ಭಾನುವಾರ, ಡಿಸೆಂಬರ್ 15, 2019
21 °C

ಕಾಲಮಿತಿಯಲ್ಲಿ ವಸತಿ ಯೋಜನೆ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲಮಿತಿಯಲ್ಲಿ ವಸತಿ ಯೋಜನೆ ಪೂರ್ಣ

ಕೋಲಾರ: ‘ಯಾವುದೇ ಅಧಿಕಾರಿ ಸಭೆಗೆ ತಪ್ಪು ಮಾಹಿತಿ ನೀಡಬಾರದು. ನೀವು ಹೇಳಿದ್ದನ್ನು ಕೇಳಿಕೊಂಡು ಹೋಗಲು ನಾನು ಇಲ್ಲಿಗೆ ಬಂದಿಲ್ಲ. ವಸತಿ ಯೋಜನೆ ಗುರಿಯನ್ನು ನಿಗದಿತ ಕಾಲಮಿತಿಯಲ್ಲಿ ಸಾಧಿಸಬೇಕು’ ಎಂದು ರಾಜೀವ್‌ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೌನಿಷ್ ಮೌದ್ಗಿಲ್‌ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ನಡೆದ ರಾಜೀವ್‌ಗಾಂಧಿ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ‘ಕಾರ್ಯ ನಿರ್ವಹಣಾಧಿಕಾರಿಗಳೇ (ಇ.ಒ) ಫಲಾನುಭವಿಗಳ ಮನೆಯ ಛಾಯಾಚಿತ್ರ ತೆಗೆದು ಕಳಿಸಬೇಕೆಂದು ಸೂಚಿಸಲಾಗಿತ್ತು. ಆದರೆ, ಯಾವುದೇ ಇ.ಒ ಈವರೆಗೆ ಛಾಯಾಚಿತ್ರ ಕಳಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬೇಜವಾಬ್ದಾರಿ ವರ್ತನೆ ಸರಿಯಲ್ಲ. ಇನ್ನು ಮುಂದೆ ಈ ರೀತಿ ಆಗಲು ಬಿಡುವುದಿಲ್ಲ. ಇ.ಒಗಳು ತಮ್ಮ ಮೊಬೈಲ್‌ನಲ್ಲೇ ತಿಂಗಳಿಗೆ 100 ಫಲಾನುಭವಿಗಳ ಮನೆಯ ಛಾಯಾಚಿತ್ರ ತೆಗೆದು ನಿಗಮಕ್ಕೆ ಕಳುಹಿಸಬೇಕು. ಜಿಲ್ಲೆಯ ಎಲ್ಲಾ ಇ.ಒಗಳ ಮೊಬೈಲ್ ಸಂಖ್ಯೆ ಮತ್ತು ಐಎಂಇಐ ವಿವರ ನಿಗಮದಲ್ಲಿ ದಾಖಲಾಗಿದೆ. ಇ.ಒಗಳ ಮೊಬೈಲ್‌ನಿಂದಲೇ ಮನೆ ನಿರ್ಮಾಣದ ಪ್ರಗತಿಯ ಛಾಯಾಚಿತ್ರಗಳು ಬರಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುತ್ತೇನೆ’ ಎಂದರು.

‘ಮನೆಯ ಜತೆ ಛಾಯಾಚಿತ್ರದಲ್ಲಿ ಇ.ಒಗಳು ಕಾಣಿಸಬೇಕು. ಆದ ಕಾರಣ ನಿರ್ಮಾಣ ಹಂತದ ಮನೆಯ ಮುಂದೆ ನಿಂತು ಸಿಬ್ಬಂದಿಯಿಂದ ಛಾಯಾಚಿತ್ರ ತೆಗೆಸಬೇಕು. ಇ.ಒಗಳು ಛಾಯಾಚಿತ್ರದಲ್ಲಿ ಕಾಣಿಸದಿದ್ದರೆ ಅಂತಹ ಛಾಯಾಚಿತ್ರಗಳನ್ನು ಸ್ವೀಕರಿಸುವುದಿಲ್ಲ’ ಎಂದು ತಿಳಿಸಿದರು.

ಬೇಜವಾಬ್ದಾರಿತನ ನಿಂತಿಲ್ಲ: ‘ವಸತಿ ಯೋಜನೆಯನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಬೇಕು. ಮನೆ ಇಲ್ಲದ ಬಡವರಿಗೆ ಮನೆ ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕು. 10 ತಿಂಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು. ಈ ಸಂಬಂಧ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಅಧಿಕಾರಿಗಳ ಬೇಜವಾಬ್ದಾರಿತನ ನಿಂತಿಲ್ಲ’ ಎಂದು ಕೆಂಡಾಮಂಡಲರಾದರು.

‘ಕೋಲಾರ ತಾಲ್ಲೂಕಿನಲ್ಲಿ 955 ಮನೆಗಳು, ಬಂಗಾರಪೇಟೆ 800, ಮಾಲೂರು 342 , ಮುಳಬಾಗಿಲು 653 ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 1,746 ಮನೆಗಳು ಚಾವಣಿ ಹಂತಕ್ಕೆ ಬಂದಿವೆ. ಈ ಮನೆಗಳು ಬೇಗನೆ ನಿರ್ಮಾಣವಾಗಬೇಕು. ಜತೆಗೆ ಎಲ್ಲಾ ಮನೆಗಳಿಗೂ ಜಿಪಿಎಸ್ ಮಾಡುವುದು ಕಡ್ಡಾಯ’ ಎಂದು ಹೇಳಿದರು.

‘ಸ್ವಚ್ಛ ಭಾರತ್ ಅಭಿಯಾನದ ಪ್ರಯುಕ್ತ ಗ್ರಾಮಾಂತರ ಪ್ರದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಜತೆಗೆ ಯೋಜನೆಯ ಫಲಾನುಭವಿಗಳಿಗೆ ಎರಡು ಬಾರಿ ಹಣ ಪಾವತಿಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದರು.

ಕಾರ್ಯಾದೇಶ ನೀಡಿದೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ‘ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ 2015–16ನೇ ಸಾಲಿನಲ್ಲಿ ಜಿಲ್ಲೆಗೆ 2,998 ಮನೆಗಳ ಗುರಿ ನೀಡಲಾಗಿತ್ತು. ಈಗ ಆ ಗುರಿ ಸಾಧಿಸಿದ್ದೇವೆ. ಪ್ರಸಕ್ತ ಸಾಲಿನಲ್ಲಿ ನೀಡಿರುವ ಮನೆಗಳನ್ನು ಹಂಚಿಕೆ ಮಾಡಿದ್ದು, ಕೆಲ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಾದೇಶ ನೀಡಲಾಗಿದೆ’ ಎಂದು ವಿವರಿಸಿದರು.

‘ಫಲಾನುಭವಿಗಳು ಮನೆ ನಿರ್ಮಾಣಕ್ಕೆ ಕಾರ್ಯಾದೇಶ ಪಡೆದ ನಂತರವೂ ನಿರ್ಮಾಣ ಕಾರ್ಯ ಆರಂಭಿಸದಿದ್ದರೆ ಅವರ ಹೆಸರು ರದ್ದುಪಡಿಸಿ ಬೇರೆಯವರಿಗೆ ಹಂಚಿಕೆ ಮಾಡಬೇಕು. ಕಾರ್ಯ ನಿರ್ವಹಣಾಧಿಕಾರಿಗಳು ಕಡ್ಡಾಯವಾಗಿ ಜಿಪಿಎಸ್ ಮಾಡಬೇಕು’ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ,  ಸಭೆಯಲ್ಲಿ ಪಾಲ್ಗೊಂಡಿದ್ದರು.

* * 

ಫಲಾನುಭವಿಗಳು ಮನೆಗೆ ಕಾರ್ಯಾದೇಶ ಪಡೆದ 3 ತಿಂಗಳಲ್ಲಿ ಮನೆ ನಿರ್ಮಿಸಿಕೊಳ್ಳದಿದ್ದರೆ ಪಟ್ಟಿ ರದ್ದು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದೆ

ಮೌನಿಷ್ ಮೌದ್ಗಿಲ್‌

ವ್ಯವಸ್ಥಾಪಕ ನಿರ್ದೇಶಕ, ರಾಜೀವ್‌ಗಾಂಧಿ ವಸತಿ ನಿಗಮ

 

ಪ್ರತಿಕ್ರಿಯಿಸಿ (+)