಿದ್ದಕ್ಕೆ ನಮ್ಮಿಬ್ಬರನ್ನು ಗೃಹ ಬಂಧನದಲ್ಲಿಟ್ಟು ನಿರಂತರ ಕಿರುಕುಳ ನೀಡಿದ. ಬಳಿಕ ಸಂಘಟನೆಗಳ ಸಹಾಯ ಪಡೆದು ನ್ಯಾಯ ಕೇಳಿದ್ದಕ್ಕೆ  ಹಲ್ಲೆ ನಡೆಸಿದ. ಆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಇನ್ನೂ ನಡೆಯುತ್ತಿದೆ’ ಎಂದು ಅಳಲು ತೋಡಿಕೊಂಡರು.

‘ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟ’ದ ಸದಸ್ಯೆ ಪಾರಿಜಾತ ಮಾತನಾಡಿ, ‘ಅನಕ್ಷರಸ್ಥ ಮನೆಗೆಲಸದ ಮಹಿಳೆಯರ ಮೇಲೆ ಹಲವು ಬಗೆಯ ಶೋಷಣೆಗಳು ನಡೆಯುತ್ತಿವೆ. ಕಡಿಮೆ ಸಂಬಳ ನೀಡಿ ಹೆಚ್ಚು ದುಡಿಸಿಕೊಳ್ಳಲಾಗುತ್ತಿದೆ. ವಲಸೆ ಮನೆಗೆಲಸಗಾರರನ್ನು ಏಜೆನ್ಸಿಗಳ ಮೂಲಕ ಮಾರಾಟ ಮಾಡುವ ಜಾಲವೂ ಇದೆ. ಅದಕ್ಕೆ ಏಪ್ರಿಲ್ 2ರಂದು ವೈಟ್‌ಫೀಲ್ಡ್‌ ಬಳಿ ಮಹಡಿಯಿಂದ ಬಿದ್ದು ಮೃತಪಟ್ಟ ಅಸ್ಸಾಂನ ಬಾಲಕಿಯ ಕಥೆಯೇ ಸಾಕ್ಷಿ’ ಎಂದು ಹೇಳಿದರು.

ಒಕ್ಕೂಟದ ಕಾರ್ಯದರ್ಶಿ ರಾಜೇಶ್ವರಿ ಮಾತನಾಡಿ, ‘ಸರ್ಕಾರವು ನಮ್ಮನ್ನು ಕಾರ್ಮಿಕರೆಂದು ಪರಿಗಣಿಸುತ್ತಿಲ್ಲ. ಗುಲಾಮರಂತೆ ನಡೆಸಿಕೊಳ್ಳುತ್ತಿದೆ.  ಗುರುತಿನ ಪತ್ರವಿರದ ಕಾರಣ ರಾತ್ರಿ ಹೊತ್ತು ಕೆಲಸ ಮುಗಿಸಿ ಮನೆಗೆ ಹೋಗುವಾಗ ಪೊಲೀಸರು ನಮ್ಮನ್ನು ಅನುಮಾನದಿಂದ ನೋಡುತ್ತಿದ್ದಾರೆ. ಇದರಿಂದ ಮುಕ್ತಿ ಬೇಕಿದೆ’ ಎಂದು ಆಗ್ರಹಿಸಿದರು.

ಸ್ತ್ರೀ ಜಾಗೃತಿ ಸಮಿತಿಯ ಜಂಟಿ ಕಾರ್ಯದರ್ಶಿ ಗೀತಾ ಮಾತನಾಡಿ, ‘ ಮನೆಗೆಲಸಗಾರರ  ಜೀವನಕ್ಕೆ ಸರ್ಕಾರವು ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry