ಜಿಸ್ಯಾಟ್–17 ಉಪಗ್ರಹ ಯಶಸ್ವಿ ಉಡಾವಣೆ

ಬೆಂಗಳೂರು: ದೇಶದ ನೂತನ ದೂರಸಂಪರ್ಕ ಉಪಗ್ರಹ ಜಿಸ್ಯಾಟ್–17 ಅನ್ನು ಫ್ರೆಂಚ್ ಗಾಯಾನದ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಉಪಗ್ರಹವನ್ನು ಏರಿಯಾನ್–5 ವಿಎ–238 ಉಡಾವಣಾ ವಾಹಕದ ಮೂಲಕ ಬುಧವಾರ ತಡರಾತ್ರಿ 2.31ಕ್ಕೆ ಉಡಾವಣೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಾಹ್ಯಾಕಾಶ ಸಂಸ್ಥೆ, ‘ಜಿಸ್ಯಾಟ್–17 ಉಪಗ್ರಹವನ್ನು ಏರಿಯಾನ್–5 ವಿಎ238 ಮೂಲಕ, ಫ್ರೆಂಚ್ ಗಯಾನಾದ ಕೌರೌ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ’ ಎಂದು ತಿಳಿಸಿದೆ.
ಈ ಬಗ್ಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೆಫೇನ್ ಇಸ್ರೇಲ್ ಟ್ವಿಟರ್ ಮೂಲಕ ಸುದ್ದಿಯನ್ನು ಖಾತ್ರಿ ಪಡಿಸಿದ್ದಾರೆ. ಅವರು, ‘ಜಿಸ್ಯಾಟ್–17 ಯಶಸ್ವಿಯಾಗಿ ಕಕ್ಷೆಯನ್ನು ತಲುಪಿರುವುದು ಖಾತ್ರಿಯಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
Confirmed: GSAT-17 has successfully separated from its #Ariane5 launcher #VA238 @ISRO pic.twitter.com/rGwEkWQV8j
— Stéphane Israël (@arianespaceceo) June 28, 2017
ಉಡಾವಣೆಯನ್ನು ಉಪಗ್ರಹ ನಿರ್ವಹಣಾ ಕೇಂದ್ರದ ಮೂಲಕ ವೀಕ್ಷಿಸಿದ ವಿಕ್ರಂ ಸಾರಾಬಾಯಿ ಉಪಗ್ರಹ ಉಡಾವಣಾ ಕೇಂದ್ರದ ನಿರ್ದೇಶಕ ಡಾ. ಕೆ. ಶಿವನ್ ಅವರು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆಗೆ ಧನ್ಯವಾದ ಹೇಳಿದ್ದಾರೆ.
ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋದಿಂದ ಉಡಾವಣೆಗೊಂಡ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಜಿಎಸ್ಎಲ್ವಿ ಎಂಕೆ–3 ಹಾಗೂ ಪಿಎಸ್ಎಲ್ವಿ ಸಿ–38 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು.
ಜಿಸ್ಯಾಟ್–17 ಒಟ್ಟು 3,477 ಕೆ.ಜಿ ತೂಕವಿದೆ. ಹವಾಮಾನ ದತ್ತಾಂಶ, ಉಪಗ್ರಹ ಆಧಾರಿತ ಹುಡುಕಾಟದ ಸೇವೆಗೆ ಇದು ಬಳಕೆ ಆಗಲಿದೆ ಎಂದು ಇಸ್ರೊ ಹೇಳಿದೆ.