ಮಂಗಳವಾರ, ಸೆಪ್ಟೆಂಬರ್ 28, 2021
22 °C

ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌: ಭಾರತ ತಂಡದ ಜಯಭೇರಿ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌: ಭಾರತ ತಂಡದ ಜಯಭೇರಿ

ಲಂಡನ್‌: ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಆಧಿಪತ್ಯ ಸಾಧಿಸಿದೆ.

5 ಮತ್ತು 8ನೇ ಸ್ಥಾನಕ್ಕಾಗಿ ಸೆಣಸುವ ತಂಡಗಳ ವಿಂಗಡಣೆಗಾಗಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ  6–1 ಗೋಲು ಗಳಿಂದ ಜಯಭೇರಿ ಮೊಳಗಿಸಿದೆ.

ಟೂರ್ನಿಯ ಲೀಗ್‌ ಹಂತದ ಪಂದ್ಯ ದಲ್ಲೂ ಉಭಯ ತಂಡಗಳು ಮುಖಾ ಮುಖಿಯಾಗಿದ್ದವು. ಜೂನ್‌ 18ರಂದು ನಡೆದಿದ್ದ  ಪಂದ್ಯದಲ್ಲಿ  ಮನ್‌ಪ್ರೀತ್‌ ಸಿಂಗ್‌ ಪಡೆ 7–1 ಗೋಲುಗಳಿಂದ ಗೆದ್ದಿತ್ತು.

ಹಿಂದಿನ ಜಯದ ಬಲದೊಂದಿಗೆ ಕಣಕ್ಕಿಳಿದಿದ್ದ ಭಾರತ ತಂಡ ಶುರುವಿ ನಿಂದಲೇ ವೇಗದ ಆಟಕ್ಕೆ ಅಣಿ ಯಾಯಿತು. ಇದರ ಫಲವಾಗಿ ಮೊದಲ ನಿಮಿಷದಲ್ಲೇ ಮನ್‌ಪ್ರೀತ್‌ ಪಡೆಗೆ ಖಾತೆ ತೆರೆಯುವ ಅವಕಾಶ ಲಭ್ಯವಾಗಿತ್ತು.  ಆದರೆ ಆಕಾಶ್‌ದೀಪ್‌ ಸಿಂಗ್‌ ಇದನ್ನು ಕೈಚೆಲ್ಲಿದರು. ಆಕಾಶ್‌ ಬಾರಿಸಿದ ಚೆಂಡನ್ನು ಪಾಕಿಸ್ತಾನದ ಗೋಲ್‌ಕೀಪರ್‌ ಅಮ್ಜದ್‌ ಅಲಿ ಸೊಗಸಾದ ರೀತಿಯಲ್ಲಿ ತಡೆದು ತಮ್ಮ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು.

ಆರನೇ ನಿಮಿಷದಲ್ಲಿ ಭಾರತ ತಂಡ ಮೊದಲ ಪೆನಾಲ್ಟಿ ಕಾರ್ನರ್‌ ಸೃಷ್ಟಿಸಿ ಕೊಂಡಿತ್ತು.  ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ಹರ್ಮನ್‌ ಪ್ರೀತ್‌ ಸಿಂಗ್‌ ವಿಫಲರಾದರು.

ಆದರೆ ಎಂಟನೇ ನಿಮಿಷದಲ್ಲಿ ರಮಣದೀಪ್‌ ಸಿಂಗ್‌ ಗೋಲು ದಾಖಲಿಸಿ ಭಾರತದ ಪಾಳಯದಲ್ಲಿ ಖುಷಿಯ ಅಲೆ ಎಬ್ಬಿಸಿದರು.

50ನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ಸತ್ಬೀರ್‌ ಸಿಂಗ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ರಮಣದೀಪ್‌ ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಮುಟ್ಟಿಸಿ ಹಾಕಿ ಪ್ರಿಯರ ಮನಗೆದ್ದರು.

25ನೇ ನಿಮಿಷದಲ್ಲಿ ತಲ್ವಿಂದರ್‌ ಸಿಂಗ್‌ ತಂಡದ ಖುಷಿಯನ್ನು ಹೆಚ್ಚಿಸಿದರು. ಪ್ರದೀಪ್‌ ಮೊರ್‌ ತಮ್ಮತ್ತ ಬಾರಿಸಿದ ಚೆಂಡನ್ನು ತಡೆದ ಅವರು ಅದನ್ನು ಮಿಂಚಿನ ಗತಿಯಲ್ಲಿ ‘ಫ್ಲಿಕ್‌’ ಮಾಡಿ ಗುರಿ ಸೇರಿಸಿದರು.

27ನೇ ನಿಮಿಷದಲ್ಲಿ ಮನದೀಪ್‌ ಸಿಂಗ್‌ ಮೋಡಿ ಮಾಡಿದರು. ಕರ್ನಾಟಕದ ಎಸ್‌.ವಿ. ಸುನಿಲ್‌ ನೀಡಿದ ಪಾಸ್‌ನಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಆಕಾಶ್‌ದೀಪ್‌ ಅದನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದರು. ಪಾಕಿಸ್ತಾನದ ರಕ್ಷಣಾ ವಿಭಾಗದ ಆಟಗಾರರು ಭಾರತದ ಆಟ ಗಾರನ ಪ್ರಯತ್ನ  ವಿಫಲಗೊಳಿಸಲು ಮುಂದಾದರು. ಆಗ ಆಕಾಶ್‌, ಚೆಂಡನ್ನು ಮನದೀಪ್‌ ಅವರತ್ತ  ತಳ್ಳಿದರು. ಎದುರಾಳಿ ತಂಡದ  ಗೋಲು ಪೆಟ್ಟಿಗೆಯ ಸನಿಹದಲ್ಲೇ  ಇದ್ದ  ಮನದೀಪ್‌, ಅದನ್ನು ಮನಮೋಹಕ  ರೀತಿಯಲ್ಲಿ ಗುರಿ ತಲು ಪಿಸಿ 3–0 ರ ಮುನ್ನಡೆಗೆ ಕಾರಣರಾದರು.

28ನೇ ನಿಮಿಷದಲ್ಲಿ ರಮಣದೀಪ್‌ ಗೋಲು ದಾಖಲಿಸಿ ಭಾರತದ ಗೆಲುವನ್ನು ಖಾತ್ರಿ ಪಡಿಸಿದರು.

ಎರಡನೇ ಕ್ವಾರ್ಟರ್‌ನ ಅಂತ್ಯಕ್ಕೆ 4–0 ಗೋಲುಗಳಿಂದ ಮುಂದಿದ್ದ ಭಾರತ ತಂಡ ಆ ನಂತರವೂ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆಯಿತು.

36ನೇ ನಿಮಿಷದಲ್ಲಿ ಭಾರತ ತಂಡ ಮತ್ತೊಂದು ಪೆನಾಲ್ಟಿ ಕಾರ್ನರ್‌ ಸೃಷ್ಟಿಸಿ ಕೊಂಡಿತ್ತು. ಈ ಅವಕಾಶದಲ್ಲಿ ಹರ್ಮನ್‌ ಪ್ರೀತ್‌ ಸಿಂಗ್‌ ಚೆಂಡನ್ನು ಗುರಿ ಮುಟ್ಟಿಸಿ  5–0 ರ ಮುನ್ನಡೆ ತಂದುಕೊಟ್ಟರು.

ಇಷ್ಟಾದರೂ ಪಾಕಿಸ್ತಾನ ತಂಡ ವಿಶ್ವಾಸ ಕಳೆದುಕೊಳ್ಳಲಿಲ್ಲ. 41ನೇ ನಿಮಿಷದಲ್ಲಿ ಈ ತಂಡದ ಅಜಮ್‌ ಅಹ್ಮದ್‌ ಭಾರತದ ರಕ್ಷಣಾಕೋಟೆಯನ್ನು ಭೇದಿಸಿ ತಂಡದ ಖಾತೆ ತೆರೆದರು.

ಅಂತಿಮ ಕ್ವಾರ್ಟರ್‌ನಲ್ಲೂ ಪಾಕಿಸ್ತಾನ ತಂಡ ಗೋಲು ಗಳಿಸುವ ಹಲವು ಅವ ಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಆದರೆ ಭಾರತದ ರಕ್ಷಣಾ ವಿಭಾಗದ ಆಟಗಾರರು ಎದುರಾಳಿಗಳ ಎಲ್ಲಾ ಪ್ರಯತ್ನಗಳಿಗೆ ಅಡ್ಡಿಯಾದರು.

59ನೇ ನಿಮಿಷದಲ್ಲಿ ಮನದೀಪ್‌ ಸಿಂಗ್‌ ಅವರು ವೈಯಕ್ತಿಕ ಎರಡನೇ ಗೋಲು ದಾಖಲಿಸುತ್ತಿದ್ದಂತೆ ಭಾರತದ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

5 ಮತ್ತು 6ನೇ ಸ್ಥಾನ ನಿರ್ಧರಿಸಲು ನಡೆಯುವ ‘ಪ್ಲೇ ಆಫ್‌’ ಪಂದ್ಯದಲ್ಲಿ ಭಾರತ ತಂಡ ಕೆನಡಾ ವಿರುದ್ಧ ಸೆಣಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.