ಅನುದಾನಕ್ಕಾಗಿ ನಿಯೋಗ ಹೋಗಲು ನಿರ್ಧಾರ

7

ಅನುದಾನಕ್ಕಾಗಿ ನಿಯೋಗ ಹೋಗಲು ನಿರ್ಧಾರ

Published:
Updated:
ಅನುದಾನಕ್ಕಾಗಿ ನಿಯೋಗ ಹೋಗಲು ನಿರ್ಧಾರ

ಕೋಲಾರ: ‘ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿದರೆ ಮಾತ್ರ ಹೆಚ್ಚಿನ ಅನುದಾನ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸಚಿವರ ಬಳಿ ನಿಯೋಗ ಹೋಗಲು ನಿರ್ಣಯ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಪಕ್ಷಭೇದ ಮರೆತು ಅಧ್ಯಕ್ಷೆ ಗೀತಮ್ಮ ಅವರನ್ನು ಒತ್ತಾಯಿಸಿದರು.

ನಗರದಲ್ಲಿ ಶನಿವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುದಾನದ ವಿಷಯವಾಗಿ ಚರ್ಚೆ ನಡೆಸಿದ ಸದಸ್ಯರು, ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸರ್ಕಾರ 30 ಮಂದಿ ಸದಸ್ಯರಿಗೆ ₹ 4 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಈ ಹಣ ಅಭಿವೃದ್ಧಿ ಕೆಲಸಗಳಿಗೆ ಸಾಲುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಗೆ ಈಗಾಗಲೇ ಬಂದಿರುವ ಅನುದಾನವನ್ನು ಬಿಟ್ಟು ಬಾಕಿ ಅನುದಾನದ ಬಗ್ಗೆ ಯೋಚಿಸಿ ಸಚಿವರ ಬಳಿ ನಿಯೋಗ ಹೋಗಲು ಸಭೆಯಲ್ಲಿ ನಿರ್ಣಯ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೀತಮ್ಮ, ‘ಅನುದಾನದ ಬಗ್ಗೆ ನಾನು ಈಗಾಗಲೇ ಸಚಿವರ ಜತೆ ಅನೇಕ ಬಾರಿ ಚರ್ಚೆ ನಡೆಸಿದ್ದೇನೆ’ ಎಂದರು.

ಈ ವೇಳೆ ಪದೇ ಪದೇ ಮಾತಿಗೆ ಮುಂದಾದ ಸದಸ್ಯ ಗೋವಿಂದಸ್ವಾಮಿ ವಿರುದ್ಧ ಮತ್ತೊಬ್ಬ ಸದಸ್ಯ ಬಿ.ವಿ. ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಪರಸ್ಪರರ ಮಧ್ಯೆ ವಾಗ್ವಾದ ನಡೆಯಿತು. ಈ ಹಂತದಲ್ಲಿ ಮಹೇಶ್‌, ‘ಪಕ್ಷದ ಆಂತರಿಕ ವಿಚಾರ ಗಳನ್ನು ಸಭೆಯಲ್ಲಿ ಮಾತನಾಡುವ ಅಗತ್ಯವಿಲ್ಲ’ ಎಂದು ಕಿಡಿಕಾರಿದರು.

ಇದರಿಂದ ಕುಪಿತರಾದ ಗೋವಿಂದಸ್ವಾಮಿ, ‘ನಾನು ಯಾರ ವಿರುದ್ಧವಾಗಿ ಅಥವಾ ಝಂಡಾ ಹಿಡಿದು ಕಾಂಗ್ರೆಸ್ ಪರವಾಗಿ ಮಾತನಾಡುತ್ತಿಲ್ಲ. ಅಧ್ಯಕ್ಷರ ಬಳಿ ಮಾತನಾಡುತ್ತಿದ್ದೇನೆ. ನೀವು ಯಾಕೆ ಅಡ್ಡಿಪಡಿಸುತ್ತೀರಿ’ ಎಂದು ತಿರುಗೇಟು ನೀಡಿದರು. ಬಳಿಕ ಇತರೆ ಸದಸ್ಯರು ಇಬ್ಬರನ್ನೂ ಸಮಾಧಾನ ಪಡಿಸಿದರು.

ಅವಕಾಶ ನೀಡುತ್ತಿಲ್ಲ: ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಸಿ. ನೀಲಕಂಠೇಗೌಡ ಮಾತನಾಡಿ, ‘ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ವರ್ಗಗಳನ್ನು ವಿಂಗಡಣೆ ಮಾಡಿರುವುದರಿಂದ ದಾಖಲಾತಿ ಪೂರ್ಣವಾಗದೆ ಸೀಟುಗಳು ಉಳಿದಿವೆ. ಕೆಲ ಜಾತಿಯ ಮಕ್ಕಳು ಇಲ್ಲದಿದ್ದರೂ ಬೇರೆಯವರಿಗೆ ಅವಕಾಶ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಯಣ್ಣ, ‘ಶಾಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ 75 ಹಾಗೂ ಇತರೆ ವರ್ಗಗಳಿಗೆ ಶೇ 25 ಮೀಸಲಾತಿ ಇದೆ. ಯಾವುದೇ ಕಾರಣಕ್ಕೂ ಸೀಟು ಖಾಲಿ ಬಿಡುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ’ ಎಂದರು. ಸಂಸದ ಕೆ.ಎಚ್‌. ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ ಪಾಲ್ಗೊಂಡಿದ್ದರು.

ಮುಚ್ಚಿದ ಕೃಷಿ ಯಂತ್ರಧಾರೆ

‘ಸುಗಟೂರು ಹೋಬಳಿ ವ್ಯಾಪ್ತಿಯ ತೊಟ್ಲಿ ಗ್ರಾಮದಲ್ಲಿ ಕಳೆದ ವರ್ಷ ಆರಂಭಿಸಿದ್ದ ಕೃಷಿ ಯಂತ್ರಧಾರೆ ಕೇಂದ್ರವನ್ನು ಮುಚ್ಚಲಾಗಿದೆ. ಬಿತ್ತನೆ ಕಾಲ ಆರಂಭವಾಗಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಕೇಂದ್ರದ ಬಾಗಿಲು ತೆರೆದಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ನಂಜುಂಡಪ್ಪ ಆರೋಪಿಸಿದರು.

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ 6 ಮತ್ತು ಜಾನ್‌ ಡಿಯರ್‌ ಕಂಪೆನಿಯ 12 ಕೇಂದ್ರಗಳು ಜಿಲ್ಲೆಯಲ್ಲಿ ಇವೆ. ತೊಟ್ಲಿ ಗ್ರಾಮದಲ್ಲಿ ಕೃಷಿ ಯಂತ್ರಧಾರೆ ಕೇಂದ್ರ ಮುಚ್ಚಿರುವ ಸಂಬಂಧ ಜಾನ್‌ ಡಿಯರ್‌ ಕಂಪೆನಿಗೆ ನೋಟಿಸ್‌ ನೀಡಲಾಗುತ್ತದೆ’ ಎಂದು ಸಿಇಒ ಕಾವೇರಿ ಸದಸ್ಯರಿಗೆ ಸ್ಪಷ್ಟನೆ ನೀಡಿದರು.

ವಿದ್ಯುತ್ ಸಂಪರ್ಕವಿಲ್ಲ

‘ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಮಾಲೂರು ತಾಲ್ಲೂಕಿನ ಹಲವೆಡೆ ಕೊಳವೆ ಬಾವಿ ಕೊರೆಸಿ ಒಂದೂವರೆ ವರ್ಷವಾಗಿದ್ದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ’ ಎಂದು ಸದಸ್ಯರು ದೂರಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷೆ ಗೀತಮ್ಮ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಬಿ. ಕಾವೇರಿ, ‘ಈ ಬಗ್ಗೆ ಪರಿಶೀಲನೆ ನಡೆಸಿ ಕೊಳವೆ ಬಾವಿಗಳಿಗೆ ಶೀಘ್ರ ವಿದ್ಯುತ್‌ ಸಂಪರ್ಕ ಕಲ್ಪಿಸಿ’ ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಶಿಷ್ಟಾಚಾರ ಉಲ್ಲಂಘನೆ: ಆರೋಪ

‘ಬಂಗಾರ ಪೇಟೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯದ ಉದ್ಘಾಟನೆಗೆ ಅಧಿಕಾರಿಗಳು ನನ್ನನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಹಾಸ್ಟೆಲ್‌ಗೆ ನನ್ನ ಮನೆಯ ಮುಂದಿನ ದಾರಿಯಲ್ಲೇ ಹೋಗಬೇಕು. ಸೌಜನ್ಯಕ್ಕೂ ನನ್ನನ್ನು ಸಮಾರಂಭಕ್ಕೆ ಕರೆದಿಲ್ಲ’ ಎಂದು ಸದಸ್ಯ ಮಹೇಶ್‌ ದಾಖಲೆಪತ್ರಗಳ ಸಮೇತ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ತಮ್ಮಿಂದ ತಪ್ಪಾಗಿದೆ ಎಂದು ಇಲಾಖೆ ಜಂಟಿ ನಿರ್ದೇಶಕರು ಈ ಹಿಂದಿನ ಸಭೆಯಲ್ಲಿ ಒಪ್ಪಿಕೊಂಡಿದ್ದರು. ಆದರೂ ತಪ್ಪು ತಿದ್ದಿಕೊಳ್ಳುತ್ತಿಲ್ಲ. ಅವರ ವಿರುದ್ಧ ಹಕ್ಕುಚ್ಯುತಿ ಏಕೆ ಮಂಡಿಸ ಬಾರದು. ಜಿಲ್ಲಾ ಮಟ್ಟದ ಅಧಿಕಾರಿ ಸರ್ಕಾರದ ನಿಯಮ ಪಾಲಿಸದೆ ಶಾಸಕರು ಹೇಳಿದಂತೆ ಕೇಳುತ್ತಿದ್ದಾರೆ. ಅಧಿಕಾರ ನನಗೂ ಇದೆ. ಶಾಸಕರು ನನ್ನನ್ನು ಮಾತನಾಡಿಸುವುದೆ ಇಲ್ಲ. ಅಧಿಕಾರಿಗಳು ರಾಜಕೀಯ ಪಕ್ಷ ಅಥವಾ ವ್ಯಕ್ತಿ ಪರ ಇರುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಹಾಸ್ಟೆಲ್‌ನ ಜಾಗವು ಪುರಸಭೆಗೆ ಸೇರಿರುವುದಾಗಿ ಇಲಾಖೆಯ ಸಹಾಯಕ ನಿರ್ದೇಶಕರು ಸೂಕ್ತ ದಾಖಲೆ ಪತ್ರಗಳಿಲ್ಲದೆ ವರದಿ ಕೊಟ್ಟಿದ್ದಾರೆ. ಆ ಜಾಗವು ದೇಶಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ನನ್ನ ಬಳಿ ಮಂಜೂರಾತಿ ದಾಖಲೆಪತ್ರಗಳಿವೆ. ಸಹಾಯಕ ನಿರ್ದೇಶಕರ ಬದಲಾವಣೆಗೆ ಸರ್ಕಾರದಿಂದಲೇ ಪತ್ರ ಬಂದಿದೆ’ ಎಂದರು.

ಆಗ ಮಧ್ಯ ಪ್ರವೇಶಿಸಿದ ಸಂಸದ ಕೆ.ಎಚ್‌. ಮುನಿಯಪ್ಪ, ‘ಸರ್ಕಾರಿ ಕಾರ್ಯಕ್ರಮಗಳಿಗೆ ಶಿಷ್ಟಾಚಾರದಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry