ಐತಿಹಾಸಿಕ ರಣಗಂಬದಲ್ಲಿ ಬಿರುಕು!

7

ಐತಿಹಾಸಿಕ ರಣಗಂಬದಲ್ಲಿ ಬಿರುಕು!

Published:
Updated:
ಐತಿಹಾಸಿಕ ರಣಗಂಬದಲ್ಲಿ ಬಿರುಕು!

ಶ್ರೀರಂಗಪಟ್ಟಣ: ತಾಲ್ಲೂಕಿನ ವಿದ್ಯಾ ನಗರ ಬಳಿ ಇರುವ ಐತಿಹಾಸಿಕ ರಣಗಂಬದಲ್ಲಿ ಬಿರುಕು ಕಾಣಿಸಿ ಕೊಂಡಿದೆ. ಏಕ ಶಿಲೆಯಲ್ಲಿ ಕಡೆದಿರುವ ಅಪರೂಪದ ಈ ಸ್ತಂಭದಲ್ಲಿ ಸುಮಾರು 15 ಅಡಿಗೂ ಹೆಚ್ಚು ಉದ್ದದಷ್ಟು ಬಿರುಕು ಕಾಣಿಸಿಕೊಂಡಿದೆ. ಬಿಸಿಲು, ಮಳೆ, ಗಾಳಿಗೆ ಮೈಯೊಡ್ಡಿ ನಿಂತಿರುವ ಈ ಸ್ಮಾರಕಕ್ಕೆ ರಕ್ಷಣೆ ಇಲ್ಲದ ಕಾರಣ ವರ್ಷದಿಂದ ವರ್ಷಕ್ಕೆ ಶಿಥಿಲಗೊಳ್ಳುತ್ತಿದೆ.

ಸ್ಮಾರಕದ ಪೀಠದಲ್ಲಿ ಹಾಕಿರುವ ಇಂಗ್ಲಿಷ್‌ ಭಾಷೆಯ ಫಲಕವನ್ನು ವಿರೂಪಗೊಳಿಸಲಾಗಿದೆ. ಹಾಗಾಗಿ ಈ ಸ್ತಂಭ ಸ್ಥಾಪನೆಯ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ. ‘ಪೂರ್ಣಯ್ಯ ದಿವಾನ್‌’ ಎಂಬುದನ್ನು ಬಿಟ್ಟರೆ ಉಳಿದೆಲ್ಲ ಸಾಲುಗಳು ಅಳಿಸಿ ಹೋಗಿವೆ.

ದಿವಾನ್‌ ಪೂರ್ಣಯ್ಯ ಅವರು ಬ್ರಿಟಿಷ್‌ ಅಧಿಕಾರಿ ಜೋಸಯ್ಯ ವೆಬ್‌ ಎಂಬುವವರ ಸ್ಮರಣಾರ್ಥ ಈ ವಿಶಿಷ್ಟ ಸ್ಮಾರಕ ನಿರ್ಮಿಸಿರುವುದು ಖಚಿತವಾಗಿದೆ. ಆದರೆ ಯಾವ ವರ್ಷ ಇದನ್ನು ನಿರ್ಮಿಸಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಪಟ್ಟಣದ ಉತ್ತರ ದಿಕ್ಕಿನಲ್ಲಿ, ಸುಮಾರು 5 ಕಿ.ಮೀ. ಅಂತರದಲ್ಲಿರುವ ಈ ಸ್ತಂಭ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. 

25 ವರ್ಷಗಳ ಈಚೆಗೆ ಇಲ್ಲೊಂದ ಊರು (ವಿದ್ಯಾನಗರ)ತಲೆ ಎತ್ತಿದ್ದು, ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ನೆಲೆ ನಿಂತಿವೆ. ಆದರೆ ಇಲ್ಲಿನ ನಿವಾಸಿಗಳಿಗೆ ಈ ಸ್ಮಾರಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ವಿಶಿಷ್ಟ ಸ್ಮಾರಕ ಬಿರುಕು ಬಿಡುತ್ತಿದ್ದರೂ ಇತ್ತ ಯಾರೂ ಗಮನ ಹರಿಸಿಲ್ಲ, ಫಲಕವೂ ಇಲ್ಲ.

‘ಶ್ರೀರಂಗಪಟ್ಟಣಕ್ಕೆ ವಿದ್ಯಾನಗರದ ಬಳಿ ಇರುವ ರಣಗಂಬ ಸ್ಮಾರಕದಲ್ಲಿ ಬಿರುಕು ಮೂಡಿರುವ ವಿಷಯ ಇಲಾಖೆಯ ಗಮನಕ್ಕೆ ಬಂದಿಲ್ಲ. ಅದು ಎಲ್ಲಿದೆ ಎಂಬ ಮಾಹಿತಿಯೂ ನನಗಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಎಂಜಿನಿಯರ್‌ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಮಾರಕದ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಾಚ್ಯವಸ್ತು ಮತ್ತು ವಸ್ತು ಸಂಗ್ರಹಾಲಯ ಇಲಾಖೆ ಸಹಾಯಕ ಅಧಿಕಾರಿ ಎನ್‌.ಎನ್‌. ಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ನೆಲಮಟ್ಟದಿಂದ ಸುಮಾರು 60 ಅಡಿ ಎತ್ತರದ ಏಕಶಿಲಾ ಸ್ತಂಭವನ್ನು 6 ಅಡಿ ಎತ್ತರದ ಮತ್ತೊಂದು ಶಿಲಾ ಸ್ತಂಭದ ಮೇಲೆ ನಿಲ್ಲಿಸಲಾಗಿದೆ. ತಳ ಭಾಗದ ಸ್ತಂಭದ ಕೆಳಗೆ ಸುಮಾರು 10/10 ಅಡಿ ಅಳತೆಯ ಚಚ್ಚೌಕಾಕಾರದ ಜಗತಿ ಇದ್ದು, ಅದರ ಮೇಲೆ ಈ ಸ್ತಂಭ ನಿಂತಿದೆ.

ಬೃಹತ್‌ ಗಾತ್ರದ, ಹತ್ತಾರು ಟನ್‌ಗಳಷ್ಟು ತೂಕದ ಈ ಸ್ತಂಭವನ್ನು 90 ಡಿಗ್ರಿ ಕೋನದಲ್ಲಿ (ಲಂಬಾಕಾರ) ನಿಲ್ಲಿಸಲಾಗಿದೆ. ಸುಮಾರು 210 ವರ್ಷಗಳ ಹಿಂದೆ ಈ ಸ್ತಂಭವನ್ನು ಕಡೆದು ನಿಲ್ಲಿಸಲಾಗಿದೆ. ದಿವಾನ್‌ ಪೂರ್ಣಯ್ಯ ಅವರ ನಿಧನ (1816)ಕ್ಕೆ ಮೊದಲೇ ಇದು ಸ್ಥಾಪಿತವಾಗಿದೆ.

ನಾಲ್ಕನೇ ಆಂಗ್ಲೋ– ಮೈಸೂರು ಯುದ್ಧ (1799)ದ ಬಳಿಕ ಮೈಸೂರು ರಾಜ್ಯವನ್ನು ಬ್ರಿಟಿಷರು ವಶಪಡಿಸಿ ಕೊಂಡು ಒಡೆಯರ್‌ ವಂಶಸ್ಥರಿಗೆ ನೀಡಿದ್ದರು. ಟಿಪ್ಪು ಆಸ್ಥಾನದಲ್ಲಿ ದಿವಾನರಾಗಿದ್ದ ಪೂರ್ಣಯ್ಯ ಮೈಸೂರು ಒಡೆಯರ್‌ ವಂಶದ ದೊರೆಗಳ ಆಳ್ವಿಕೆಗೆ ಒಳಪಟ್ಟ ಮೈಸೂರು ರಾಜ್ಯದಲ್ಲೂ ದಿವಾನರಾಗಿದ್ದರು. ಬ್ರಿಟಿಷ್‌ ಅಧಿಕಾರಿಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಪೂರ್ಣಯ್ಯ ಪ್ರಭಾವಿ ಅಧಿಕಾರಿ ಜೋಸಯ್ಯ ವೆಬ್‌ ಸ್ಮರಣಾರ್ಥ 19ನೇ ಶತಮಾನದ ಆರಂಭದಲ್ಲಿ ಈ ಸ್ಮಾರಕವನ್ನು ಸ್ಥಾಪಿಸಿದ್ದಾರೆ ಎಂದು ತಿಳಿದು ಬಂದಿದೆ.

‘ಶ್ರೀರಂಗಪಟ್ಟಣದಲ್ಲಿ ಒಂದೊಂದು ಕಲ್ಲೂ ಕತೆ ಹೇಳುತ್ತವೆ. ಪಟ್ಟಣದ ಆಸುಪಾಸಿನಲ್ಲಿ 3 ರಣಗಂಬ (ಸ್ಮಾರಕ ಸ್ತಂಭ)ಗಳಿದ್ದು, ಚಂದಗಾಲು ರಸ್ತೆಯಲ್ಲಿರುವ ಒಂದು ಸ್ಮಾರಕವನ್ನು ಮಾತ್ರ ಸಂರಕ್ಷಿಸಲಾಗಿದೆ. ವಿದ್ಯಾನಗರ ಮತ್ತು ಗಂಜಾಂ ಬಳಿ ಇರುವ ಎರಡು ಸ್ತಂಭಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸಂಬಂಧಿಸಿದ ಇಲಾಖೆ ಅವುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಇತಿಹಾಸ ಸಂಶೋಧಕ ಕಲೀಂವುಲ್ಲಾ ಒತ್ತಾಯಿಸಿದ್ದಾರೆ.

* * 

ವಿದ್ಯಾನಗರ ಮತ್ತು ಗಂಜಾಂ ಬಳಿ ಇರುವ ಎರಡು ಸ್ತಂಭಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸಂಬಂಧಿಸಿದ ಇಲಾಖೆ ಅವುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು

ಕಲೀಂವುಲ

ಇತಿಹಾಸ ಸಂಶೋಧಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry