ಸೋಮವಾರ, ಡಿಸೆಂಬರ್ 9, 2019
25 °C

ಮದ್ಯ ವ್ಯಾಪಾರಿಗಳಿಂದ ಕಾದು ನೋಡುವ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ಯ ವ್ಯಾಪಾರಿಗಳಿಂದ ಕಾದು ನೋಡುವ ತಂತ್ರ

ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿಗಳ ಸಮೀಪ ದಲ್ಲಿರುವ ಜಿಲ್ಲೆಯ ಮದ್ಯದಂಗಡಿಗಳು ಸ್ಥಳಾಂತರ ಮಾಡಲು ಮತ್ತು ಪರವಾನಗಿ ನವೀಕರಿಸಿಕೊಳ್ಳಲು ಕಾದುನೋಡುವ ತಂತ್ರಕ್ಕೆ ಮುಂದಾಗಿವೆ. ಸುಪ್ರೀಂಕೋರ್ಟ್‌ ಆದೇಶದಂತೆ ರಾಷ್ಟ್ರೀಯ ಹೆದ್ದಾರಿ ಬದಿಯ ಮದ್ಯದಂಗಡಿಗಳು ಜೂನ್‌ 30ರ ಮಧ್ಯರಾತ್ರಿ ಯಿಂದಲೇ ಸ್ಥಳಾಂತರ ಹೊಂದಬೇಕಾಗಿದೆ.

ಅಲ್ಲದೆ, ಪರವಾನಗಿಯನ್ನು ಕೂಡ ನವೀಕರಿಸಿಕೊಳ್ಳಬೇಕು. ಆದರೆ, ಜಿಲ್ಲೆಯ ಅನೇಕ ಮದ್ಯ ಮಾರಾಟಗಾರರು, ಆದೇಶ ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್‌ ನೀಡಲಿರುವ ಆದೇಶದವರೆಗೆ ಕಾಯಲು ನಿರ್ಧರಿಸಿದ್ದಾರೆ.

ಇದರಿಂದ ಜಿಲ್ಲೆಯ ವಿವಿಧೆಡೆಯ ರಾಷ್ಟ್ರೀಯ ಹೆದ್ದಾರಿ ಗಳ ಸಮೀಪವಿರುವ ಮದ್ಯದಂಗಡಿಗಳು ಶನಿವಾರದಿಂದ ಬಂದ್‌ ಆಗಲಿವೆ. ಜುಲೈ 4ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡುವ ನಿರೀಕ್ಷೆಯಿದೆ. ಅಲ್ಲಿಯವರೆಗೂ ಅಂಗಡಿಗಳು ತೆರೆಯುವುದಿಲ್ಲ. ಹೀಗಾಗಿ, ಮದ್ಯಪ್ರಿಯರು, ಹೆದ್ದಾರಿಗಳಿಂದ ದೂರವಿರುವ ಮತ್ತು ಪರವಾನಗಿ ನವೀಕರಿಸಿಕೊಂಡ ಮದ್ಯದಂಗಡಿಗಳನ್ನು ಅವಲಂಬಿಸಬೇಕಾಗಲಿದೆ. 

‘ಜುಲೈ 4ರಂದು ನ್ಯಾಯಾಲಯದಲ್ಲಿ ವಿಚಾರಣೆಯಿದ್ದು, ಅದರ ಆದೇಶದಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗು ವುದು. ಅಲ್ಲಿಯವರೆಗೂ ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿ ಬದಿಯ ಎಲ್ಲ ಮದ್ಯದಂಗಡಿಗಳನ್ನು ಬಂದ್‌ ಮಾಡಲಾಗುವುದು’ ಎಂದು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಶಿವು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಮುನ್ಸೂಚನೆ ನೀಡದೆ ಸುಪ್ರೀಂ ಕೋರ್ಟ್‌ ನಮ್ಮ ಮೇಲೆ ಗದಾ ಪ್ರಹಾರ ಮಾಡಿದೆ. ರಸ್ತೆ ಬದಿಯ ಮದ್ಯದಂಗಡಿಗಳನ್ನು ತೆರವುಗೊಳಿಸುವ ಮುನ್ನ ಅವುಗಳ ಸಾಧಕ ಬಾಧಕಗಳ ಕುರಿತು ಆಲೋಚಿಸಬೇಕಾಗಿತ್ತು. ಏಕಾಏಕಿ ಸ್ಥಳಾಂತರ ಮಾಡುವಂತೆ ಸೂಚಿಸಿರುವುದರಿಂದ ಲಕ್ಷಾಂತರ ಜನರ ಬದುಕಿಗೆ ತೊಂದರೆಯಾಗಿದೆ’ ಎಂದು ಶಿವಶಕ್ತಿ ವೈನ್ಸ್‌ ಮಾಲೀಕ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದರು.

‘ಅಂಗಡಿ ಸ್ಥಳಾಂತರ ಮಾಡಲು ಜಾಗದ ಕೊರತೆ ಇದೆ. ಮಳಿಗೆಗಳು ಸುಲಭವಾಗಿ ಸಿಗುವುದಿಲ್ಲ. ಜತೆಗೆ, ಇದರಿಂದ ವ್ಯಾಪಾರ ಕಡಿಮೆ ಆಗುವ ಸಂಭವವಿದೆ. ಮದ್ಯದಂಗಡಿಗಳನ್ನೇ ನಂಬಿ ಜೀವನ ಮಾಡುತ್ತಿರುವ ಕಾರ್ಮಿಕರಿಗೂ ಸಂಕಷ್ಟ ಎದುರಾಗಲಿದೆ’ ಎಂದು ಗುಂಡ್ಲುಪೇಟೆಯ ಮದ್ಯ ವ್ಯಾಪಾರಿಗಳು ಹೇಳಿದರು. ಈ ನಡುವೆ ಕೆಲವು ಬಾರ್ ಮಾಲೀಕರು ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ.

‘20 ಸಾವಿರ ಜನಸಂಖ್ಯೆ ಒಳಗಿರುವ ಪಟ್ಟಣದಲ್ಲಿ 220 ಮೀಟರ್‌ ದೂರದವರೆಗೆ ಬಾರ್ ಸ್ಥಳಾಂತರಿಸುವಂತೆ ಸೂಚಿಸ ಲಾಗಿದೆ. ಈಗಾಗಲೇ ಸ್ಥಳಾಂತರಕ್ಕೆ ಅಗತ್ಯವಿರುವ ಏರ್ಪಾಡು ಮಾಡಿಕೊಂಡಿದ್ದೇವೆ’ ಎಂದು ಹನೂರು ತಾಲ್ಲೂಕಿನಲ್ಲಿರುವ ಅಮೃತ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮಾಲೀಕ ಸೋಮಣ್ಣ ತಿಳಿಸಿದರು.

ಸ್ಥಳಾಂತರದ ಪರಿಹಾರ ಸೂಚಿಸಿದ್ದರೂ, ಅದನ್ನು ಕಾರ್ಯಗತ ಮಾಡುವುದು ಸುಲಭವಲ್ಲ ಎನ್ನುವುದು ಮದ್ಯ ಮಾರಾಟಗಾರರ ಅಭಿಪ್ರಾಯ. ಇದರಿಂದ ಆರ್ಥಿಕ ಹೊರೆ ಹೆಚ್ಚು ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸ ಬೇಕಾದ ಅನುಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿ. ಹೊಸ ಸ್ಥಳಕ್ಕೆ ಹೋದಾಗ ವ್ಯಾಪಾರದಲ್ಲಿ ಏರಿಳಿತವಾಗ ಬಹುದು, ಅಂಗಡಿಗಳಿಗೆ ರಕ್ಷಣೆ ಇಲ್ಲದಿರುವುದು, ರಕ್ಷಣೆಗಾಗಿ ಕಾವಲುಗಾರರನ್ನು ನಿಯೋಜಿಸಬೇಕಾದ ಅನಿವಾರ್ಯತೆ, ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ’ ಎಂದು ವೆಂಕಟೇಶ್ವರ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮಾಲೀಕ ನಾಗರಾಜು ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಇರುವ ಮದ್ಯದಂಗಡಿಗಳು

35 ಚಾಮರಾಜನಗರ

07 ಯಳಂದೂರು

47 ಕೊಳ್ಳೇಗಾಲ

30 ಗುಂಡ್ಲುಪೇಟೆ

* * 

ಹೆದ್ದಾರಿ ಬದಿಯ ಅಂಗಡಿಗಳು ಬಂದ್‌ ಮಾಡುವುದರಿಂದ ಜಿಲ್ಲಾದ್ಯಂತ ದಿನಕ್ಕೆ ಸುಮಾರು    ₹ 1.5 ಕೋಟಿ ನಷ್ಟವಾಗುತ್ತದೆ. ಸ್ಥಳ ಬದಲಾದರೆ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ

ಶಿವು

ಅಧ್ಯಕ್ಷರು, ಜಿಲ್ಲಾ ಮದ್ಯ ಮಾರಾಟಗಾರರ ಸಂಘ

ಪ್ರತಿಕ್ರಿಯಿಸಿ (+)