ಬ್ಯಾಂಕ್ ಖಾತೆಗೂ ಆಧಾರ್

7
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ತಿದ್ದುಪಡಿ ಮಾಡಿದ ಕೇಂದ್ರ

ಬ್ಯಾಂಕ್ ಖಾತೆಗೂ ಆಧಾರ್

Published:
Updated:
ಬ್ಯಾಂಕ್ ಖಾತೆಗೂ ಆಧಾರ್

ನವದೆಹಲಿ: ಹೊಸದಾಗಿ ಬ್ಯಾಂಕ್ ಖಾತೆ ತೆರೆಯಲು ಮತ್ತು ₹ 50 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವಾಗ ಆಧಾರ್ ಸಂಖ್ಯೆ ನಮೂದಿಸುವುದು ಇನ್ನು ಮುಂದೆ ಕಡ್ಡಾಯ.

ಇದಲ್ಲದೇ ಈಗಾಗಲೇ ಬ್ಯಾಂಕ್ ಖಾತೆ ಹೊಂದಿದವರು 2017ರ ಡಿಸೆಂಬರ್ 31ರ ಒಳಗಾಗಿ ಬ್ಯಾಂಕಿಗೆ ಆಧಾರ್ ಸಂಖ್ಯೆ ಸಲ್ಲಿಸಬೇಕು.ಇಲ್ಲದಿದ್ದರೆ ಅಂತಹ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ತಿದ್ದುಪಡಿ ಮಾಡಿರುವ ಕೇಂದ್ರ  ರೆವಿನ್ಯೂ ಸಚಿವಾಲಯವು ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ.ವ್ಯಕ್ತಿಗಳು, ಕಂಪೆನಿ ಮತ್ತು ಪಾಲುದಾರಿಕೆ ಸಂಸ್ಥೆಗಳು ಇನ್ನು ಮುಂದೆ ₹ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣಕಾಸು ವ್ಯವಹಾರ ನಡೆಸುವಾಗ ಪ್ಯಾನ್ ಸಂಖ್ಯೆಯ ಜತೆಗೆ ಆಧಾರ್ ಸಂಖ್ಯೆಯನ್ನೂ ಕಡ್ಡಾಯವಾಗಿ ನಮೂದಿಸಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.ಸಣ್ಣ ಖಾತೆದಾರರಿಗೂ ಬಿಗಿ ನಿಯಮ: ‘ನಿಮ್ಮ ಗ್ರಾಹಕರನ್ನು ಅರಿಯಿರಿ’ (ಕೆವೈಸಿ) ದಾಖಲೆ ಇಲ್ಲದೆ ತೆರೆಯಲಾದ ಸಣ್ಣ ಖಾತೆದಾರರ ಖಾತೆಯಲ್ಲಿ ಇನ್ನು ಮುಂದೆ ` 50 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಇರಬಾರದು ಎಂದು ಹೊಸ ನಿಯಮ ಹೇಳುತ್ತದೆ.

ಇಂತಹ ಸಣ್ಣ ಖಾತೆಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಶಾಖೆಗಳಲ್ಲಿ ಮತ್ತು  ವಿದೇಶದಿಂದ ಹಣ ಜಮಾವಣೆ ಆಗುವುದನ್ನು ಪರಿಶೀಲಿಸುವ ವ್ಯವಸ್ಥೆ ಹೊಂದಿರುವ ಶಾಖೆಗಳಲ್ಲಿ ತೆರೆಯ ಬಹುದಾಗಿದೆ.ನಿಗದಿಪಡಿಸಿದ ಗರಿಷ್ಠ ₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಈ ಖಾತೆಗಳಲ್ಲಿ ಯಾವತ್ತೂ ಇರಬಾರದು ಎಂದು ಅಧಿಸೂಚನೆ ಹೇಳಿದೆ.ಇಂತಹ ಖಾತೆಗಳು ಆರಂಭದಲ್ಲಿ ಒಂದು ವರ್ಷ ನಿರ್ವಹಣೆಯಲ್ಲಿ  ಇರಬೇಕು. ನಂತರ ಮತ್ತೆ ಒಂದು ವರ್ಷ ಅವಧಿಗೆ ಚಾಲ್ತಿಯಲ್ಲಿರಬೇಕಾದರೆ ಕೆವೈಸಿ ದಾಖಲೆ ಸಲ್ಲಿಸಬೇಕಾಗುತ್ತದೆ.ಈ ಸಣ್ಣ ಖಾತೆಗಳ ಮೇಲೆ ಸದಾ ನಿಗಾ ಇಡಬೇಕು. ಭಯೋತ್ಪಾದಕ ಚಟುವಟಿಕೆ ಸೇರಿದಂತೆ ಕಾನೂನು ಬಾಹಿರ ಚಟುವ ಟಿಕೆಗಳಿಗೆ ಅಕ್ರಮ ಹಣ ವರ್ಗಾವಣೆ ಆಗಿದೆ ಎಂಬ ಶಂಕೆ ಮೂಡಿದರೆ ಕೂಡಲೇ  ಖಾತೆದಾರರನ್ನು ಕರೆಯಿಸಿ ಹಣದ ಮೂಲದ ದಾಖಲೆ ಒದಗಿಸುವಂತೆ ಸೂಚಿಸಬೇಕು ಎಂದು ತಿದ್ದುಪಡಿ ನಿಯಮ ಹೇಳುತ್ತದೆ.ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ಗುರುತಿನ ವಿವರಗಳನ್ನು ಸಂಗ್ರಹಿಸಿ ದಾಖಲಿಸಿ ಕೊಳ್ಳಬೇಕು. ಅಗತ್ಯಬಿದ್ದಾಗ ಈ ಮಾಹಿತಿಯನ್ನು ಹಣಕಾಸು ಇಲಾಖೆಯ ಗುಪ್ತಚರ ವಿಭಾಗಕ್ಕೆ ಒದಗಿಸುವುದು ಕಡ್ಡಾಯ ಎಂದು ತಿದ್ದುಪಡಿ ನಿಯಮ ಹೇಳುತ್ತದೆ.ಆರು ತಿಂಗಳ ಕಾಲಾವಕಾಶ

ಜೂನ್‌ 1ರ ನಂತರ  ಬ್ಯಾಂಕ್‌ ಖಾತೆ ತೆರೆಯುವ ವೇಳೆ ಆಧಾರ್‌ ಸಂಖ್ಯೆ ಇಲ್ಲದ  ಗ್ರಾಹಕರು,  ಆಧಾರ್‌ ಪಡೆಯಲು ನೋಂದಣಿ ಮಾಡಿಸಿದ ದಾಖಲೆ ನೀಡಿದರೆ ಸಾಕು. ಆ ಗ್ರಾಹಕರು ಖಾತೆ ತೆರೆದ ಆರು ತಿಂಗಳ ಒಳಗಾಗಿ ಬ್ಯಾಂಕ್‌ಗೆ ಆಧಾರ್‌ ಸಂಖ್ಯೆ ಸಲ್ಲಿಸುವುದು ಕಡ್ಡಾಯ. ಒಂದು ವೇಳೆ ಗ್ರಾಹಕನ ಬಳಿ ಪ್ಯಾನ್‌ ಮತ್ತು ಆಧಾರ್‌ ಇಲ್ಲದಿದ್ದರೂ ಖಾತೆ ತೆರೆಯಲು ಬ್ಯಾಂಕ್‌ಗಳು ಅವಕಾಶ ನೀಡಬೇಕು.ಆದರೆ, ಆ ಗ್ರಾಹಕ  ತಾನು ಆಧಾರ್‌ ಮತ್ತು ಪ್ಯಾನ್‌ ಪಡೆಯಲು ಅರ್ಹತೆ ಹೊಂದಿರುವುದನ್ನು ಮನವರಿಕೆ ಮಾಡಬೇಕು. ಇಲ್ಲವೇ ಅವುಗಳಿಗಾಗಿ ನೋಂದಣಿ ಮಾಡಿಕೊಂಡಿರುವ ದಾಖಲೆ ನೀಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry