ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 3ರಷ್ಟು ಅನುದಾನ ಬಳಕೆ ಕಡ್ಡಾಯ

Last Updated 1 ಜುಲೈ 2017, 6:10 IST
ಅಕ್ಷರ ಗಾತ್ರ

ಬಾಗಲಕೋಟೆ: ವಿವಿಧ ಇಲಾಖೆಗಳಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಶೇ 3 ರಷ್ಟು ಅನುದಾನ ಮೀಸಲಿರಿಸುವ ಜೊತೆಗೆ ಅನುದಾನ ಕಡ್ಡಾಯವಾಗಿ ಬಳಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಂಗವಿಕಲರ ಕುಂದು ಕೊರತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘2014ರ ಕಾಯ್ದೆಯ ಪ್ರಕಾರ 6 ರೀತಿಯ ಅಂಗವಿಕಲತೆ ಪ್ರಕಾರಗಳಿದ್ದರೆ 2016ರ ತಿದ್ದುಪಡಿ ಕಾಯ್ದೆಯಲ್ಲಿ 20 ಪ್ರಕಾರಗಳನ್ನು ಗುರುತಿಸಲಾಗಿದೆ. ಈ ಕಾಯ್ದೆ ಅನ್ವಯ ಪ್ರತಿಯೊಂದು ಇಲಾಖೆಯಲ್ಲಿ ಅಂಗವಿಕಲರಿಗೆ ಮೀಸಲಿರಿಸಿದ ಶೇ 3 ರಷ್ಟು ಅನುದಾನವನ್ನು ಬಳಸದೇ ಹೋದಲ್ಲಿ ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಲು ಅವಕಾಶವಿದೆ’ ಎಂದು ಹೇಳಿದರು.

ಕಳೆದ ವರ್ಷ ಬಿಡುಗಡೆಯಾದ ಅನುದಾನ  ಬಳಸದೇ ಇರುವುದು ಕಂಡುಬಂದಿದೆ. ಈ ಸಾಲಿನಲ್ಲಿ ಪ್ರತಿಯೊಂದು ಇಲಾಖೆಗಳು ಅಂಗವಿಕಲರಿಗೆ ಮೀಸಲಿರಿಸಿದ ಅನುದಾನ ಬಳಕೆಯಾಗಬೇಕು. ವಿವಿಧ ಇಲಾಖೆಯ ಅನುದಾನ ಬಳಕೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳುವಂತೆ ಅಂಗವಿಕಲರ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ಅಂಗವಿಕಲರಿಗೆ ತಾವು ವಾಸವಿರುವ ಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಲು ಸರ್ಕಾರ ಬಸ್‌ಪಾಸ್‌ ಸೌಲಭ್ಯ ನೀಡಿದೆ. ಅದರ ಒಳಗೆ ಬಸ್ ಕಂಡಕ್ಟರ್‌ಗಳು ಕೆಳಗೆ ಇಳಿಸುತ್ತಿರುವ ಬಗ್ಗೆ ಹಾಗೂ ಪ್ರತಿ ವರ್ಷ ಪಾಸ್‌ ನವೀಕರಣ ಸಂದರ್ಭದಲ್ಲಿ ಹಿಂದೆ ಕೊಟ್ಟ ಮೂಲ ದಾಖಲೆಗಳನ್ನು ಮತ್ತೆ ಕೇಳುತ್ತಿದ್ದಾರೆ ಎಂದು ಫಲಾನುಭವಿಗಳು ಸಭೆಯಲ್ಲಿ ಸಮಸ್ಯೆ ಬಿಚ್ಚಿಟ್ಟರು.

ಕೂಡಲೇ ದೂರವಾಣಿ ಮೂಲಕ ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಕರನ್ನು ಸಂಪರ್ಕಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ, ಬಸ್‌ ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡಲು ಹಾಗೂ ಮೂಲ ದಾಖಲೆಗಳನ್ನು ಪದೇ ಪದೇ ಕೇಳದಂತೆ ಬಸ್‌ ಪಾಸ್‌ ನವೀಕರಿಸುವ ಸಿಬ್ಬಂದಿಗೆ ಸೂಚನೆ ನೀಡುವಂತೆ ಹೇಳಿದರು. 100 ಕಿ.ಮೀ ವ್ಯಾಪ್ತಿಗಿಂತ ಮೊದಲೇ ಬಸ್‌ನಿಂದ ಕೆಳಗೆ ಇಳಿಸಿದರೆ ತಕ್ಷಣ ಈ ಮೊಬೈಲ್‌ ಸಂಖ್ಯೆಗೆ 988712292 ಸಂಪರ್ಕಿಸುವಂತೆ ಅಂಗವಿಕಲರಿಗೆ ಹೇಳಿದರು.

ಅಂಗವೈಕಲ್ಯ ಇಲ್ಲದಿದ್ದರೂ ವೈಕಲ್ಯ ಹೊಂದಿರುವುದಾಗಿ ಪ್ರಮಾಣ ಪತ್ರ ಪಡೆದು ಕೆಲವರು ಸೌಲಭ್ಯ ಪಡೆಯುತ್ತಿದ್ದಾರೆ. ಇದರಿಂದ ನಿಜವಾದ ಫಲಾನುಭವಿಗಳಿಗೆ ಸೀಗಬೇಕಾದ ಸವಲತ್ತು ಸಿಗುತ್ತಿಲ್ಲ ಎಂದು  ಸಭೆಯಲ್ಲಿದ್ದ ಕೆಲವರು ಅಳಲು ತೋಡಿಕೊಂಡರು.

ನಕಲಿ ಪ್ರಮಾಣ ಪತ್ರ ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತರುವಂತೆ ಅಶೋಕ ದುಡಗುಂಟಿ ತಿಳಿಸಿದರು. ಮುಂದಿನ ದಿನಗಳಲ್ಲಿ ಅಂಗವಿಕಲರಿಂದ ಪದೇ ಪದೇ ದೂರುಗಳು ಬರದಂತೆ ನೋಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ಅಂಗವಿಕಲರಿಗೆ ಮಾಸಾಶನದಿಂದ ವಂಚಿತರಾದಲ್ಲಿ ಅಂತಹವರ ಪಟ್ಟಿ ನೀಡಿದಲ್ಲಿ ಅವರಿಗೆ ಮಾಸಾಶನ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಅಂಗವಿಕಲರ ಸಂಘ ಸಂಸ್ಥೆಗಳು ಹಾಗೂ ಅಂಗವಿಕಲರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT