ಶನಿವಾರ, ಡಿಸೆಂಬರ್ 7, 2019
25 °C

ಸುಳ್ಯಪದವು ರೋಡಿನ ಮರಣ ತೋಡು....!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯಪದವು ರೋಡಿನ ಮರಣ ತೋಡು....!

ಪುತ್ತೂರು: ತಾಲ್ಲೂಕಿನ ಈಶ್ವರಮಂಗಲ ಸುಳ್ಯಪದವು ರಸ್ತೆ ತೀರಾ ಹದಗೆಟ್ಟಿದ್ದು, ಇದು ತೋಡೋ ಅಥವಾ ರೋಡೋ ಎಂಬುವುದು ತಿಳಿಯಲಾಗದ ಪರಿಸ್ಥಿತಿ ಎದುರಾಗಿದೆ.

ಈಶ್ವರಮಂಗಲ ಸಮೀಪದ ಗೋಳಿತಡಿ ಎಂಬಲ್ಲಿ ಈ ರಸ್ತೆಯ ಮೇಲೆ ಹರಿದು ಹೋಗುವ ನೀರಿನಲ್ಲಿ ಕೆಲವು ವರ್ಷಗಳ ಹಿಂದೆ ಎಳೆಯ ಪ್ರಾಯದ ಬಾಲಕಿಯೊಬ್ಬಳು ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಳು. ಇದೀಗ ಇದೇ ಭಾಗದಲ್ಲಿ ಮತ್ತೆ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.

ಈಶ್ವರಮಂಗಲದಿಂದ ಸುಳ್ಯಪದವು ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯಿತಿ ರಸ್ತೆ ಇದಾಗಿದ್ದು, ಅರಣ್ಯ ಪ್ರದೇಶದ ನಡುವೆ ಹಾದು ಹೋಗುವ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ.

ಈ ರಸ್ತೆ ಡಾಂಬರು ಕಾಣದೆ ಹಲವು ವರ್ಷಗಳೇ ಕಳೆದಿದ್ದು, ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೇ ಇಲ್ಲ, ಹೊಂಡಗುಂಡಿಗಳಿಂದಲೇ ತುಂಬಿ ಕೊಂಡಿರುವ ರಸ್ತೆಯಲ್ಲಿ ಡಾಂಬರಿನ ಅವಶೇಷಗಳಷ್ಟೇ ಉಳಿದುಕೊಂಡಿವೆ. ವಾಹನ ಸಂಚಾರಕ್ಕೆ ಮಾತ್ರವಲ್ಲದೆ ಜನ ಸಂಚಾರಕ್ಕೂ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕ ಕೇರಳ ಗಡಿ ಪ್ರದೇಶ ವಾದ ನೆಟ್ಟಣಿಗೆ ಮುಡ್ನೂರು ಮತ್ತು ಪಡುವನ್ನೂರು ಗ್ರಾಮ ವ್ಯಾಪ್ತಿ ಯಲ್ಲಿ ಈಶ್ವರಮಂಗಲ ಸುಳ್ಯಪದವು ರಸ್ತೆ ಹಾದು ಹೋಗುತ್ತಿದ್ದು, ಬ್ರಿಟಿಷರ ಕಾಲ ದಲ್ಲಿ ಬಸ್ ವ್ಯವಸ್ಥೆ ಇದ್ದ ತಾಲ್ಲೂಕಿನ ಕೆಲವೇ ಕೆಲವು ರಸ್ತೆಗಳಲ್ಲಿ ಇದೂ ಒಂದಾಗಿತ್ತು.

ಡಾಂಬರು ಎದ್ದು ಹೋಗಿ ಸೃಷ್ಟಿಯಾಗಿರುವ ಈ ರಸ್ತೆಯ ಹೊಂಡ ಗುಂಡಿಗಳಲ್ಲಿ ಮಳೆಗಾಲದಲ್ಲಿ ಮಳೆ ನೀರು ತುಂಬಿಕೊಂಡಿದ್ದು, ರಸ್ತೆ ಯಲ್ಲೇ ನೀರು ಹರಿದು ಹೋಗುತ್ತಿರು ವುದರಿಂದ ಇದು ರಸ್ತೆ ಎಂದು ಹೇಳಲೂ ಕೂಡ ಹಿಂದೆ ಮುಂದೆ ನೋಡಬೇಕಾಗಿ ಬಂದಿದೆ.

ವಾಹನ ಚಾಲಕರು ಸರ್ಕಸ್ ನಡೆಸುತ್ತಾ ತೆರಳಬೇಕಾಗಿದ್ದು,ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಶಾಲಾ ಮಕ್ಕಳು ನರಕಯಾಚನೆ ಅನುಭವಿಸಬೇಕಾಗಿ ಬಂದಿದೆ. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಈ ಸ್ಥಿತಿ ಬಂದಿದೆ ಎಂಬುವುದು ಈ ಭಾಗದ ಜನತೆಯ ಆರೋಪ.

ಈ ರಸ್ತೆಯ ಅಭಿವೃದ್ಧಿಗೆ ಸಣ್ಣ ಮೊತ್ತದ ಅನುದಾನ ಸಾಕಾಗುವುದಿಲ್ಲ. ₹ 2 ಕೋಟಿಯಷ್ಟಾದರೂ ಅನುದಾನ ಬೇಕು ಎಂದು ಅಧಿಕಾರಿಗಳು ಹೇಳುತ್ತಿ ದ್ದಾರೆ. ಇದೇ ರಸ್ತೆಯನ್ನು ಸಂಪರ್ಕಿಸುವ ಕುಡ್ಕಾಡಿ ಪದಡ್ಕ ರಸ್ತೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅನುದಾನ ನೀಡಲಾಗಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳುತ್ತಿದ್ದಾರೆ.

ಆದರೆ ಈ ಭಾಗದ ಜನತೆ ಈ ರಸ್ತೆಯ ಅಭಿವೃದ್ಧಿಯ ವಿಚಾರದಲ್ಲಿ ಈ ಹಿಂದಿನ ಶಾಸಕರೂ, ಈಗಿನ ಶಾಸಕರೂ, ಸಂಸದರೂ  ಸೇರಿ ದಂತೆ ಯಾರೊಬ್ಬರೂ ಗಮನಹರಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ. ಸಂಬಂಧಪಟ್ಟವರು ತಕ್ಷಣ ಮೋರಿ ದುರಸ್ತಿಗೊಳಿಸಿ ರಸ್ತೆಗುಂಡಿಗಳನ್ನು ಮುಚ್ಚದಿದ್ದಲ್ಲಿ ಸಂಭವಿಸಬಹದಾದ ಎರಡನೇ ಅನಾಹುತಕ್ಕೆ ಅವರೇ ಹೊಣೆಯಾಗುತ್ತಾರೆ ಎಂಬ ಎಚ್ಚರಿ ಕೆಯನ್ನು ಸ್ಥಳೀಯರು ನೀಡುತ್ತಿದ್ದಾರೆ.

ಪುತ್ರಿಯ ಸಾವು, ತಾಯಿ ನದಿ ಪಾಲು

ಮಳೆಗಾಲದಲ್ಲಿ ಈ ಭಾಗದ ರಸ್ತೆಯಲ್ಲಿ ತೋಡಿನಂತೆ ನೀರು ಹರಿಯುವುದು ಸಾಮಾನ್ಯ. ಕೆಲವು ವರ್ಷಗಳ ಹಿಂದೆಯಷ್ಟೇ ವಿಶ್ವನಾಥ ಶೆಟ್ಟಿ ಎಂಬವರ ಪುತ್ರಿಯಾದ ನಾಲ್ಕು ವರ್ಷ ಪ್ರಾಯದ ಬಾಲಕಿಯೊಬ್ಬಳು ನೀರಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಳು. ಇದರಿಂದ ಮಾನಸಿಕವಾಗಿ ನೊಂದಿದ್ದ ಆಕೆಯ ತಾಯಿಯೂ  ಆ ಬಳಿಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

 

ಪ್ರತಿಕ್ರಿಯಿಸಿ (+)