ಹೈಟೆಕ್‌ ನಿಲ್ದಾಣ ಲೋಕಾರ್ಪಣೆಗೆ ಸಜ್ಜು

7

ಹೈಟೆಕ್‌ ನಿಲ್ದಾಣ ಲೋಕಾರ್ಪಣೆಗೆ ಸಜ್ಜು

Published:
Updated:
ಹೈಟೆಕ್‌ ನಿಲ್ದಾಣ ಲೋಕಾರ್ಪಣೆಗೆ ಸಜ್ಜು

ಹಾಸನ: ಜಿಲ್ಲೆಯ ಜನರ ಬಹುದಿನಗಳ ಆಸೆ ಕೊನೆಗೂ ಈಡೇರಿದೆ. ನಗರದ ಹೃದಯ ಭಾಗದಲ್ಲಿ ಸಾರಿಗೆ ಬಸ್‌ ನಿಲ್ದಾಣ ಕಾಮಗಾರಿ (ಹಳೆ ಬಸ್‌ ನಿಲ್ದಾಣ) ಪೂರ್ಣಗೊಂಡು ಲೋಕಾರ್ಪಣೆಗೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್‌ 18ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನಿಲ್ದಾಣವನ್ನು ಸೇವೆಗೆ ಸರ್ಮಪಿಸಬೇಕಾಗಿತ್ತು. ಅವರು ಅನ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರಣ ಉದ್ಘಾಟನೆ ಮುಂದೂಡಲಾಗಿದೆ.

ಸುಸಜ್ಜಿತ ನಗರ ಸಾರಿಗೆ ಬಸ್ ನಿಲ್ದಾಣವನ್ನು 3 ಎಕರೆ ಪ್ರದೇಶದಲ್ಲಿ ₹ 32.98 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ 36,000 ಚದರ ಅಡಿ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಮೀಸಲಿರಿಸಲಾಗಿದ್ದು, 56 ಸಾವಿರ ಚದರ ಅಡಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ನೆಲಮಾಳಿಗೆಯಲ್ಲಿ 1000 ಬೈಕ್ ಗಳು ಹಾಗೂ 100 ಕಾರುಗಳ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.   ಏಕ ಕಾಲಕ್ಕೆ 22 ಗ್ರಾಮೀಣ ಸಾರಿಗೆ ಬಸ್‌ಗಳು ಸಂಚರಿಸಬಹುದು. ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ವರೆಗೆ ನಗರ ಸಾರಿಗೆ ಬಸ್‌ಗಳು ಸಂಚರಿಸಲಿವೆ. ಆಲೂರು, ಹನುಮಂತಪುರ ಹಾಗೂ ಶಾಂತಿಗ್ರಾಮದ ವರೆಗೂ ಬಸ್ ಸೌಲಭ್ಯ  ಕಲ್ಪಿಸಲಾಗಿದೆ. 

ನಗರ ಬಸ್ ನಿಲ್ದಾಣದಿಂದ ಸಾರ್ವಜನಿಕರನ್ನು ಕರೆದೊಯ್ಯಲು ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ನಗರದ ಅಟೊ ಚಾಲಕರು ಮನವಿ ಮಾಡಿದ್ದಾರೆ.

‘ನಗರದ ಹೃದಯ ಭಾಗದಲ್ಲಿ  ಬಸ್ ನಿಲ್ದಾಣ ಇರುವುದರಿಂದ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ.

ಕೈಗಾರಿಕೆ ಹಾಗೂ ಇತರೆ ಕೆಲಸಗಳಿಗೆ ನಗರಕ್ಕೆ ಬರುವ ಕಾರ್ಮಿಕರಿಗೆ ಸಾಕಷ್ಟು ಸಹಾಯವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ನಿಲ್ದಾಣ ಕಾಮಗಾರಿ ಪರಿಶೀಲಿಸಿದ್ದು, ಉದ್ಘಾಟನೆಗೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲಿದ್ದಾರೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ್‌ ಕುಮಾರ್‌ ತಿಳಿಸಿದರು.

ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಶಿಥಿಲಾವಸ್ಥೆಯಲ್ಲಿರುವ ಸಣ್ಣ ಗೂಡಾಂಗಡಿಗಳನ್ನು ತೆರವುಗೊಳಿಸಿ, ಅಲ್ಲಿ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಬೇಕು. ಈಗ ಇರುವ ಅಂಗಡಿ ಮಾಲೀಕರಿಗೆ ಬಾಡಿಗೆಗೆ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಸಚಿವ ಎ.ಮಂಜು ಅವರು ಕೆ.ಎಸ್.ಆರ್.ಟಿ.ಸಿ ಮತ್ತು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೋತಿ ಹೋಟೆಲ್‌ ಮುಂಭಾಗದಿಂದಲೇ ಬಸ್‌ಗಳು ನಿಲ್ದಾಣ ಪ್ರವೇಶ ಮತ್ತು ಹೊರ ಹೋಗುವ ವ್ಯವಸ್ಥೆ ಕಲ್ಪಿಸಬೇಕು. ಕಸ್ತೂರ ಬಾ ರಸ್ತೆ ಕಿರಿದಾಗಿರುವ ಕಾರಣ ಬಸ್‌ ಸಂಚಾರ ಆರಂಭಗೊಂಡರೆ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

* * 

ವಾಣಿಜ್ಯ ಉದ್ದೇಶಿತ ಜಾಗದಿಂದ ಬಾಡಿಗೆ ರೂಪದಲ್ಲಿ ವರ್ಷಕ್ಕೆ ಸುಮಾರು ₹ 15 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ

ಯಶವಂತ್‌ ಕುಮಾರ್‌

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry