ಯಶಸ್ಸಿನ ಕುದುರೆ ಮೇಲೆ ಯೋಗ ತಾಲೀಮು

7

ಯಶಸ್ಸಿನ ಕುದುರೆ ಮೇಲೆ ಯೋಗ ತಾಲೀಮು

Published:
Updated:
ಯಶಸ್ಸಿನ ಕುದುರೆ ಮೇಲೆ ಯೋಗ ತಾಲೀಮು

ಮೈಸೂರು: ಬೆಳಗಿನ ಚುಮುಚುಮು ಚಳಿಯ ನಡುವೆ ಸೂರ್ಯ ಕಣ್ಣರೆಪ್ಪೆ ತೆರೆಯುತ್ತಿದ್ದಂತೆ ಇಲ್ಲಿನ ರೇಸ್‌ಕೋರ್ಸ್‌ ಮೈದಾನದಲ್ಲಿ ಜನಜಂಗುಳಿ ಸೇರತೊಡಗಿತು. ಹಕ್ಕಿಗಳ ಚಿಲಿಪಿಲಿಗಳ ನಡುವೆ ಬಗೆಬಗೆಯ ಮ್ಯಾಟ್‌ಗಳು, ಜಮಖಾನಗಳನ್ನು ತೆಗೆದುಕೊಂಡು ತಣ್ಣಗಿನ ಹಸಿರು ಹಾಸಿನ ಮೇಲೆ ಹರಡಿ ಜನರು ಕುಳಿತುಕೊಳ್ಳಲಾರಂಭಿಸಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ನೆಹರೂ ಯುವ ಕೇಂದ್ರ, ಯೋಗ ಒಕ್ಕೂಟಗಳ ವತಿಯಿಂದ ಭಾನುವಾರ ನಡೆದ ಯೋಗಾಸನ ತಾಲೀಮಿನಲ್ಲಿ ಕಂಡು ಬಂದ ದೃಶ್ಯಗಳಿವು. ವಿಶ್ವದಾಖಲೆಗಾಗಿ ಜೂನ್ 21ರಂದು ನಡೆಯುವ ಯೋಗಾಸನ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ 20 ಸಾವಿರ ಮಂದಿ ಬಂದಿದ್ದರು. 139 ಎಕರೆ ವಿಸ್ತೀರ್ಣದ ರೇಸ್‌ಕೋರ್ಸ್‌ನ 45 ಎಕರೆ ಪ್ರದೇಶದಲ್ಲಿ ತಾಲೀಮು ನಡೆಯಿತು.

ಬೆಳಿಗ್ಗೆಯಿಂದಲೇ ತಂಡೋತಂಡ­ವಾಗಿ ಜನ ಬಂದರು. ಮೊದಲ ಆದ್ಯತೆ ಮೇರೆಗೆ ಸಾಲುಗಳನ್ನು ರಚಿಸಲಾಯಿತು. ಬೆಳಿಗ್ಗೆ 7 ಗಂಟೆ 7 ನಿಮಿಷಕ್ಕೆ ಪ್ರದರ್ಶನ ಆರಂಭಗೊಂಡಿತು.

ಶಂಖನಾದವು ಹೊರಹೊಮ್ಮುತ್ತಿದ್ದಂತೆ ಮೈದಾನದಲ್ಲಿ ಕೇಳಿ ಬರುತ್ತಿದ್ದ ಗುಜುಗುಜು ಸದ್ದುಗಳು ಉಡುಗಿದವು. ನಾದವು ಅಂತ್ಯಗೊಳ್ಳುತ್ತಿದ್ದಂತೆ ದೀರ್ಘವಾದ ಮೌನ ಎಲ್ಲರನ್ನು ಬಿಗಿದಪ್ಪಿತು. ಮೋಡಗಳ ಮರೆಯಿಂದ ಆಗೊಮ್ಮೆ, ಈಗೊಮ್ಮೆ ಸೂರ್ಯ ತನ್ನ ಪಿಳಿಪಿಳಿ ಕಣ್ಣುಗಳನ್ನು ಬಿಡುತ್ತಾ ಯೋಗ ಪ್ರದರ್ಶನಕ್ಕೆ ಸಾಕ್ಷಿಯಾದ. ಎರಡು ನಿಮಿಷಗಳ ಕಾಲ ಪ್ರಾರ್ಥನೆ ಕೇಳಿ ಬಂದ ನಂತರ ತಾಲೀಮು ಆರಂಭಗೊಂಡಿತು.

ಮೊದಲ 4 ನಿಮಿಷ ಚಲನಕ್ರಿಯೆ: ಮೊದಲ 4 ನಿಮಿಷದಲ್ಲಿ ಚಲನಕ್ರಿಯೆ ಯೋಗ ನಡೆಯಿತು. ಸಮಸ್ಥಿತಿಯಿಂದ ಕುತ್ತಿಗೆಯನ್ನು ಹಿಂದೆ, ಮುಂದೆ ಮಾಡುವುದು, ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ನಿಯತವಾಗಿ ತಿರುಗಿಸುವುದು, ವೃತ್ತಾಕಾರವಾಗಿ ಕುತ್ತಿಗೆಯನ್ನು ಚಲಿಸುವುದು, ಕೈ ತಿರುಗಿಸುವುದು, ಮಂಡಿ ವ್ಯಾಯಾಮದ ಮೂಲಕ ಚಲನಕ್ರಿಯೆ ಅಂತ್ಯಗೊಂಡಿತು.

ಆಸನಗಳು: ನಂತರ ಆರಂಭವಾದುದೇ ಆಸನಗಳ ಪರ್ವ. 25 ನಿಮಿಷ ಒಟ್ಟು 19 ಆಸನಗಳನ್ನು ಪ್ರದರ್ಶಿಸಲಾಯಿತು.

ತಾಡಾಸನ, ವೃಕ್ಷಾಸನ, ಎರಡು ಬಗೆಯ ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಶಲಭಾಸನ, ಸೇತು­ಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಪವನ ಮುಕ್ತಾಸನ ಕೊನೆಗೆ ಶವಾಸನಕ್ಕೆ ಆಸನಗಳು ಮುಕ್ತಾಯ ಕಂಡವು.

14 ನಿಮಿಷ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪಗಳು ನಡೆದವು. ಇದರಲ್ಲಿ ಕಪಾಲಭಾತಿ, ನಾಡಿಶೋಧನ, ಶೀತಲೀ ಪ್ರಾಣಾಯಾಮ, ಭ್ರಾಮರೀ ಪ್ರಾಣಾಯಾಮ, ಧ್ಯಾನದ ನಂತರ ಕೊನೆಯ ಒಂದು ನಿಮಿಷದ ಶಾಂತಿ ಮಂತ್ರದ ಮೂಲಕ ತಾಲೀಮು ಮುಕ್ತಾಯ ಕಂಡಿತು.

ನೋಂದಣಿ ಹೇಗೆ?

ಮೈಸೂರು: ಜೂನ್ 21ರಂದು ನಡೆಯುವ ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಆಸಕ್ತರು ದೂ: 0821–2422096 ಅಥವಾ www.yogadaymysuru.com ಇಲ್ಲಿ ನೋಂದಣಿ ಮಾಡಿಕೊಳ್ಳಿ.

ತಾಲೀಮಿನಲ್ಲಿ ಕಂಡುಬಂದ ಲೋಪಗಳು

ಮೈಸೂರು: 45 ನಿಮಿಷಗಳ ಕಾಲದ ತಾಲೀಮಿನಲ್ಲಿ ಕೆಲವೊಂದು ಲೋಪಗಳು ಕಂಡು ಬಂದವು. ವಾಹನ ನಿಲುಗಡೆಗೆ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿತ್ತಾದರೂ, ಹಲವು ಮಂದಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ದರು. ಏಕಕಾಲಕ್ಕೆ ಜನರು ಬಂದಿದ್ದರಿಂದ ಮಹಾರಾಣಾ ಪ್ರತಾಪಸಿಂಹ ವೃತ್ತ, ಹರಿಶ್ಚಂದ್ರ ರಸ್ತೆ ಸೇರಿದಂತೆ ಕೆಲವೆಡೆ ಸಂಚಾರ ದಟ್ಟಣೆ ಉಂಟಾಯಿತು.

ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಕೆಲವರು ವಿಶ್ವದಾಖಲೆ ತಾಲೀಮಿಗಾಗಿ ಸಂಸ್ಥೆ ಅವಿರತ ಶ್ರಮಿಸುತ್ತಿದ್ದರೂ ಉದ್ದೇಶಪೂರ್ವಕವಾಗಿ ಸಂಸ್ಥೆಯ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸುತ್ತಿಲ್ಲ ಎಂದು ತಗಾದೆ ತೆಗೆದರು. ಕೆಲವು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಮೈದಾನಕ್ಕೆ ಕರೆದುಕೊಂಡು ಹೋಗಲು ಶುಲ್ಕ ವಸೂಲು ಮಾಡಲಾಗುತ್ತಿದೆ ಎಂದು ಸ್ಥಳದಲ್ಲಿದ್ದ ಕೆಲವು ಪೋಷಕರು ದೂರಿದರು.

* * 

ನಿರೀಕ್ಷಿಸಿದ್ದು 10 ಸಾವಿರ ಮಂದಿ, ಬಂದಿದ್ದು 20 ಸಾವಿರ. 21ಕ್ಕೆ  ಕನಿಷ್ಠ 45 ಸಾವಿರ ಜನ ಬರುತ್ತಾರೆ. ಎಲ್ಲರಿಗೂ ಬಾರ್ ಕೋಡೆಡ್ ಟಿಕೆಟ್ ನೀಡಲಾಗುವುದು

ಡಿ.ರಂದೀಪ್

ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry