ಸಿಗದ ತುರ್ತು ಚಿಕಿತ್ಸೆ: ವೈದ್ಯರಿಗೆ ಹಿಡಿಶಾಪ

7

ಸಿಗದ ತುರ್ತು ಚಿಕಿತ್ಸೆ: ವೈದ್ಯರಿಗೆ ಹಿಡಿಶಾಪ

Published:
Updated:
ಸಿಗದ ತುರ್ತು ಚಿಕಿತ್ಸೆ: ವೈದ್ಯರಿಗೆ ಹಿಡಿಶಾಪ

ಬಾಗಲಕೋಟೆ: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದ ಕಾರಣ, ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಶುಕ್ರವಾರ ತುರ್ತು ಚಿಕಿತ್ಸೆಯೂ ಲಭ್ಯವಾಗಲಿಲ್ಲ. ಇದರ ಅರಿವಿಲ್ಲದೇ ದೂರದ ಊರುಗಳಿಂದ ಬಂದಿದ್ದ ರೋಗಿಗಳು ಅಕ್ಷರಶಃ ಪಡಿಪಾಟಲು ಪಟ್ಟರು. ಬಾಗಲಕೋಟೆ ನಗರದ 57 ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯ 197 ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದವು. ಅಲ್ಲದೇ ಆಸ್ಪತ್ರೆಗಳ ಮುಖ್ಯದ್ವಾರವನ್ನು ಬಂದ್ ಮಾಡಲಾಗಿತ್ತು.

ಡಿಎಚ್‌ಒ ನೆರವು: ಉಂಗುರ ನುಂಗಿ ಚಿಕಿತ್ಸೆ ದೊರೆಯದೇ ಆರೋಗ್ಯ ಬಿಗಡಾಯಿಸಿದ್ದ ಮಗುವಿಗೆ, ಜಿಲ್ಲಾ ಆರೋಗ್ಯಾಧಿಕಾರಿಯೇ ಮುಂದೆ ನಿಂತು ಚಿಕಿತ್ಸೆ ಕೊಡಿಸಬೇಕಾಯಿತು. ಹುನಗುಂದ ತಾಲ್ಲೂಕು ಗೊರಬಾಳದ ವಿಜಯ್ ಘಂಟಿ ಹಾಗೂ ಗಂಗಮ್ಮ ದಂಪತಿಯ ಮೂರು ವರ್ಷದ ಮಗು ಸಮಕ್ಷ ಮೂರು ದಿನಗಳ ಹಿಂದೆ ಆಟವಾಡುವಾಗ ಉಂಗುರ ನುಂಗಿದೆ. ಇಳಕಲ್‌ನಲ್ಲಿ ಚಿಕಿತ್ಸೆ ಕೊಡಿಸಿದ್ದ ಪೋಷಕರು ವೈದ್ಯರ ಸಲಹೆಯಂತೆ, ಬಾಳೆಹಣ್ಣು ತಿನ್ನಿಸಿ ಅದು ಗುದದ್ವಾರದಿಂದ ಹೊರಬರುವುದಕ್ಕೆ ಕಾದಿದ್ದಾರೆ. ಆದರೆ ಮಗು ಬಹಿರ್ದೆಸೆಗೆ ಹೋಗುವುದನ್ನೇ ನಿಲ್ಲಿಸಿದಾಗ ಗಾಬರಿಗೊಂಡ ಪೋಷಕರು ಚಿಕಿತ್ಸೆಗೆ ಬಾಗಲಕೋಟೆಗೆ ಕರೆತಂದಿದ್ದಾರೆ.

ಸರ್ಕಾರಿ ವೈದ್ಯರೂ ಇರಲಿಲ್ಲ: ನಗರದ ಮೂರು ಖಾಸಗಿ ಆಸ್ಪತ್ರೆಗಳಿಗೆ ಹೋದರೂ ಅಲ್ಲಿ ಚಿಕಿತ್ಸೆ ನಿರಾಕರಿಸಲಾಗಿದೆ. ಕೊನೆಗೆ ಇಲ್ಲಿನ ಸರ್ಕಾರಿ 50 ಹಾಸಿಗೆ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಲ್ಲಿಯೂ ವೈದ್ಯರು ಸಿಗದೇ ಇದ್ದಾಗ ಗಾಬರಿಗೊಂಡ ಅವರು, ಮುಷ್ಕರದ ಬಗ್ಗೆ ವರದಿ ಮಾಡಲು ಆಸ್ಪತ್ರೆ ಬಳಿಗೆ ತೆರಳಿದ್ದ ಮಾಧ್ಯಮಪ್ರತಿನಿಧಿಗಳ ಎದುರು ಅಳಲು ತೋಡಿಕೊಂಡಿದ್ದಾರೆ.

ಆಗ ಮಾಧ್ಯಮವರ ಕೋರಿಕೆಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆನಂದ ದೇಸಾಯಿ, ಫೋನಿನಲ್ಲಿಯೇ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮಗುವಿಗೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕಿದ್ದು, ನವನಗರದ ಎಸ್‌.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿಗೆ ಕಳುಹಿಸಿಕೊಡುವಂತೆ ತಿಳಿಸಿದ್ದಾರೆ.  ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪುರ ಅವರೂ ಡಿಎಚ್‌ಒ ಮನವಿಗೆ ಸ್ಪಂದಿಸಿದಾಗ, 5 ನಿಮಿಷದಲ್ಲಿಯೇ 108 ಆ್ಯಂಬುಲೆನ್ಸ್ ಸ್ಥಳಕ್ಕೆ ಬಂದಿತು.

ಕೊಳವೆ ಬದಲಾಯಿಸಲು ಪರದಾಟ:  ಮೂತ್ರನಾಳಕ್ಕೆ ಹಾಕಿದ್ದ ಕೊಳವೆ ಬದಲಾಯಿಸಿಕೊಳ್ಳಲು ಬಂದಿದ್ದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ಮಳ್ಳಿಯ ಬಸನಗೌಡ ಮಾಲಿಪಾಟೀಲ ಕೂಡ ಚಿಕಿತ್ಸೆ ಸಿಗದೇ ಪರದಾಡಿದರು. ಎದ್ದು ನಡೆದಾಡುವ ಸ್ಥಿತಿಯಲ್ಲೂ ಇಲ್ಲದ ಅವರು ಕಾರಿನಲ್ಲಿಯೇ ಮಲಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿದರು.

‘ತಿಂಗಳಿಗೊಮ್ಮೆ ಇಲ್ಲಿನ ಕೆರೂಡಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತೇನೆ. ಮುಷ್ಕರದ  ವಿಚಾರ ಗೊತ್ತಿರಲಿಲ್ಲ. ಬಾಡಿಗೆ ಕಾರಿನಲ್ಲಿ ಬಂದಿದ್ದೇವೆ. ಚಿಕಿತ್ಸೆ ಕೊಡಿ ಎಂಬ ಮನವಿಗೆ ಯಾರೂ ಸ್ಪಂದಿಸಲಿಲ್ಲ. ಗೇಟ್ ಕೂಡ ತೆರೆಯಲಿಲ್ಲ. ಪರಿಚಯದ ಸಿಬ್ಬಂದಿಯನ್ನು ಕೇಳಿದರೆ ಕಾಂಪೌಂಡ್ ಹಾರಿ ಬನ್ನಿ ಎಂದರು. ಎದ್ದು ಓಡಾಡಲು ಆಗುವುದಿಲ್ಲ. ಇನ್ನು ಕಾಂಪೌಂಡ್ ಹಾರುವುದು ಎಲ್ಲಿಂದ’ ಎಂದು ಬಸನಗೌಡ ಪ್ರಶ್ನಿಸಿದರು.

ಕಿವಿ ನೋವಿನ ಚಿಕಿತ್ಸೆಗೆ ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕು ಇಟಗಿಯಿಂದ ಮಗನನ್ನು ಕರೆತಂದಿದ್ದ ಶಿವಮ್ಮ, ಖಾಸಗಿ ಆಸ್ಪತ್ರೆ ಗೇಟ್‌ ಎದುರು ನಿಂತು ಒಳಗೆ ಬಿಡುವಂತೆ ಭದ್ರತಾ ಸಿಬ್ಬಂದಿಗೆ ದುಂಬಾಲು ಬಿದ್ದಿದ್ದರು. ಒಳರೋಗಿಯಾಗಿ ದಾಖಲಾಗಿದ್ದ ಅಮ್ಮನಿಗೆ ಊಟ ತರಲು ಹೊರಗೆ ತೆರಳಲು ಅವಕಾಶ ನೀಡದ ಸಿಬ್ಬಂದಿಯೊಂದಿಗೆ ಹಾವೇರಿ ಜಿಲ್ಲೆ ಹಿರೇಕೆರೂರಿನ ಸತೀಶ ತಳವಾರ ವಾಗ್ವಾದಕ್ಕೆ ಇಳಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry