ಭಾನುವಾರ, ಡಿಸೆಂಬರ್ 15, 2019
18 °C

ಲಕ್ಷ್ಮೀಪುರ: ವಂತಿಗೆ ಸಂಗ್ರಹಿಸಿ ರಸ್ತೆ ದುರಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೀಪುರ: ವಂತಿಗೆ ಸಂಗ್ರಹಿಸಿ ರಸ್ತೆ ದುರಸ್ತಿ

ಹಾನಗಲ್: ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೇಸತ್ತ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮಸ್ಥರು, ಪರಸ್ಪರ ವಂತಿಗೆ ಸಂಗ್ರಹ ಹಾಗೂ ಶ್ರಮದಾನದ ಮೂಲಕ ಶುಕ್ರವಾರ ರಸ್ತೆ ಸುಧಾರಣೆ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.

ಲಕ್ಷ್ಮೀಪುರ ತಾಲ್ಲೂಕಿನ ಗಡಿಗ್ರಾಮ. ಆದರೆ, ಅಲ್ಲಿನ ಜನರೆಲ್ಲ ವ್ಯವಹಾರಕ್ಕಾಗಿ ಅವಲಂಬಿಸಿದ್ದು ಹಾನಗಲ್‌ಗೂ ಹೆಚ್ಚು ದಾಸನಕೊಪ್ಪ ಗ್ರಾಮವನ್ನು. ಈ ಗ್ರಾಮ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ಹಾನಗಲ್‌ ತಾಲ್ಲೂಕಿನ ಲಕ್ಷ್ಮೀಪುರ ಮತ್ತು ಗೊಲ್ಲರ ಕೇರಿಯ ಜನರು ನಿತ್ಯದ ವ್ಯವಹಾರಕ್ಕೆ ಅನಿವಾರ್ಯ ಎಂಬಷ್ಟು ಈ ಗ್ರಾಮವನ್ನು ಅವಲಂಬಿಸಿದ್ದಾರೆ.

ಆದರೆ, ಎರಡು ಗ್ರಾಮಗಳ ಮಧ್ಯದಲ್ಲಿನ ಬೆಂಡೆಕಟ್ಟಿ ಕೆರೆ ಮೇಲಿನ ರಸ್ತೆ ಸುಮಾರು ವರ್ಷಗಳಿಂದ ಹದಗೆಟ್ಟಿದೆ. 2 ಕಿ.ಮೀ ಅಂತರದ ರಸ್ತೆಯು ದಾಸನಕೊಪ್ಪ ಪಂಚಾಯ್ತಿ ವ್ಯಾಪ್ತಿಗೆ ಸೇರುತ್ತದೆ. ಕೆರೆ ಏರಿಯನ್ನು ಒಳಗೊಂಡ ಈ ರಸ್ತೆ ಅಲ್ಲಲ್ಲಿ ಇಕ್ಕಟ್ಟಾಗಿದೆ. ಇದರಿಂದ ಸಂಚಾರ ದುಸ್ತರವಾಗಿತ್ತು. ಲಕ್ಷ್ಮೀಪುರ ಅಲ್ಲದೇ, ತಾಲ್ಲೂಕಿನ ಸಾಗರವಳ್ಳಿ, ಮಂತಗಿ, ಕಾಮನಹಳ್ಳಿ ಮತ್ತಿತರ ಸುತ್ತಲಿನ ಗ್ರಾಮಗಳ ಜನರು ದಾಸನಕೊಪ್ಪ ಮತ್ತು ಶಿರಸಿ ಸಂಪರ್ಕಕ್ಕೆ ಈ ರಸ್ತೆ ಪ್ರಮುಖ.

ಈ ರಸ್ತೆ ಸುಧಾರಣೆಗೆ ಒತ್ತಾಯಿಸಿ ಬದನಗೋಡ ಗ್ರಾಮ ಪಂಚಾಯ್ತಿ ಮತ್ತು ಯಲ್ಲಾಪೂರ ಶಾಸಕರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಇದರಿಂದ ಬೇಸತ್ತು ಜನರು ಸ್ವಯಂ ಸುಧಾರಣೆಗೆ ಮುಂದಾಗಿದ್ದಾರೆ. ಟ್ರ್ಯಾಕ್ಟರ್‌, ಜೆಸಿಬಿ ಯಂತ್ರಗಳನ್ನು ಬಳಸಿ ಕೊಂಡು ಕಲ್ಲು, ಖಡಿ ಹಾಕಿ ರಸ್ತೆಯಲ್ಲಿ ಬಿದ್ದಿರುವ ತಗ್ಗು–ಗುಂಡಿಗಳನ್ನು ಮುಚ್ಚಿ ರಸ್ತೆ ನಿರ್ಮಿಸುತ್ತಿದ್ದಾರೆ.

‘ಜನಪ್ರತಿನಿಧಿಗಳಿಗೆ ಮತಗಳು ಮುಖ್ಯ. ಈ ರಸ್ತೆಯ ಮೇಲೆ ಹಾನಗಲ್‌ ತಾಲ್ಲೂಕಿನ ಜನರು ಓಡಾಡುತ್ತಾರೆ, ಇವರಿಂದ ನಮಗೇನು ಮತಗಳು ಬಂದಾವು ಎಂಬ ಉದ್ದೇಶದಿಂದ ರಸ್ತೆ ಸುಧಾರಣೆಗೆ ಯಲ್ಲಾಪೂರ ವಿಧಾನಸಭಾ ಕ್ಷೇತ್ರದ ಅನುದಾನ ಲಭ್ಯವಾಗುತ್ತಿಲ್ಲ’ ಎಂದು ಶ್ರಮದಾನದಲ್ಲಿ ನಿರತ ಲಕ್ಷ್ಮೀಪುರ ಗ್ರಾಮಸ್ಥರು ದೂರಿದರು.

‘ರಸ್ತೆ ದುರಸ್ತಿ ಕಾರ್ಯಕ್ಕೆ ಸರ್ಕಾರ, ಸಂಘ–ಸಂಸ್ಥೆಗಳಿಂದ ನೆರವು ಸಿಕ್ಕಿಲ್ಲ, ಗ್ರಾಮಸ್ಥರು ಶ್ರಮದಾನ, ಹಣ ಹೊಂದಿಸಿಕೊಂಡು ಕಾಮಗಾರಿ ಕೈಗೊಂಡಿದ್ದೇವೆ’ ಎಂದು ಅವರು ಹೇಳಿದರು.

‘ನರೇಗಾ ಅಡಿಯಲ್ಲಿ ಕೆರೆ ಏರಿಯ ರಸ್ತೆ ಸುಧಾರಣೆ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು’ ಎಂದು ಬದನಗೋಡ (ದಾಸನಕೊಪ್ಪ) ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಪ್ರತಿಕ್ರಿಯಿಸಿದರು.

ರಸ್ತೆ ದುರಸ್ತಿ ಕಾರ್ಯದಲ್ಲಿ ರಾಜಕುಮಾರ ಜೋಗಪ್ಪನವರ, ಮಾರುತಿ ಕಮಾಟಿ, ಸಿದ್ಧಪ್ಪ ಆಲದಕಟ್ಟಿ, ಬಾಬಣ್ಣ ಗೊಲ್ಲರ, ಜೋಗಪ್ಪ ಗೊಲ್ಲರ, ಸಂತೋಷ ಹಣಜಿ, ಬಸವರಾಜ ಆಲೂರ, ಚಂದ್ರಪ್ಪ ತಳವಾರ, ಅಜ್ಜಪ್ಪ ತಾಳಗಿ, ಮಂಜು ಆಲದಕಟ್ಟಿ, ಬಸವರಾಜ ಹುಚ್ಚಣ್ಣನವರ, ರಾಮಚಂದ್ರ ಗೊಲ್ಲರ, ಫಕ್ಕೀರಪ್ಪ ತಾಳಗಿ, ಗಿರೀಶ ನೆಗಳೂರ, ನಾಗರಾಜ ಎಲಿವಾಳ, ಗೋಪಿ ರಂಗಾಪೂರ, ಬಸವರಾಜ ಹಿರೂರ, ತಿಮ್ಮಣ್ಣ ಬೆಳ್ಳನಕೇರಿ, ಯಲ್ಲಪ್ಪ ಗೊಲ್ಲರ, ಕಲ್ಲಪ್ಪ ಗೊಲ್ಲರ, ಕೃಷ್ಣ ಗೊಲ್ಲರ, ದುರ್ಗಪ್ಪ ಗೊಲ್ಲರ, ಯಲ್ಲಪ್ಪ ಬಾಲಪ್ಪ ಗೊಲ್ಲರ ಪಾಲ್ಗೊಂಡಿದ್ದರು.

* * 

ರಸ್ತೆ ಹದಗೆಟ್ಟ ವಿಷಯ ಗಮನಕ್ಕೆ ಬಂದಿದೆ. ಕಾಮಗಾರಿಯ ಕ್ರಿಯಾ ಯೋಜನೆ ಸಿದ್ಧಪಡಿಸಿ, ಅನುದಾನ ಮಂಜೂರು ಮಾಡಲಾಗುವುದು

ಶಿವರಾಮ ಹೆಬ್ಬಾರ

ಯಲ್ಲಾಪೂರ ಶಾಸಕ

ಪ್ರತಿಕ್ರಿಯಿಸಿ (+)