ಸೌಟು ಹಿಡಿದು ಒಂದೂಮುಕ್ಕಾಲು ಗಂಟೆ ಕಾದರು!

7

ಸೌಟು ಹಿಡಿದು ಒಂದೂಮುಕ್ಕಾಲು ಗಂಟೆ ಕಾದರು!

Published:
Updated:
ಸೌಟು ಹಿಡಿದು ಒಂದೂಮುಕ್ಕಾಲು ಗಂಟೆ ಕಾದರು!

ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರಿಗೆ ಐದು ನಿಮಿಷ ಉಪಾಹಾರ ಬಡಿಸಲು ದಲಿತರ ಮನೆಯ ಮಹಿಳೆಯರು ಒಂದೂಮುಕ್ಕಾಲು ಗಂಟೆ ಸೌಟು ಹಿಡಿದು ಕಾದರು.

ಬಿಜೆಪಿ ಭಾನುವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಅಭಿಯಾನದ ಭಾಗವಾಗಿ ಆಯನೂರು ಸಮೀಪದ ಸಿರಿಗೆರೆಯ ದಲಿತರ ಮನೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಉಪಾಹಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮದ ಛಲವಾದಿ ಸಮುದಾಯದ ಏಳು ಮನೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆ ಮನೆಗಳ ಮಹಿಳೆಯರು ಮುಂಜಾನೆ ಬೇಗನೇ ಎದ್ದು ಬಗೆ ಬಗೆಯ ಉಪಾಹಾರ ತಯಾರಿಸಿದ್ದರು. ಬೆಳಿಗ್ಗೆ 9ಕ್ಕೆ ಸಮಯ ನಿಗದಿಯಾಗಿದ್ದರೂ, ಮುಖಂಡರು ಆಗಮಿಸಿದ್ದು 10.45ಕ್ಕೆ.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಅವರ ಚಿಕ್ಕಪ್ಪ ಲಕ್ಕೊಳ್ಳಿ ಗೋಪಾಲಪ್ಪ ಅವರ ಮನೆಯಲ್ಲಿ ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ಆಯನೂರು ಮಂಜುನಾಥ್ ಒಟ್ಟಿಗೆ ಕುಳಿತು ಇಡ್ಲಿ, ವಡೆ, ಪೊಂಗಲ್, ಉಪ್ಪಿಟ್ಟು ಸವಿದರು. ಇತರೆ ಮುಖಂಡರು ಉಳಿದ ಮನೆಗಳಲ್ಲಿ ಉಪಾಹಾರ ಸೇವಿಸಿದರು.

ಪಕ್ಷದ ಆಂತರಿಕ ಕಿತ್ತಾಟ ನಿವಾರಣೆಯಾದ ಬಳಿಕ ಇದೇ ಮೊದಲ ಬಾರಿ ಯಡಿಯೂರಪ್ಪ–ಈಶ್ವರಪ್ಪ ಇಡೀ ದಿನ ಒಟ್ಟಿಗೆ ಇದ್ದರು.

ಉಪಾಹಾರದ ನಂತರ ಕೊಮ್ಮನಾಳಿನ ಶಾನುಭೋಗರ ಮಂಜಪ್ಪ ಅವರ ಅಡಿಕೆ ತೋಟಕ್ಕೆ ಭೇಟಿ ನೀಡಿದ ತಂಡ ಒಣಗಿದ ಅಡಿಕೆ ಗಿಡಗಳನ್ನು ವೀಕ್ಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry